ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರತೆಗಳ ಕೂಪವಾದ ಮಠ

ಗ್ರಾಮ ಸಂಚಾರ
Last Updated 14 ಆಗಸ್ಟ್ 2013, 5:34 IST
ಅಕ್ಷರ ಗಾತ್ರ

ಸಿದ್ದಾಪುರ: ಮಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಮಠ ಎಂಬ ಗ್ರಾಮವನ್ನು ಏಕೆ ಉಪೇಕ್ಷಿಸಲಾಗಿದೆ ಎನ್ನುವುದು ಗ್ರಾಮಸ್ಥರು ಅನೇಕ ವರ್ಷಗಳಿಂದ ಕೇಳುವ ಪ್ರಶ್ನೆ.

ಹೊಂಡಮಯವಾದ ರಸ್ತೆಗಳು, ವಿಲೇವಾರಿಯಾಗದ ತ್ಯಾಜ್ಯ, ಎಲ್ಲೆಂದರಲ್ಲಿ ಬೆಳೆದಿರುವ ಪಾರ್ಥೇನಿಯಂ ಕಾಡು, ಅಪಾಯಕ್ಕೆ ಅಹ್ವಾನ ನೀಡುತ್ತಿರುವ ವಿದ್ಯುತ್ ತಂತಿಗಳು ಇಲ್ಲಿಯ ಸಮಸ್ಯೆಗಳನ್ನು ದರ್ಶಿಸುತ್ತವೆ. ಇದರೊಂದಿಗೆ ಹಾಡುಹಗಲೇ ಕಾಡಾನೆಗಳ ಉಪಟಳ. 

ಸಿದ್ದಾಪುರ ಪಟ್ಟಣದಿಂದ ಮಠ ಗ್ರಾಮ ಅನತಿ ದೂರದಲ್ಲಿದ್ದರೂ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ವ್ಯಾವಹಾರಿಕ ಮತ್ತು ಇತರೇ ಉದ್ದೇಶಗಳಿಗೆ ಸಿದ್ದಾಪುರ ಪಟ್ಟಣವನ್ನು ನೆಚ್ಚಿಕೊಂಡಿದ್ದರೂ ಗ್ರಾಮ ಪಂಚಾಯಿತಿಯಿಂದ ಆಗಬೇಕಾದ ಕೆಲಸಗಳಿಗೆ ದೂರದ ಮಾಲ್ದಾರೆಗೆ ಹೋಗಬೇಕಾದ ಪರಿಸ್ಥಿತಿಯಿದೆ.

ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್ ನಿರ್ಮಾಣವಾಗಿರುವುದನ್ನು ಹೊರತುಪಡಿಸಿದರೆ ಇತರೆ ಯಾವುದೇ ಯೋಜನೆಗಳು ಈ ಗ್ರಾಮದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸ್ಥಳೀಯ ನಿವಾಸಿ ವಕೀಲ ಹೇಮಚಂದ್ರ ದೂರುತ್ತಾರೆ.

ಈ ಗ್ರಾಮಕ್ಕೆ ಚರಂಡಿ ಹಾಗೂ ರಸ್ತೆ ಸಂಪರ್ಕ ಒದಗಿಸಲು ಸುಮಾರು 30ರಷ್ಟು ಸ್ಲ್ಯಾಬ್‌ಗಳು ಅವಶ್ಯವಿದ್ದು ಚೌಟಿಮುಟ್ಲು ಪ್ರದೇಶದಲ್ಲಿ ಸ್ಲ್ಯಾಬ್‌ಗಳನ್ನು ವಕೀಲ ಹೇಮಚಂದ್ರ ಸ್ವಂತ ಖರ್ಚಿನಿಂದ ನಿರ್ಮಿಸಿದ್ದಾರೆ. ಗ್ರಾಮ ಪಂಚಾಯಿತಿಗೆ ಅನೇಕ ಅರ್ಜಿಗಳನ್ನು ಸಲ್ಲಿಸಿ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ. ಗ್ರಾಮದಲ್ಲಿ ಎಲ್ಲೆಂದರಲ್ಲು ತ್ಯಾಜ್ಯ ರಾಶಿ ಕಾಣುತ್ತದೆ. ಕಸ ವಿಲೇವಾರಿ ಮಾಡಿರುವುದು ಇತ್ತೀಚಿನ ವರ್ಷಗಳಲ್ಲಿ ನೋಡೇ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು. ಸುಮಾರು 700ರಿಂದ 1,000 ಜನಸಂಖ್ಯೆಯಿರುವ ಈ ಗ್ರಾಮದಲ್ಲಿ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು.

ಕಾಡಾನೆ ಹಾವಳಿ ಅರಣ್ಯ ಹಾಗೂ ಕಾಫಿ ತೋಟಗಳ ನಡುವೆ ಸಂಚರಿಸುವವರಿಗೆ ದುಃಸ್ವಪ್ನವಾಗಿದೆ. ಅಲ್ಲದೇ ಸುತ್ತಲಿನ ಕಾಫಿ  ತೋಟ ಮತ್ತು ಕೃಷಿ ಭೂಮಿ ಬಟಾ ಬಯಲಾಗಿದೆ. ಒಟ್ಟಿನಲ್ಲಿ ಗ್ರಾಮ ಶಾಪಗ್ರಸ್ತವಾಗಿದೆ ಎನ್ನುವುದು ಗ್ರಾಮಸ್ಥರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT