ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಚಿವರು ಭಾಗಿ: ಜ. 6ಕ್ಕೆ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ

ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಹೇಳಿಕೆ
Last Updated 2 ಜನವರಿ 2021, 14:16 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಎನ್.ವಡ್ಡಹಳ್ಳಿಯಲ್ಲಿ ಜ.6ರಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೃಷಿ ಸಚಿವರು ಮತ್ತು ನಾನು ಜ.6ರಂದು ಇಡೀ ದಿನ ಕೃಷಿ ಚಟುವಟಿಕೆಯಲ್ಲಿ ಸ್ವತ: ಭಾಗಿಯಾಗಿ ರೈತರ ಸಮಸ್ಯೆ ಹಾಗೂ ಬೇಡಿಕೆ ಆಲಿಸಿ ಪರಿಹರಿಸುವ ಪ್ರಯತ್ನ ಮಾಡುತ್ತೇವೆ. ಸುಮಾರು 4 ಸಾವಿರ ರೈತರು ಭಾಗವಹಿಸುವ ನಿರೀಕ್ಷೆಯಿದೆ’ ಎಂದು ವಿವರಿಸಿದರು.

‘ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ರೈತರಾದ ಅಶ್ವತಮ್ಮ ಹಾಗೂ ಬಾಬು ಅವರ ತಾಕಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ. ಬಳಿಕ ಮಧ್ಯಾಹ್ನ 3 ಗಂಟೆಯಿಂದ 4ರವರೆಗೆ ಗೂಗಲ್ ಮೀಟ್ ಮೂಲಕ ರೈತ ಸಂಪರ್ಕ ಕೇಂದ್ರಗಳಲ್ಲಿನ ರೈತರೊಂದಿಗೆ ಸಂವಾದ ನಡೆಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಹುಲ್ಲು ಕತ್ತರಿಸಿ ಹಸುಗಳಿಗೆ ತಿನ್ನಿಸುವುದು, ಹಾಲು ಕರೆಯುವುದು, ರೇಷ್ಮೆ ಹುಳು ಸಾಕಾಣಿಕೆ, ಹಸಿರೆಲೆ ಗೊಬ್ಬರ, ಆಲೂಗಡ್ಡೆ, ಟೊಮೆಟೊ, ಕೊತ್ತಂಬರಿ ಬೀಜ ಬಿತ್ತನೆ, ತೊಗರಿ ಕಟಾವು, ಸೊಗಡು ಅವರೆ ಕಾಯಿ ಬಿಡಿಸುವುದು ಸೇರಿದಂತೆ ಕೃಷಿ ಚಟುವಟಿಕೆ ನಿರ್ವಹಿಸಲಾಗುವುದು ಎಂದು ಹೇಳಿದರು.

‘ಜಿಲ್ಲೆಯು ಖುಷ್ಕಿ ಕೃಷಿಗೆ ಪ್ರಾಮುಖ್ಯತೆ ನೀಡಿದ ಜಿಲ್ಲೆಯಾಗಿದೆ. ರಾಗಿ, ತೊಗರಿ, ಅವರೆ, ಅಲಸಂದೆ, ನೆಲಗಡಲೆ, ಟೊಮೆಟೊ, ಮಾವು ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಮೂಲಗಳಿಲ್ಲದ ಕಾರಣ ಅಂತರ್ಜಲ ಮಟ್ಟ ಕುಸಿದಿದೆ. ಆದರೂ ಲಭ್ಯ ನೀರಿನಲ್ಲೇ ರೈತರು ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಜತೆ ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಗ್ಗಿ ಕಾರ್ಯಕ್ರಮ: ‘ರೈತರೊಂದಿಗೆ ಒಂದು ದಿನ ಕಾರ್ಯಕ್ರಮವು ಸುಗ್ಗಿ ಕಾರ್ಯಕ್ರಮವಾಗಿದೆ. ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ನಡೆದಿದೆ. ಎರಡನೇಯದಾಗಿ ಕೋಲಾರ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಕೃಷಿಯನ್ನು ಹೇಗೆ ಲಾಭದಾಯಕವಾಗಿ ಮಾಡಬಹುದು ಎಂಬ ಬಗ್ಗೆ ಕೃಷಿ ಸಚಿವರು ಮಾತನಾಡುತ್ತಾರೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

‘ಜಿಲ್ಲೆಯ ರೈತರು ಸ್ವಾಭಿಮಾನಿಗಳಾಗಿದ್ದು, ಅಂತರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಒಂದು ಬೆಳೆ ಕೈಕೊಟ್ಟರು ಮತ್ತೊಂದು ಬೆಳೆಯಲ್ಲಿ ಲಾಭ ಗಳಿಸುತ್ತಾರೆ ಎಂದು ಕೃಷಿ ಸಚಿವರು ಕೋಲಾರದ ರೈತರನ್ನು ಇತರೆ ಜಿಲ್ಲೆಗಳಲ್ಲಿ ಉದಾಹರಣೆಯಾಗಿ ನೀಡುತ್ತಿದ್ದಾರೆ’ ಎಂದರು.

‘ಕಾರ್ಯಕ್ರಮದಲ್ಲಿ ಕೃಷಿಯ ಆರೋಗ್ಯಕರ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ರೈತರ ಜತೆಗೆ ಅವರ ಮಡದಿಯರು ಎಲೆಮರೆ ಕಾಯಿಯಂತೆ ದುಡಿಯುತ್ತಾರೆ. ಆದ್ದರಿಂದ ರೈತ ಮಹಿಳೆಯರು ಸೇರಿದಂತೆ ರೈತ ದಂಪತಿಗೆ ಸನ್ಮಾನ ಮಾಡಲಾಗುವುದು. ಕೃಷಿಯನ್ನು ಹೇಗೆ ಖುಷಿಯಾಗಿ ಮಾಡುವುದು ಎಂಬುದನ್ನು ತಿಳಿಸುವುದು ಕಾರ್ಯಕ್ರಮದ ಉದ್ದೇಶ’ ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT