ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಶಿಸ್ತಿನಿಂದ ಕಲಿಕೆಯಲ್ಲಿ ಸಾಧನೆ

Last Updated 16 ಫೆಬ್ರುವರಿ 2020, 15:09 IST
ಅಕ್ಷರ ಗಾತ್ರ

ಕೋಲಾರ: ‘ವಿದ್ಯಾರ್ಥಿಗಳು ಸ್ವಯಂ ಶಿಸ್ತು ಬೆಳೆಸಿಕೊಳ್ಳುವ ಮೂಲಕ ಕಲಿಕೆಯಲ್ಲಿ ಸಾಧನೆ ಮಾಡಬೇಕು’ ಎಂದು ತಾಲ್ಲೂಕಿನ ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲ ಸಿ.ಎನ್.ಪ್ರದೀಪ್‌ಕುಮಾರ್‌ ಕಿವಿಮಾತು ಹೇಳಿದರು.

ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಶನಿವಾರ ನಡೆದ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ವಿದ್ಯಾರ್ಥಿಗಳು ಈಗ ಶ್ರದ್ಧೆಯಿಂದ ಕಷ್ಟಪಟ್ಟು ಓದಿದರೆ ಇಡೀ ಜೀವನ ಸುಖಮಯವಾಗಿರುತ್ತದೆ. ಸೋಮಾರಿಗಳಾದರೆ ಇಡೀ ಜೀವನ ಕಷ್ಟವಾಗುತ್ತದೆ’ ಎಂದು ತಿಳಿಸಿದರು.

‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಗಮನವನ್ನು ಕಲಿಕೆಯತ್ತ ಕೇಂದ್ರೀಕರಿಸಬೇಕು. ಅಂತಿಮ ಪರೀಕ್ಷೆ ಸಮೀಪಿಸುತ್ತಿದ್ದು, ಕಲಿಕೆಯತ್ತ ಈಗ ತೋರುವ ಶ್ರದ್ಧೆ ಬದುಕನ್ನೇ ಬದಲಿಸುತ್ತದೆ. ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದು, ಪಠ್ಯವಿಷಯಕ್ಕೆ ಸಂಬಂಧಿಸಿದ ಗೊಂದಲ ಪರಿಹರಿಸಿಕೊಳ್ಳಿ. ಪಠ್ಯದ ಸಂಬಂಧ ಯಾವುದೇ ಅನುಮಾನವಿದ್ದರೆ ಶಿಕ್ಷಕರೊಂದಿಗೆ ಮುಕ್ತವಾಗಿ ಚರ್ಚಿಸಿ ಉತ್ತರ ಪಡೆದುಕೊಳ್ಳಿ’ ಎಂದು ಸಲಹೆ ನೀಡಿದರು.

‘ಗೆಲ್ಲುವ ಗುರಿಯಿದ್ದರೆ ಸಾಲದು. ಅದರೊಂದಿಗೆ ಛಲ, ಆಸಕ್ತಿ, ಶ್ರದ್ಧೆಯೂ ಇರಬೇಕು. ಮೊಬೈಲ್‌ ಬಳಕೆ ಮತ್ತು ಟಿ.ವಿ ನೋಡುವುದನ್ನು ಬಿಟ್ಟು ಓದಿಗೆ ಸಂಪೂರ್ಣ ಸಮಯ ಮೀಸಲಿಡಬೇಕು. ಓದಿದ ವಿಷಯವನ್ನು ಬರೆದು ಅಭ್ಯಾಸ ಮಾಡಬೇಕು. ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.

ಕ್ರೀಡೆಗಳಲ್ಲಿ ಸಾಧನೆ ಮಾಡಿದ ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವರ್ಗಾವಣೆಗೊಂಡ ಶಿಕ್ಷಕರಾದ ಸಿ.ವಿ.ಪಲ್ಲವಿ, ಎಂ.ಸಿ.ಗಂಗರಾಜ್, ಕೆ.ಗಂಗಪ್ಪ, ಎನ್.ಭಾಗ್ಯಮ್ಮ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ವಿ.ಜಿ.ಮುನಿರಾಜ್, ಕೋಮಲಾ, ಸುಮಂಗಲಾ, ಪಿ.ಜಯಂತಿ, ಬಿ.ಜಯಂತಿ, ಭಾಗ್ಯಲಕ್ಷ್ಮಿ, ಅನುರಾಧಾ, ಭಾರತಿ, ಸುರೇಶ್, ಮೋಹನ್, ವೇದವತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT