ಶುಕ್ರವಾರ, ಮೇ 20, 2022
24 °C
ಪ್ಲಾಸ್ಟಿಕ್‌ ತಟ್ಟೆ–ಲೋಟದಿಂದ ಆರೋಗ್ಯ ಹಾಳು: ಕುಂಬಾರ ಮುಖಂಡ ನಾಗರಾಜ್ ಹೇಳಿಕೆ

ಮಣ್ಣಿನ ಕುಡಿಕೆ ಬಳಕೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮನೆಗಳಲ್ಲಿ ಕಾಫಿ, ಚಹಾ ಸೇವನೆಗೆ ಮಣ್ಣಿನ ಕುಡಿಕೆ ಬಳಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಕುಂಬಾರ ಸಮುದಾಯದ ಮುಖಂಡ ಕೆ.ನಾಗರಾಜ್ ಕಿವಿಮಾತು ಹೇಳಿದರು.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಕುಂಬಾರ ವೃತ್ತಿಪರರಿಗೆ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ಕಾಫಿ, ಚಹಾ ಅಥವಾ ಆಹಾರ ಪದಾರ್ಥಗಳ ಸೇವನೆಗೆ ಪ್ಲಾಸ್ಟಿಕ್‌ ಲೋಟ ಅಥವಾ ತಟ್ಟೆ ಬಳಸಿದರೆ ಆರೋಗ್ಯ ಕೆಡುತ್ತದೆ’ ಎಂದರು.

‘ಪ್ಲಾಸ್ಟಿಕ್‌ ಹಾಗೂ ಗಾಜಿನಿಂದ ತಯಾರಿಸಿದ ಲೋಟ, ತಟ್ಟೆಗಳಲ್ಲಿ ವಿಷಕಾರಿ ರಾಸಾಯನಿಕ ಅಂಶವಿರುತ್ತದೆ. ಈ ಅಂಶವು ನಮಗೆ ಗೊತ್ತಿಲ್ಲದೆ ಊಟದ ಜತೆ ದೇಹ ಸೇರಿ ಆರೋಗ್ಯ ಕೆಡಿಸುತ್ತದೆ. ಪೂರ್ವಜರು ಮಣ್ಣಿನಿಂದ ಮಾಡಿದ ಮಡಿಕೆ, ಕುಡಿಕೆಗಳನ್ನೇ ಪಾತ್ರೆಗಳಾಗಿ ಬಳಸಿ ಆರೋಗ್ಯವಂತರಾಗಿರುತ್ತಿದ್ದರು. ಮಡಿಕೆ, ಕುಡಿಕೆ ಬಳಸುವ ಮೂಲಕ ಕುಂಬಾರಿಕೆ ವೃತ್ತಿ ಉತ್ತೇಜಿಸಬೇಕು’ ಎಂದು ಸಲಹೆ ನೀಡಿದರು.

‘ವಿದ್ಯಾವಂತ ಯುವಕರು ಲಾಕ್‌ಡೌನ್‌ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡು ನಗರ ಮತ್ತು ಪಟ್ಟಣ ಪ್ರದೇಶದಿಂದ ಗ್ರಾಮಗಳಿಗೆ ಹಿಂದಿರುಗಿದ್ದಾರೆ. ಸದ್ಯ ನಿರುದ್ಯೋಗಿಗಳಾಗಿರುವ ಈ ವಿದ್ಯಾವಂತರು ಸ್ವಉದ್ಯೋಗದತ್ತ ಆಸಕ್ತಿ ಹೊಂದಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುಂಬಾರ ಸಮುದಾಯದವರು ಗುಡಿ ಕೈಗಾರಿಕೆ ಮೂಲಕ ಹೆಚ್ಚಿನ ಉದ್ಯೋಗ ನೀಡಬೇಕು’ ಎಂದರು.

‘ಕುಂಬಾರಿಕೆ ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ರೈಲು ನಿಲ್ದಾಣಗಳಲ್ಲಿ ಮಣ್ಣಿನ ಕುಡಿಕೆಗಳಲ್ಲಿ ಕಾಫಿ, ಟೀ ನೀಡಲು ನಿರ್ಧರಿಸಿದೆ. ಅದೇ ರೀತಿ ಕುಂಬಾರಿಕೆ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು. ಕುಂಬಾರ ಸಮುದಾಯದವರು ಮಡಿಕೆ ಜತೆಗೆ ಅಗರಬತ್ತಿ, ಬೊಂಬೆ ತಯಾರಿಸಲು ಸರ್ಕಾರ ಹೆಚ್ಚಿನ ಸೌಲಭ್ಯ ನೀಡಬೇಕು’ ಎಂದು ಮನವಿ ಮಾಡಿದರು.

ಮುಖ್ಯವಾಹಿನಿಗೆ ಬರಬೇಕು: ‘ಕುಂಬಾರ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆ ರೂಪಿಸಿದೆ. ಸಮುದಾಯದವರು ಈ ಯೋಜನೆಗಳ ಸದುಪಯೋಗ ಪಡೆದು ಮುಖ್ಯವಾಹಿನಿಗೆ ಬರಬೇಕು’ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಜಂಟಿ ನಿರ್ದೇಶಕ ಅರುಳರಾಜ್ ಆಶಿಸಿದರು.

‘ಸಮಾಜದಲ್ಲಿ ದಿನದಿಂದ ದಿನಕ್ಕೆ ಕುಂಬಾರ ವೃತ್ತಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಮುದಾಯವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸವಲತ್ತು ಬಳಸಿಕೊಂಡು ಸ್ವಾವಲಂಬನೆ ಸಾಧಿಸುವಂತೆ ಆಗಬೇಕು. ಜನಾಂಗದ ಮುಖಂಡರು ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳನ್ನು ತಲುಪಿಸಬೇಕು. ಸರ್ಕಾರದಿಂದ ಮತ್ತಷ್ಟು ಸೌಲಭ್ಯ ಕೇಳಲು ಮುಖಂಡರು ಸಂಘಟಿತರಾಗಬೇಕು’ ಎಂದು ಹೇಳಿದರು.

ಖಾದಿ ಬೋರ್ಡ್ ಜಿಲ್ಲಾ ಅಧಿಕಾರಿ ಶ್ರೀನಿವಾಸ್, ಕೆನರಾ ಬ್ಯಾಂಕ್ ಮಾಲೂರು ಶಾಖೆ ವ್ಯವಸ್ಥಾಪಕ ಸತೀಶ್, ವಕ್ಕಲೇರಿ ಶಾಖೆ ವ್ಯವಸ್ಥಾಪಕ ಗಿರೀಶ್, ಕುಂಬಾರ ಸಮುದಾಯದ ಮುಖಂಡರಾದ ಲಕ್ಕಣ್ಣ, ಗಂಗರಾಜ, ಅನಂತ ಪದ್ಮನಾಭ, ಅಶ್ವತ್ಥಪ್ಪ, ಅಶೋಕ್, ಸೀತಾರಾಮ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.