ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರದ ಅಪಹೃತ ಯುವತಿ ತುಮಕೂರಿನಲ್ಲಿ ಪತ್ತೆ

ಪ್ರಕರಣ ಸುಖಾಂತ್ಯ: ಆರೋಪಿ ಭಗ್ನ ಪ್ರೇಮಿ ಪರಾರಿ
Last Updated 14 ಆಗಸ್ಟ್ 2020, 15:56 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಗುರುವಾರ ಅಪಹರಣವಾಗಿದ್ದ ಯುವತಿಯನ್ನು ಪೊಲೀಸರು ತುಮಕೂರಿನಲ್ಲಿ ರಕ್ಷಿಸಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ಪ್ರಕರಣದ ಪ್ರಮುಖ ಆರೋಪಿಯಾದ ಯುವತಿಯ ಪ್ರಿಯಕರ ಹಾಗೂ ಆತನ ಸ್ನೇಹಿತರು ಪರಾರಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.

ಯುವತಿಯು ತಂಗಿಯ ಜತೆ ಗುರುವಾರ (ಆ.13) ಮಧ್ಯಾಹ್ನ ನಗರದ ಎಂ.ಬಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಪ್ರಿಯಕರನು ಸ್ನೇಹಿತರ ಜತೆ ಕಾರಿನಲ್ಲಿ ಬಂದು ಅಪಹರಣ ಮಾಡಿದ್ದ. ಈ ಘಟನಾವಳಿಯ ದೃಶ್ಯ ಸಮೀಪದ ಮಳಿಗೆಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಆರೋಪಿ ಹಾಗೂ ಆತನ ಇಬ್ಬರು ಸ್ನೇಹಿತರು ಯುವತಿಯನ್ನು ತುಮಕೂರಿಗೆ ಎಳೆದೊಯ್ದು ಗುರುವಾರ ರಾತ್ರಿಯಿಡೀ ಲಾಡ್ಜ್‌ವೊಂದರ ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಶುಕ್ರವಾರ ನಸುಕಿನಲ್ಲಿ ಆರೋಪಿಗಳು ಗಾಢ ನಿದ್ದೆಯಲ್ಲಿದ್ದಾಗ ಯುವತಿಯು ಕೊಠಡಿಯಿಂದ ತಪ್ಪಿಸಿಕೊಂಡು ಹೊರ ಬಂದು ಸಮೀಪದ ಅಂಗಡಿಯ ಕೆಲಸಗಾರರ ಮೊಬೈಲ್‌ನಿಂದ ತನ್ನ ತಂದೆಗೆ ಕರೆ ಮಾಡಿ ತುಮಕೂರಿನಲ್ಲಿ ಇರುವುದಾಗಿ ತಿಳಿಸಿದ್ದರು.

ಬಳಿಕ ಯುವತಿಯ ತಂದೆ ನಗರದ ಗಲ್‌ಪೇಟೆ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಗಲ್‌ಪೇಟೆ ಪೊಲೀಸರು ತುಮಕೂರು ಜಿಲ್ಲಾ ಪೊಲೀಸರನ್ನು ಸಂಪರ್ಕಿಸಿ ಯುವತಿಯ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ತುಮಕೂರು ಪೊಲೀಸರು ಲಾಡ್ಜ್‌ನ ಬಳಿ ಹೋದಾಗ ಯುವತಿಯ ಹುಡುಕಾಟದಲ್ಲಿದ್ದ ಆರೋಪಿಗಳು ಗಾಬರಿಯಾಗಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ.

ಪೊಲೀಸರು ಕಾರನ್ನು ಬೆನ್ನಟ್ಟಿ ಅಡ್ಡಗಟ್ಟಿದಾಗ ಆರೋಪಿಗಳು ವಾಹನದಿಂದ ಕೆಳಗಿಳಿದು ಸಮೀಪದ ಕೆರೆಯಂಗಳಕ್ಕೆ ಓಡಿ ತಪ್ಪಿಸಿಕೊಂಡಿದ್ದಾರೆ. ಆ ನಂತರ ತುಮಕೂರು ತಲುಪಿದ ಕೋಲಾರ ನಗರ ಠಾಣೆ ಎಸ್‍ಐ ಅಣ್ಣಯ್ಯ ನೇತೃತ್ವದ ತಂಡವು ಯುವತಿಯನ್ನು ಸುರಕ್ಷಿತವಾಗಿ ನಗರಕ್ಕೆ ಕರೆತಂದು ಪೋಷಕರಿಗೆ ಒಪ್ಪಿಸಿದೆ.

ಪ್ರೀತಿಸಿಲ್ಲ: ಪೊಲೀಸರ ವಿಚಾರಣೆ ವೇಳೆ ಯುವತಿಯು, ‘ನಾನು ಯಾರನ್ನೂ ಪ್ರೀತಿಸುತ್ತಿಲ್ಲ. ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಶಿವು ತನ್ನನ್ನು ಪ್ರೀತಿಸುವಂತೆ ಹಲವು ತಿಂಗಳಿಂದ ಕಿರುಕುಳ ನೀಡುತ್ತಿದ್ದ. ಜತೆಗೆ ಮದುವೆ ಮಾಡಿಕೊಳ್ಳುವಂತೆಯೂ ಪೀಡಿಸುತ್ತಿದ್ದ. ಆದರೆ, ನಾನು ಆತನ ಪ್ರೀತಿ ನಿರಾಕರಿಸಿದ್ದೆ’ ಎಂದು ಹೇಳಿಕೆ ನೀಡಿದ್ದಾರೆ.

‘ತಂಗಿಯ ಜತೆ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಶಿವು ಸ್ನೇಹಿತರ ಜತೆ ಕಾರಿನಲ್ಲಿ ಬಂದು ನನ್ನನ್ನು ಅಪಹರಿಸಿ ತುಮಕೂರಿಗೆ ಎಳೆದೊಯ್ದಿದ್ದ. ಘಟನೆಯಿಂದ ನಾನು ಸಾಕಷ್ಟು ಆಘಾತಗೊಂಡಿದ್ದೇನೆ’ ಎಂದು ಯುವತಿಯು ಪೊಲೀಸರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT