ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪೌಷ್ಟಿಕತೆ ನಿವಾರಣೆಗೆ ಕ್ರಮ

Last Updated 21 ಸೆಪ್ಟೆಂಬರ್ 2022, 5:28 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ‘ಗರ್ಭಿಣಿ ಮತ್ತು ಬಾಣಂತಿಯರ ಅಪೌಷ್ಟಿಕತೆ ಸಮಸ್ಯೆ ನಿವಾರಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಹಿರಿದು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವಲ್ಲಿಯೂ ಅವರ ಪಾತ್ರವಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ.ಸಿ. ವಿಜಯ ಹೇಳಿದರು.

ಪಟ್ಟಣದ ರಂಗಾ ರಸ್ತೆಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯಿಂದ ಸೋಮವಾರ ಏರ್ಪಡಿಸಿದ್ದ ಪೋಷಣ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೋಷಣ ಅಭಿಯಾನವು ಒಂದು ತಿಂಗಳಿಗೆ ಸೀಮಿತಗೊಳ್ಳಬಾರದು. ಗರ್ಭಿಣಿ, ಮಕ್ಕಳು ಹಾಗೂ ಬಾಣಂತಿಯರ ಆರೋಗ್ಯ ರಕ್ಷಣೆಯು ಅಂಗನವಾಡಿ ಕಾರ್ಯಕರ್ತೆಯರ ಹೊಣೆಯಾಗಿದೆ ಎಂದು ಹೇಳಿದರು.

ಅಪೌಷ್ಟಿಕತೆ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಪೌಷ್ಟಿಕ ಆಹಾರ ಸೇವಿಸಬೇಕಾದ ಅಗತ್ಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ತಾಯಿ ಕಾರ್ಡ್‌ನಲ್ಲಿ ಇರುವಂತೆ ಕಾಲಕಾಲಕ್ಕೆ ಸರಿಯಾಗಿ ರೋಗ ನಿರೋಧಕ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಸಬೇಕು. ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.

ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಆದಿಲಕ್ಷ್ಮಮ್ಮ ಮಾತನಾಡಿ, ಗರ್ಭಿಣಿಯರು ಉತ್ತಮ ಪೋಷಕಾಂಶವುಳ್ಳ ಆಹಾರ ಸೇವನೆ ಮಾಡುವುದರಿಂದ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು. ಪ್ರತಿ ತರಕಾರಿಯಲ್ಲೂ ಪೋಷಕಾಂಶಗಳು ಇರುತ್ತವೆ. ಹಾಗಾಗಿ, ಸೊಪ್ಪು ಹಾಗೂ ತರಕಾರಿ ಸೇವಿಸುವುದು ಉತ್ತಮ ಎಂದು ಹೇಳಿದರು.

ಗರ್ಣಿಣಿಯರಿಗೆ ಪೋಷಣ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಸೀಮಂತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನವೀನ್ ಕುಮಾರ್, ಹಿರಿಯ ಮೇಲ್ವಿಚಾರಕಿ ಶರಣಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ನಾಗಮಣಿ, ಬಾಲವಿಕಾಸ ಸಲಹಾ ಸಮಿತಿ ಸದಸ್ಯರಾದ ಅನ್ನಪೂರ್ಣಮ್ಮ, ರಾಜೇಶ್ವರಮ್ಮ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT