ಭಾನುವಾರ, ಜನವರಿ 24, 2021
17 °C
ನಿರಂತರ ಮಳೆಗೆ ನೆಲಕಚ್ಚಿದ ಬೆಳೆ: ಮಲೆನಾಡಿನ ವಾತಾವರಣ ಸೃಷ್ಟಿ

ಕೋಲಾರ: ‘ನಿವಾರ್‌’ ಪ್ರಕೋಪಕ್ಕೆ ತತ್ತರಿಸಿದ ಜಿಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನಿವಾರ್‌’ ಚಂಡಮಾರುತದ ಪ್ರಕೋಪಕ್ಕೆ ಜಿಲ್ಲೆ ತತ್ತರಿಸಿದ್ದು, ಜಿಲ್ಲೆಯಾದ್ಯಂತ ಬುಧವಾರ ಮಧ್ಯ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದೆ.

ಮೋಡಕ್ಕೆ ತೂತು ಬಿದ್ದಂತೆ ಒಂದೇ ಸಮನೆ ಮಳೆ ಸುರಿಯುತ್ತಿದ್ದು, ಜನರು ಮನೆಯಿಂದ ಹೊರ ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಶೀತ ಗಾಳಿ ಬೀಸುತ್ತಿದ್ದು, ಬಯಲುಸೀಮೆ ಜಿಲ್ಲೆಯಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ.

ಮಳೆಯ ಜತೆಗೆ ಗಾಳಿಯ ತೀವ್ರತೆ ಹೆಚ್ಚಿದ್ದು, ಹಲವೆಡೆ ಮನೆಗಳು ಕುಸಿದಿವೆ. ಗ್ರಾಮೀಣ ಭಾಗದಲ್ಲಿ ಮರಗಳು ಧರೆಗುರುಳಿದ್ದು, ಟೊಮೆಟೊ, ಬಾಳೆ, ಬೀನ್ಸ್‌ ಸೇರಿದಂತೆ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ರಾಗಿ ಬೆಳೆ ನೆಲಕ್ಕೆ ಬಾಗಿದ್ದು, ತೆನೆಗಳು ಜಮೀನಿನಲ್ಲೇ ಮೊಳಕೆಯೊಡೆಯಲಾರಂಭಿಸಿವೆ.

ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ರಾಗಿ ಬಿತ್ತನೆಯಾಗಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ‘ನಿವಾರ್‌’ ಚಂಡಮಾರುತ ದೊಡ್ಡ ಪೆಟ್ಟು ಕೊಟ್ಟಿದೆ. ಎಲ್ಲೆಡೆ ರಾಗಿ ಬೆಳೆ ಸೊಂಪಾಗಿ ಬೆಳೆದಿದ್ದು, ವಾರದ ಹಿಂದಷ್ಟೇ ಕೊಯ್ಲು ಆರಂಭವಾಗಿದೆ. ಮಳೆಯಿಂದ ರಾಗಿ ಬೆಳೆ ಕಟಾವಿಗೆ ಅಡ್ಡಿಯಾಗಿದೆ. ಮತ್ತೊಂದೆಡೆ ಕಟಾವಾಗಿರುವ ತೆನೆಗಳನ್ನು ಬಡಿಯಲು ಮಳೆಯಿಂದ ಸಮಸ್ಯೆಯಾಗಿದೆ.

ಹಲೆವೆಡೆ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದ ಜಿಲ್ಲಾ ಕೇಂದ್ರದ ರಸ್ತೆಗಳ ಚಿತ್ರಣವೇ ಬದಲಾಗಿದೆ. ರಸ್ತೆ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಗಳು ರಾಡಿಯಾಗಿವೆ. ಮಳೆಯಿಂದಾಗಿ ಚರಂಡಿಗಳು ಹಾಗೂ ಮ್ಯಾನ್‌ಹೋಲ್‌ಗಳು ಭರ್ತಿಯಾಗಿ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.

ರೈಲ್ವೆ ಕೆಳ ಸೇತುವೆ ಹಾಗೂ ತಗ್ಗು ಪ್ರದೇಶದ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ನಿಂತಿದ್ದು, ಅಕ್ಕಪಕ್ಕದ ಬಡಾವಣೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಕೆರೆಯಂತಾಗಿರುವ ರೈಲ್ವೆ ಕೆಳ ಸೇತುವೆಗಳಲ್ಲಿ ವಾಹನಗಳು ಕೆಟ್ಟು ನಿಂತು ಸಂಚಾರ ಅಸ್ತವ್ಯಸ್ತವಾಯಿತು. ವಾಹನ ಸವಾರರು ಕೆಟ್ಟು ನಿಂತ ವಾಹನಗಳನ್ನು ತಳ್ಳಿಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು.

ಬಂದ್‌ ವಾತಾವರಣ: ಮಳೆ ಕಾರಣಕ್ಕೆ ಜಿಲ್ಲೆಯಲ್ಲಿ ಗುರುವಾರ ಅಘೋಷಿತ ಬಂದ್‌ ವಾತಾವರಣ ಕಂಡುಬಂತು. ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಜನರ ಓಡಾಟ ವಿರಳವಾಗಿತ್ತು. ಮಾರುಕಟ್ಟೆ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಬಹುಪಾಲು ಅಂಗಡಿಗಳು ಇಡೀ ದಿನ ಮುಚ್ಚಿದ್ದವು. ಎಪಿಎಂಸಿಗಳಲ್ಲಿ ದಿನನಿತ್ಯದಂತೆ ವಹಿವಾಟು ನಡೆಯಲಿಲ್ಲ. ಸರ್ಕಾರಿ ಕಚೇರಿಗಳು ತೆರೆದರೂ ಜನದಟ್ಟಣೆ ಕಡಿಮೆಯಿತ್ತು.

‘ಜಿಲ್ಲೆಯಲ್ಲಿ ಶನಿವಾರದವರೆಗೆ (ನ.28) ಮೋಡ ಮುಸುಕಿದ ವಾತಾವರಣ ಇರುತ್ತದೆ. ಜತೆಗೆ ಧಾರಾಕಾರ ಮಳೆಯಾಗುತ್ತದೆ. ಶೀತ ಗಾಳಿಯ ತೀವ್ರತೆಗೆ ಚಳಿ ಪ್ರಮಾಣ ಹೆಚ್ಚಲಿದೆ’ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.