ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಜಿಲ್ಲೆಯ 34 ಮಂದಿಯಿಂದ ತಬ್ಲಿಗಿ ಜಮಾತ್‌ ಸಭೆ ಸಂದರ್ಭ ದೆಹಲಿಗೆ ಭೇಟಿ

ಮೊಬೈಲ್‌ ಕರೆ ಮಾಹಿತಿ ಆಧರಿಸಿ ಪತ್ತೆ: ವೈದ್ಯಕೀಯ ಪರೀಕ್ಷೆ
Last Updated 1 ಏಪ್ರಿಲ್ 2020, 15:18 IST
ಅಕ್ಷರ ಗಾತ್ರ

ಕೋಲಾರ: ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿನ ತಬ್ಲಿಗಿ ಜಮಾತ್‌ ಕೇಂದ್ರದಲ್ಲಿ ನಡೆದ ಧಾರ್ಮಿಕ ಸಭೆ ವೇಳೆ ಜಿಲ್ಲೆಯ 34 ಮಂದಿ ದೆಹಲಿಗೆ ಹೋಗಿದ್ದ ಸಂಗತಿ ಪೊಲೀಸರ ತನಿಖೆಯಿಂದ ಬಯಲಾಗಿದೆ.

ತಬ್ಲಿಗಿ ಜಮಾತ್‌ ಕೇಂದ್ರದ ಸುತ್ತಮುತ್ತಲಿನ ಮೊಬೈಲ್‌ ಗೋಪುರಗಳ (ಟವರ್‌) ವ್ಯಾಪ್ತಿಯ ಕರೆಗಳ ಮಾಹಿತಿ ಆಧರಿಸಿ ಪೊಲೀಸರು ಜಿಲ್ಲೆಯ 34 ಮಂದಿ ಧಾರ್ಮಿಕ ಸಭೆ ಸಂದರ್ಭದಲ್ಲಿ (ಮಾರ್ಚ್‌ 13ರಿಂದ 15ರ ಅವಧಿ) ದೆಹಲಿಗೆ ಹೋಗಿದ್ದನ್ನು ಪತ್ತೆ ಹಚ್ಚಿದ್ದಾರೆ. ಈ ಪೈಕಿ 32 ಮಂದಿಯನ್ನು ಪೊಲೀಸರು ಮೊಬೈಲ್‌ ಸಂಪರ್ಕಿಸಿ ಗುರುತು ಪತ್ತೆ ಮಾಡಿದ್ದಾರೆ.

34 ಮಂದಿಯ ಪೈಕಿ 26 ಮಂದಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. 5 ಮಂದಿ ದೆಹಲಿಯಲ್ಲಿ ಮತ್ತು ಒಬ್ಬರು ಒಬ್ಬರು ಉತ್ತರ ಪ್ರದೇಶದಲ್ಲಿ ಉಳಿದುಕೊಂಡಿದ್ದಾರೆ. ಇಬ್ಬರ ಮೊಬೈಲ್‌ ಸ್ವಿಚ್ ಆಫ್‌ ಆಗಿರುವ ಕಾರಣ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. 34 ಮಂದಿಯ ಮೊಬೈಲ್‌ ಕರೆ ಮಾಹಿತಿಯಲ್ಲಿ ಇಬ್ಬರು ಪೊಲೀಸ್‌ ಅಧಿಕಾರಿಗಳ ಹಾಗೂ ಕೋಲಾರ ಎಪಿಎಂಸಿ ಆಡಳಿತ ಮಂಡಳಿ ಸದಸ್ಯರೊಬ್ಬರ ಮೊಬೈಲ್‌ ಕರೆ ವಿವರವೂ ಇದೆ.

ಜಿಲ್ಲೆಯಲ್ಲಿನ ಕೆಲವರು ಸ್ಥಳೀಯವಾಗಿ ತಮ್ಮ ಹೆಸರಿನಲ್ಲಿ ಮೊಬೈಲ್‌ ಸಿಮ್‌ಕಾರ್ಡ್‌ ಖರೀದಿಸಿ ದೆಹಲಿಯಲ್ಲಿನ ಸಂಬಂಧಿಕರಿಗೆ ಕೊಟ್ಟಿದ್ದರು. ಹೀಗಾಗಿ ತಬ್ಲೀಗ್‌ ಜಮಾತ್‌ ಕೇಂದ್ರದ ಸುತ್ತಮುತ್ತಲಿನ ಮೊಬೈಲ್‌ ಟವರ್‌ಗಳ ವ್ಯಾಪ್ತಿಯಲ್ಲಿ ಇವರ ಕರೆ ಮಾಹಿತಿ ದಾಖಲಾಗಿದೆ. ಈ ಕಾರಣಕ್ಕೆ ಇವರೆಲ್ಲರೂ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಕ್ತ ಮಾದರಿ ರವಾನೆ: ಧರ್ಮ ಪ್ರಚಾರಕ್ಕೆ ಬಂಗಾರಪೇಟೆ ತಾಲ್ಲೂಕಿನ ಭೀಮಗಾನಹಳ್ಳಿ ಮತ್ತು ಗೊಲ್ಲಹಳ್ಳಿಗೆ ಬಂದಿದ್ದ 18 ಮಂದಿಯ ಕಫ ಹಾಗೂ ರಕ್ತ ಮಾದರಿಯನ್ನು ಬುಧವಾರ ಸಂಗ್ರಹಿಸಿ ಹೆಚ್ಚಿನ ಪರಿಶೀಲನೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.

ಇವರಲ್ಲಿ 10 ಮಂದಿ ಮಹಾರಾಷ್ಟ್ರದ ಮುಂಬೈನವರು ಮತ್ತು 8 ಮಂದಿ ದೆಹಲಿಯವರು. 8 ಮಂದಿಯು ಮಾರ್ಚ್‌ 7ರಂದು ದೆಹಲಿಯ ಹಜರತ್‌ ನಿಜಾಮುದ್ದೀನ್‌ ರೈಲು ನಿಲ್ದಾಣದಿಂದ ಸಂಪರ್ಕ್‌ ಕ್ರಾಂತಿ ರೈಲಿನ ಕೋಚ್‌ ಸಂಖ್ಯೆ ಎಸ್‌–2ರಲ್ಲಿ ಪ್ರಯಾಣ ಆರಂಭಿಸಿ ಮಾರ್ಚ್‌ 9ರಂದು ಬೆಂಗಳೂರಿನ ಯಶವಂತಪುರ ನಿಲ್ದಾಣಕ್ಕೆ ಬಂದಿದ್ದರು. ನಂತರ ಬಿಎಂಸಿಟಿ ಬಸ್‌ನಲ್ಲಿ ಬೆಂಗಳೂರಿನ ಗೋರಿಪಾಳ್ಯದ ಮಸೀದಿಗೆ ತೆರಳಿ ಮಾರ್ಚ್‌ 15ರವರೆಗೆ ಅಲ್ಲಿಯೇ ಉಳಿದುಕೊಂಡಿದ್ದರು. ಬಳಿಕ ಮಾರ್ಚ್‌ 15ರಂದು ಬೆಂಗಳೂರು– ಅರಕೋಣಂ ರೈಲಿನಲ್ಲಿ ಜಿಲ್ಲೆಯ ಕಾಮಸಮುದ್ರ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿನ ಮಸೀದಿಗೆ ಭೇಟಿ ಕೊಟ್ಟು ನಂತರ ಗೊಲ್ಲಹಳ್ಳಿಯ ಮಸೀದಿಗೆ ಬಂದು ತಂಗಿದ್ದರು.

ಉಳಿದ 10 ಮಂದಿ ಫೆ.19ರಂದು ಮುಂಬೈನ್‌ ಕುರ್ಲಾ ರೈಲು ನಿಲ್ದಾಣದಿಂದ ಲೋಕಮಾನ್ಯ ತಿಲಕ್‌ ಎಕ್ಸ್‌ಪ್ರೆಸ್‌ ರೈಲಿನ ಕೋಚ್‌ ಸಂಖ್ಯೆ ಎಸ್‌–1 ಮತ್ತು ಎಸ್‌–7ರಲ್ಲಿ ಪ್ರಯಾಣಿಸಿ ಫೆ.20ರಂದು ಬೆಂಗಳೂರು ರೈಲು ನಿಲ್ದಾಣಕ್ಕೆ ಬಂದಿದ್ದರು. ಆ ನಂತರ ಬೆಂಗಳೂರಿನ ಗೋರಿಪಾಳ್ಯದ ಮಸೀದಿ, ಇಂದಿರಾನಗರದಲ್ಲಿನ ಮೆಕ್ಕಾ ಮಸೀದಿ, ಕಾವೇರಿನಗರದ ನಿಂಬ್ರಾ ಮಸೀದಿಗೆ ಭೇಟಿ ಕೊಟ್ಟಿದ್ದರು. ಮಾರ್ಚ್‌ 1ರವರೆಗೆ ಬೆಂಗಳೂರಿನಲ್ಲೇ ಉಳಿದಿದ್ದ ಇವರು ಮಾರ್ಚ್‌ 2ರಂದು ರೈಲಿನಲ್ಲಿ ಜಿಲ್ಲೆಯ ಕಾಮಸಮುದ್ರಕ್ಕೆ ಬಂದಿದ್ದರು. ಬಳಿಕ ಕಾಮಸಮುದ್ರ, ಗೊಲ್ಲಹಳ್ಳಿ, ನಡಂಪಲ್ಲಿ, ಕೊಂಗರಹಳ್ಳಿ, ತೊಪ್ಪನಹಳ್ಳಿಯ ಮಸೀದಿಗಳಿಗೆ ಭೇಟಿ ಕೊಟ್ಟಿದ್ದರು. ಅಂತಿಮವಾಗಿ ಮಾರ್ಚ್‌ 19ರಂದು ಭೀಮಗಾನಹಳ್ಳಿ ಮಸೀದಿಗೆ ಬಂದು ವಾಸ್ತವ್ಯ ಹೂಡಿದ್ದರು.

ಈ 18 ಮಂದಿ ಪೈಕಿ 8 ಜನರನ್ನು ಜಿಲ್ಲಾ ಕೇಂದ್ರದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಯ ಪ್ರತ್ಯೇಕ ನಿಗಾ ಘಟಕದಲ್ಲಿ (ಕ್ವಾರಂಟೈನ್) ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT