ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಿ

ರೈತರಿಗೆ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಕಿವಿಮಾತು\
Last Updated 15 ಜುಲೈ 2021, 8:35 IST
ಅಕ್ಷರ ಗಾತ್ರ

ಕೋಲಾರ: ‘ನಿಂಬೆಯು ವಾಣಿಜ್ಯ ಬೆಳೆಯಾಗಿದ್ದು, ಜಿಲ್ಲೆಯ ರೈತರು ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಹೊಸ ಬೆಳೆಗಳನ್ನು ಬೆಳೆಯಬೇಕು’ ಎಂದು ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಕಿವಿಮಾತು ಹೇಳಿದರು.

ಇಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯ ರೈತರು ಮಾವು, ಟೊಮೆಟೊ ಜತೆಗೆ ನಿಂಬೆ ಬೆಳೆ ಬೆಳೆದು ಹೊರ ಜಿಲ್ಲೆ, ರಾಜ್ಯಗಳಿಗೆ ರಫ್ತು ಮಾಡಿ ಆದಾಯ ದ್ವಿಗುಣಗೊಳಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘2017ರಲ್ಲಿ ನಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಯಿತು. ರಾಜ್ಯದಲ್ಲಿ ಸುಮಾರು 21 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ನಿಂಬೆ ಬೆಳೆಯಿದೆ. ಶೇ 95ರಷ್ಟು ರೈತರು ಸಾವಯುವ ಪದ್ಧತಿಯಲ್ಲಿ ನಿಂಬೆ ಬೆಳೆಯತ್ತಿದ್ದಾರೆ. ಜಿಲ್ಲೆಯಲ್ಲಿ ನಿಂಬೆ ಬೆಳೆಯುವ ರೈತರಿಗೆ ಸೂಕ್ತ ಮಾರ್ಗದರ್ಶನ ಹಾಗೂ ರೈತ ಉತ್ಪಾದನೆ ಕೇಂದ್ರಗಳ ಸಂಪರ್ಕ ಕಲ್ಪಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ರೈತರಿಗೆ ಹೊಸ ಬೆಳೆ ಬೆಳೆಯಲು ಮಾರ್ಗದರ್ಶನ ನೀಡಲು ಉತ್ತಮ ವಿಜ್ಞಾನಿಗಳಿದ್ದಾರೆ. ನೊಂದು ಬಂದ ರೈತರಿಗೆ ಆತ್ಮವಿಶ್ವಾಸ ತುಂಬಿ ಆದಾಯ ಹೆಚ್ಚಾಗುವಂತಹ ನೂತನ ಬೆಳೆಗಳನ್ನು ಬೆಳೆಯಲು ಅಧಿಕಾರಿಗಳು ಪ್ರೋತ್ಸಾಹ ನೀಡಬೇಕು’ ಎಂದು ಸೂಚಿಸಿದರು.

ಮಾವು ಪ್ರಧಾನ ಬೆಳೆ: ‘ಜಿಲ್ಲೆಯಲ್ಲಿ ರೈತರು ಸುಮಾರು 1.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. 55 ಹೆಕ್ಟೇರ್‌ನಲ್ಲಿ ನಿಂಬೆ ಮತ್ತು 49 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. 33 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತರಕಾರಿ ಬೆಳೆಗಳಿವೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಮಾಹಿತಿ ನೀಡಿದರು.

‘ಜಿಲ್ಲೆಯ ರೈತರು ಮುಖ್ಯವಾಗಿ ಟೊಮೆಟೊ ಹೆಚ್ಚಾಗಿ ಬೆಳೆಯುತ್ತಿದ್ದಾರೆ. 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೂ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬೆಳೆ ಸಮೀಕ್ಷೆ ಆ್ಯಪ್‌ ಮೂಲಕ ಸಂಪೂರ್ಣ ಮಾಹಿತಿ ದೊರೆಯುತ್ತಿದೆ. ಜಿಲ್ಲೆಯಲ್ಲಿ ಮಾವು ಪ್ರಧಾನ ಬೆಳೆಯಾಗಿದೆ. ರೈತರು 11 ವಿಧದ ಮಾವಿನ ಹಣ್ಣು ಬೆಳೆಯುತ್ತಿದ್ದಾರೆ. ಸುಮಾರು 170 ರೈತರು ಅಂತರ್ಜಾಲದ ಮೂಲಕ ವಹಿವಾಟು ನಡೆಸುತ್ತಿದ್ದಾರೆ’ ಎಂದು ವಿವರಿಸಿದರು.

‘2011ರಲ್ಲಿ ಮಾವು ಅಭಿವೃದ್ಧಿ ಮಂಡಳಿ ಸ್ಥಾಪನೆಯಾಯಿತು. ಮಂಡಳಿಯು ತುಂಬಾ ಕ್ರಿಯಾಶೀಲವಾಗಿದೆ. ಜಿಲ್ಲೆಯಲ್ಲಿ 5 ರೈತ ಉತ್ಪಾದನಾ ಕೇಂದ್ರಗಳಿದ್ದು, 4 ತಾಲ್ಲೂಕುಗಳಲ್ಲಿ ಸದೃಢತೆಯಿಂದ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ರೈತರಿಗೆ ತುಂಬಾ ಅನುಕೂಲವಾಗುತ್ತಿದೆ’ ಎಂದು ತಿಳಿಸಿದರು.

ರೈತರಿಗೆ ಉತ್ತೇಜನ: ‘ಮಾವು, ಟೊಮೆಟೊ ಜತೆಗೆ ಬೇರೆ ವಿಧದ ಬೆಳೆ ಬೆಳೆಯಲು ರೈತರಿಗೆ ಉತ್ತೇಜನ ನೀಡಲಾಗುತ್ತಿದೆ. ಸೀತಾಫಲ, ಹುಣಸೆ, ನುಗ್ಗೆ, ಗೋಡಂಬಿ ಹಾಗೂ ನಿಂಬೆ ಬೆಳೆಯುವುದರ ಬಗ್ಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ’ ಎಂದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಸ್‌.ಎ.ರವಿಕುಮಾರ್, ಬಂಗಾರಪೇಟೆ ಹಿರಿಯ ಸಹಾಯಕ ನಿರ್ದೇಶಕ ಶಿವರೆಡ್ಡಿ ಹಾಗೂ ರೈತರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT