ಮಂಗಳವಾರ, ಜುಲೈ 27, 2021
20 °C
ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಜಿಲ್ಲಾಧಿಕಾರಿ ಸತ್ಯಭಾಮ ಸೂಚನೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಸವಾಲಾಗಿ ಸ್ವೀಕರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್-19ರ ಸಂದಿಗ್ಧ ಪರಿಸ್ಥಿತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ. ಗೊಂದಲಕ್ಕೆ ಅವಕಾಶವಿಲ್ಲದಂತೆ ಗುಣಾತ್ಮಕತೆಗೆ ಒತ್ತು ನೀಡಿ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸೂಚಿಸಿದರು.

ಇಲ್ಲಿ ಶನಿವಾರ ನಡೆದ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಸಭೆಯಲ್ಲಿ ಮಾತನಾಡಿ, ‘ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಸಮರ್ಪಕವಾಗಿ ನಡೆಸಿದರೂ ಅಂತರ ಕಾಪಾಡುವಲ್ಲಿ ವಿಫಲವಾದ ಬಗ್ಗೆ ವಿಷಾದವಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಈ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಿ’ ಎಂದು ತಾಕೀತು ಮಾಡಿದರು.

‘ಮಕ್ಕಳ ಆರೋಗ್ಯ ಮುಖ್ಯ. ಸರ್ಕಾರ ಸಿದ್ಧಪಡಿಸಿರುವ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ. ಸ್ಪರ್ಧಾತ್ಮಕ ಪರೀಕ್ಷೆಗೆ ಕೋಲಾರ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬಾರದೆಂದು ಕೆಲವರು ಹೇಳುತ್ತಿದ್ದರೂ ಮಕ್ಕಳ ಕೌಶಲ ತಿಳಿಯಲು ಪರೀಕ್ಷೆ ಅಗತ್ಯ ಎಂದು ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಇದನ್ನು ಕಾರ್ಯಗತ ಮಾಡೋಣ’ ಎಂದು ಕಿವಿಮಾತು ಹೇಳಿದರು.

‘ಕೋಲಾರ ರೋಟರಿ ಮತ್ತು ರೋಟರಿ ಸೆಂಟ್ರಲ್ ಸಂಸ್ಥೆಯು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಜಿಲ್ಲೆಯ ಮಕ್ಕಳಿಗೆ ಗುಣಮಟ್ಟದ ಮಾಸ್ಕ್ ನೀಡಿವೆ. ಈ ಸಂಸ್ಥೆಗಳ ಸಾಮಾಜಿಕ ಕಾಳಜಿ ಮತ್ತು ಸಾಕ್ಷರತೆ ಕುರಿತ ಮನಸ್ಥಿತಿ ಮೆಚ್ಚುವಂತದ್ದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಕ್ಷರತೆಗೆ ಒತ್ತು: ‘ಸಂಸ್ಥೆಯು ಸಾಕ್ಷರತೆಗೆ ಒತ್ತು ನೀಡುತ್ತಿದೆ. ಜಿಲ್ಲೆಯಿಂದಲೇ ನಮ್ಮ ಯೋಜನೆಗಳು ಕಾರ್ಯಗತಗೊಳ್ಳುತ್ತಿದ್ದು, ಹ್ಯಾಪಿ ಸ್ಕೂಲ್ಸ್ ಯೋಜನೆ ಯಶಸ್ವಿಯಾಗಿದೆ. ಕೋವಿಡ್–19 ಸಂಕಷ್ಟದಿಂದ ಮಕ್ಕಳನ್ನು ರಕ್ಷಿಸಲು ಸಂಸ್ಥೆಯು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿದೆ’ ಎಂದು ರೋಟರಿ 3190 ಜಿಲ್ಲೆಯ ಸಾಕ್ಷರತಾ ಸಮಿತಿ ಅಧ್ಯಕ್ಷ ಗುರುನಾಗೇಶ್ ವಿವರಿಸಿದರು.

‘ಸಂಸ್ಥೆಯು ಸಾಮಾಜಿಕ ಕಾಳಜಿಗೆ ಹೆಸರಾಗಿದ್ದು, 3190 ರೋಟರಿ ಜಿಲ್ಲೆ ವ್ಯಾಪ್ತಿಯ ಜಿಲ್ಲೆಗಳ ಮಕ್ಕಳಿಗೆ 2.50 ಲಕ್ಷ ಮಾಸ್ಕ್ ವಿತರಿಸುತ್ತಿದೆ. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಯಲ್ಲೂ ಮುಖ್ಯ ಪಾತ್ರ ವಹಿಸಿದೆ’ ಎಂದು ರೋಟರಿ ಸಂಸ್ಥೆ ಉಪ ಗವರ್ನರ್ ಅ.ಮು.ಲಕ್ಷ್ಮೀನಾರಾಯಣ ಎಂದು ಹೇಳಿದರು.

ಥರ್ಮಲ್ ಸ್ಕ್ರೀನಿಂಗ್‌: ‘ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಬೆಳಿಗ್ಗೆ 7-.30ಕ್ಕೆ ಕೇಂದ್ರದಲ್ಲಿ ಹಾಜರಿದ್ದು, ಬರುವ ವಿದ್ಯಾರ್ಥಿಯನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಬೇಕು. ಗುಂಪುಗೂಡಲು ಅವಕಾಶ ನೀಡಬಾರದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ತಿಳಿಸಿದರು.

ಎಸ್‌ಡಿಎಸ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಉಷಾ ಗಂಗಾಧರ್, ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.