ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಮಾಸ್ಕ್ ಧರಿಸದಿದ್ದರೆ ಪ್ರವೇಶ ನಿರ್ಬಂಧ

Last Updated 20 ಏಪ್ರಿಲ್ 2021, 17:18 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್ 2ನೇ ಅಲೆ ಭೀಕರವಾಗಿದ್ದು, ಮಾರುಕಟ್ಟೆಗೆ ಬರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಸುರಕ್ಷತಾ ಮಾರ್ಗಸೂಚಿ ಪಾಲಿಸಬೇಕು. ಇಲ್ಲವಾದರೆ ದಂಡ ಹಾಕಿ ಮಾರುಕಟ್ಟೆಯಿಂದ ಹೊರಗೆ ಕಳುಹಿಸುತ್ತೇವೆ’ ಎಂದು ನಗರದ ಎಪಿಎಂಸಿ ಮಾರಾಟ ಸಹಾಯಕ ಎಂ.ಮುನಿರಾಜು ಎಚ್ಚರಿಕೆ ನೀಡಿದರು.

ಇಲ್ಲಿನ ಎಪಿಎಂಸಿಯಲ್ಲಿ ಮಂಗಳವಾರ ರೈತರು, ವರ್ತಕರು, ಕೂಲಿ ಕಾರ್ಮಿಕರು ಹಾಗೂ ಲಾರಿ ಚಾಲಕರಿಗೆ ಧ್ವನಿವರ್ಧಕದ ಮೂಲಕ ಕೋವಿಡ್ ಜಾಗೃತಿ ಮೂಡಿಸಿ ಮಾತನಾಡಿ, ‘ಮಾರುಕಟ್ಟೆಗೆ ಬರುವವರು ಮಾಸ್ಕ್ ಧರಿಸಬೇಕು. ಜತೆಗೆ ಅಂತರ ಕಾಯ್ದುಕೊಳ್ಳಬೇಕು’ ಎಂದು ತಿಳಿಸಿದರು.

‘ಹೊರ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಿದೆ. ಹೊರ ಜಿಲ್ಲೆ, ರಾಜ್ಯಗಳಿಂದ ಪ್ರತಿನಿತ್ಯ ಮಾರುಕಟ್ಟೆಗೆ ಬರುವ ಲಾರಿ ಚಾಲಕರಿಗೆ ಸೋಂಕು ತಗುಲಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆಯಲ್ಲಿ ನಿರ್ಲಕ್ಷ್ಯ ತೋರಬಾರದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಕೊರೊನಾ ಸೋಂಕು ಉಲ್ಬಣಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಮಂಡಿ ವರ್ತಕರು ಕೋವಿಡ್‌ ಮಾರ್ಗಸೂಚಿ ಪಾಲನೆ ಬಗ್ಗೆ ವ್ಯಾಪಾರಿಗಳು, ಕಾರ್ಮಿಕರಿಗೆ ಅರಿವು ಮೂಡಿಸಿ’ ಎಂದು ಕಿವಿಮಾತು ಹೇಳಿದರು.

‘ಕೋವಿಡ್ ನಿಯಂತ್ರಣಕ್ಕಾಗಿ ಎಪಿಎಂಸಿ ತರುತ್ತಿರುವ ಕಠಿಣ ನಿಯಮಗಳಿಗೆ ರೈತರು, ಕಾರ್ಮಿಕರು, ವರ್ತಕರು ಸಹಕರಿಸಬೇಕು. ಮಾರುಕಟ್ಟೆಯ ಪ್ರತಿ ಮಂಡಿಯಲ್ಲಿ ಸ್ಯಾನಿಟೈಸರ್‌ ಇಡಬೇಕು. ಕೂಲಿಯನ್ನೇ ನಂಬಿ ಜೀವನ ನಡೆಸುತ್ತಿರುವ ಕಾರ್ಮಿಕರ ಜೀವ ಅಮೂಲ್ಯ. ಅವರ ಸುರಕ್ಷತೆಗೆ ಒತ್ತು ನೀಡಿ’ ಎಂದರು.

ಮಾಸ್ಕ್ ಧರಿಸದೆ ಕೆಲಸಕ್ಕೆ ಬಂದಿದ್ದ ಹಲವು ಕಾರ್ಮಿಕರನ್ನು ಮಾರುಕಟ್ಟೆಯಿಂದ ಹೊರಗೆ ಕಳುಹಿಸಲಾಯಿತು. ಎಪಿಎಂಸಿಯ ವಿಶ್ವನಾಥ್, ಶ್ರೀನಿವಾಸ್, ವಿಜಯಲಕ್ಷ್ಮಿ, ಭದ್ರತಾ ಸಿಬ್ಬಂದಿ ಲೋಕೇಶ್, ಶಿವಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT