ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಷಿಕೋತ್ಸವ ಸಂಭ್ರಮ: ನೃತ್ಯ ಸಮಾಗಮ

Last Updated 22 ಫೆಬ್ರುವರಿ 2014, 6:28 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ಗಾನಕೆ ಒಲಿಯದ ಮನಸೇ ಇಲ್ಲ. ನೃತ್ಯಕ್ಕೆ ನಲಿಯದ ಹೃದಯವೇ ಇಲ್ಲ’ ಎಂಬ ನುಡಿ ಹದಿಹರೆಯ ಮನಸುಗಳೇ ತುಂಬಿಕೊಂಡಿರುವ ಇಲ್ಲಿನ ಕಾವೇರಿ ಕಾಲೇಜಿನ ಆವರಣದಲ್ಲಿ ಈಚೆಗೆ ನಡೆದ ವಾರ್ಷಿಕೋತ್ಸವದಲ್ಲಿ ಸಾಬೀತಾಯಿತು.

‘ಹುಚ್ಚುಕೋಡಿ ಮನಸು ಅದು ಹದಿನಾರರ ವಯಸು’ ಎಂಬ ಕವಿ ಬಿ.ಆರ್. ಲಕ್ಮಣ್‌ರಾವ್‌ ಪದ್ಯದ ಸಾಲು ಅಕ್ಷರಶಃ ನಿಜವೆನಿಸಿತು. ಮೂರು ದಿನಗಳ ಹಿಂದೆಯಷ್ಟೆ ನಡೆದ ಕಾಲೇಜಿನ ವಾರ್ಷಿಕೋತ್ಸವದಲ್ಲಿ ದೇಸಿ, ಪಾಶ್ಚಿಮಾತ್ಯ ಹಾಡುಗಳ ನೃತ್ಯ ವೈಭವ ಕಣ್ಣಿಗೆ ಹಬ್ಬ ಉಂಟು ಮಾಡಿತು. ಬಣ್ಣಬಣ್ಣದ ಬಟ್ಟೆ ತೊಟ್ಟ ಯುವತಿಯರು ವಿವಿಧ ಹಾಡುಗಳಿಗೆ ಹೆಜ್ಜೆ ಹಾಕಿದರು. ಪಾಶ್ಚಿಮಾತ್ಯ ಹಾಡುಗಳಿಗೆ ಚಿಟ್ಟೆಯಂತೆ ಹಾರಾಡಿದ ಬೆಡಗಿಯರು ದೇಸಿ ಸಂಗೀತಕ್ಕೆ ನಯವಾಗಿ ನರ್ತಿಸಿದರು.

ಗ್ರಾಮೀಣ ಸೊಗಡಿನ ಜಾನಪದ ಗೀತೆಗೆ ಹೆಜ್ಜೆ ಹಾಕಿದ ಆಧುನಿಕ ಪೋಷಾಕಿನ ಬೆಡಗಿಯರು ಪಾಶ್ಚಿಮಾತ್ಯ ನೃತ್ಯದ ನಡುವೆ ಮಂದಗಮನಿಯರಂತೆ ಬಳುಕಿದರು. ಕನ್ನಡ, ಮಲೆಯಾಳ, ತಮಿಳು, ಹಿಂದಿ, ಕೊಡವ ಮುಂತಾದ ಭಾಷೆಗಳ ಹಾಡು ದೇಶದ ಐಕ್ಯತೆಯನ್ನು ಸಾರಿದವು. ಗ್ರಾಮೀಣ ಸೊಗಡಿನ ಜಾನಪಗೀತೆ ನೃತ್ಯ  ನೆಲದ ಸೊಗಡನ್ನು ಎತ್ತಿಹಿಡಿಯಿತು.

ಮತ್ತೊಂದು ಕಡೆ, ಹದಿಹರೆಯದ ಯುವಕರು ಬ್ರೇಕ್‌ಡ್ಯಾನ್ಸ್‌, ಕೋಲಾಟ, ಕೊಡವ ಹಾಡುಗಳಿಗೆ ಲಯಬದ್ಧವಾಗಿ ಕುಣಿದರು. ವೇದಿಕೆಯಲ್ಲಿ ನೃತ್ಯಪಟು­ಗಳು ನರ್ತಿಸುತ್ತಿದ್ದರೆ ಕೆಳಗೆ ಸಭಾಂಗಣದಲ್ಲಿ ಯುವಕ ಯುವತಿಯರು ನೃತ್ಯಕ್ಕೆ ಸಾಥ್‌ ನೀಡಿದರು. ನೃತ್ಯದ ಮಧ್ಯದಲ್ಲಿ ಮೂಡಿಬಂದ ಹಾಸ್ಯ, ನಾಟಕ ಮೊದಲಾದ­ವುಗಳು ಸಾಂಸ್ಕೃತಿಕ ಉತ್ಸವಕ್ಕೆ ಕಳೆತುಂಬಿದವು.

ಆರಂಭದಲ್ಲಿ ವಾರ್ಷಿಕೋತ್ಸವವನ್ನು ಅಂತರ­­­ರಾಷ್ಟ್ರೀಯ ಕ್ರೀಡಾಪಟು ಅರ್ಜುನ್‌ ದೇವಯ್ಯ ಉದ್ಘಾಟಿ­ಸಿ­ದರು. ವಿರಾಜಪೇಟೆ ವೈದ್ಯ ಹಾಗೂ ಪಕ್ಷಿತಜ್ಞ ಡಾ.ನರಸಿಂಹನ್‌ ಮುಖ್ಯ ಅತಿಥಿಯಾಗಿದ್ದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಚಿಣ್ಣಪ್ಪ, ಉಪಾಧ್ಯಕ್ಷ ಎ.ಟಿ. ಭೀಮಯ್ಯ, ಕಾರ್ಯದರ್ಶಿ ಕೆ.ಎನ್‌. ಉತ್ತಪ್ಪ, ಪ್ರಾಂಶುಪಾಲ ಪ್ರೊ.ಪೂವಣ್ಣ, ವಿದ್ಯಾರ್ಥಿ ಸಂಘದ ಸಂಚಾಲಕ ಪ್ರೊ.ವಾಸ್ತರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT