ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಪಿಎಲ್ ಕುಟುಂಬಕ್ಕೆ 10 ಕೆ.ಜಿ ಅಕ್ಕಿ

ಲಾಕ್‌ಡೌನ್ ಸಂಕಷ್ಟದಲ್ಲಿ ಜನರ ಋಣ ತೀರಿಸಲು ಸಂಕಲ್ಪ: ಶಾಸಕಿ ರೂಪಕಲಾ ಹೇಳಿಕೆ
Last Updated 20 ಮೇ 2021, 15:06 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್ ಮತ್ತು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಕೆಜಿಎಫ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರತಿ ಬಿಪಿಎಲ್ ಕುಟುಂಬದ ಮನೆ ಬಾಗಿಲಿಗೆ ತಲಾ 10 ಕೆ.ಜಿ ಅಕ್ಕಿ ತಲುಪಿಸುತ್ತೇವೆ’ ಎಂದು ಶಾಸಕಿ ಎಂ.ರೂಪಕಲಾ ತಿಳಿಸಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘30 ಸಾವಿರ ದಿನಸಿ ಕಿಟ್ ವಿತರಣೆಗೆ ಸಿದ್ಧತೆಯಾಗಿದೆ. ಆದರೆ, ಕೆಜಿಎಫ್‌ ಕ್ಷೇತ್ರದಲ್ಲಿ 56 ಸಾವಿರಕ್ಕೂ ಹೆಚ್ಚು ಬಿಪಿಎಲ್ ಪಡಿತರದಾರರಿದ್ದಾರೆ. ಆ ಎಲ್ಲಾ ಕುಟುಂಬಗಳಿಗೂ ನೆರವಾಗಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

‘ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೂ ಅಕ್ಕಿ ವಿತರಿಸುವ ಮೂಲಕ ನನಗೆ ಮತ ನೀಡಿರುವ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಬಡ ಜನರು, ರೈತರು, ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಕೋವಿಡ್ ಮತ್ತು ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ನೆರವಿಗೆ ನಿಲ್ಲುವ ಮೂಲಕ ಮನೆ ಮಗಳಾಗಿ ಕೆಲಸ ಮಾಡುತ್ತೇನೆ’ ಎಂದರು.

‘ಕೋವಿಡ್ ಮಹಾಮಾರಿ ಈಗಾಗಲೇ ಅನೇಕರನ್ನು ಬಲಿ ಪಡೆದಿದೆ. ನೂರಾರು ಕೊರೊನಾ ಸೋಂಕಿತರು ಮೃತಪಟ್ಟಿರುವುದನ್ನು ಕಂಡಿದ್ದೇವೆ. ಜನ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಜೀವ ಉಳಿಸಿಕೊಳ್ಳಲು ಮನೆಯಲ್ಲೇ ಇದ್ದು, ಸರ್ಕಾರದ ಕೋವಿಡ್‌ ಮಾರ್ಗಸೂಚಿ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು.

ಅನಾಥ ಪ್ರಜ್ಞೆ: ‘ಕೆಲ ಕುಟುಂಬಗಳಲ್ಲಿ ಕೋವಿಡ್ ಸಾವಿನಿಂದ ಅನಾಥ ಪ್ರಜ್ಞೆ ಕಾಡುತ್ತಿದೆ. ಇಂತಹ ಪ್ರಕರಣಗಳಿಂದ ಮನ ಕಲಕುತ್ತಿದೆ. ಕೋವಿಡ್ ಮೊದಲ ಅಲೆಯು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, 2ನೇ ಅಲೆಯಲ್ಲಿ ಸೋಂಕು ಹಳ್ಳಿಗಳಿಗೂ ವ್ಯಾಪಿಸಿದೆ. ಹಳ್ಳಿಗಾಡಿನ ಜನ ಜಾಗೃತರಾಗಿ ಮನೆಯಲ್ಲೇ ಇದ್ದು ಸೋಂಕಿನಿಂದ ಮುಕ್ತವಾಗಬೇಕು’ ಎಂದು ಸಲಹೆ ನೀಡಿದರು.

‘ಹಳ್ಳಿಗಳಲ್ಲಿ ಟೀ, ಬೋಂಡಾ, ತಂಬಾಕು ವಸ್ತುಗಳ ಮಾರಾಟ ಮಳಿಗೆಗಳನ್ನು ಮುಚ್ಚಿಸಬೇಕು. ಯುವಕರು, ಹಿರಿಯರು ಈ ತಾಣಗಳಲ್ಲೇ ಕುಳಿತು ಕಾಲ ಕಳೆಯುವ ಪ್ರಯತ್ನ ಮಾಡುತ್ತಾರೆ. ಇದರಿಂದ ಈ ಜಾಗಗಳು ಕೊರೊನಾ ಸೋಂಕು ಹರಡುವ ತಾಣಗಳಾಗುತ್ತಿವೆ’ ಎಂದು ಅಭಿಪ್ರಾಯಪಟ್ಟರು.

‘ಹಳ್ಳಿಗಳಲ್ಲಿ ಮಾಂಸ ಖರೀದಿಗೆ ಜನ ಮುಗಿಬೀಳದಂತೆ ಎಚ್ಚರ ವಹಿಸಬೇಕು, ಈ ಸಂಬಂಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಯಾ ಗ್ರಾಮದ ವಾಲ್‌ಮನ್‌ ಮತ್ತು ಗ್ರಾ.ಪಂ ಸದಸ್ಯರ ಸಹಕಾರ ಪಡೆದು ಜನರು ಗುಂಪು ಸೇರದಂತೆ ಜಾಗೃತಿ ಮೂಡಿಸಬೇಕು. ಹಳ್ಳಿಗಳನ್ನು ಕೋವಿಡ್ ಮುಕ್ತವಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಹೇಳಿದರು.

ಸಹಕಾರ ನೀಡಿ: ‘ಕೆಜಿಎಫ್ ನಗರದಲ್ಲಿ ನಗರಸಭಾ ಸದಸ್ಯರ ನೆರವಿನಿಂದ ಸೋಂಕು ತಡೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಸರ್ಕಾರದಿಂದ ಮಾತ್ರ ಜನರನ್ನು ಉಳಿಸಲು ಸಾಧ್ಯವಿಲ್ಲ. ಜನರ ಜೀವ ಜನರ ಕೈಯಲ್ಲೇ ಇದೆ. ಕೋವಿಡ್‌ ಸಂಕಷ್ಟದಲ್ಲಿ ರಾಜಕಾರಣ ಬೇಡ. ಮತ ನೀಡಿದ ಜನರ ರಕ್ಷಣೆಯ ಹೊಣೆಯರಿತು ಕೆಲಸ ಮಾಡುತ್ತಿದ್ದೇನೆ. ಪಕ್ಷಾತೀತವಾಗಿ ಸಹಕಾರ ನೀಡಿ’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT