ಅಹಿಂದ ಹೋರಾಟ ರಾಜಕೀಯ ಪ್ರೇರಿತ: ಕೆ.ಎಸ್.ಈಶ್ವರಪ್ಪ
ಕೋಲಾರ: ‘ಕುರುಬರ ಎಸ್‌ಟಿ ಹೋರಾಟದಲ್ಲಿ ಯಾವುದೇ ರಾಜಕೀಯವಿಲ್ಲ. ಆದರೆ, ಸಿದ್ದರಾಮಯ್ಯ ಅವರ ಅಹಿಂದ ಹೋರಾಟವು ರಾಜಕೀಯ ಪ್ರೇರಿತವಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಕುಟುಂಬ ಸದಸ್ಯರ ಜತೆ ತಿರುಪತಿಗೆ ಹೋಗುವ ಮಾರ್ಗ ಮಧ್ಯೆ ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಹಿಂದ ಪದವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಕೆಲಸ ಮೊದಲಿನಿಂದಲೂ ನಡೆಯುತ್ತಿದೆ’ ಎಂದು ವ್ಯಂಗ್ಯವಾಡಿದರು.
‘ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕೆಂದು ರಾಜ್ಯದಲ್ಲಿ ಬೃಹತ್ ಹೋರಾಟ ನಡೆದಿದ್ದು, ಎಲ್ಲರೂ ಸಹಕಾರ ನೀಡಿದ್ದಾರೆ. ಸಿದ್ದರಾಮಯ್ಯ ಅವರೂ ಸಹಕಾರ ನೀಡಿ ಸಮಾವೇಶಕ್ಕೆ ಬರಬೇಕಿತ್ತು. ಆದರೆ, ಅವರು ಯಾವ ಕಾರಣಕ್ಕೆ ಬರಲಿಲ್ಲ ಎಂಬುದು ಗೊತ್ತಿಲ್ಲ. ಕುರುಬರ ಎಸ್‌ಟಿ ಹೋರಾಟದ ಹಿಂದೆ ಆರ್‌ಎಸ್‌ಎಸ್ ಇದೆ, ಸಮಾಜದ ಜಗದ್ಗುರುಗಳು ಕೈಗೊಂಡ ಪಾದಯಾತ್ರೆಗೆ ಆರ್ಎಸ್ಎಸ್ ದುಡ್ಡು ಕೊಟ್ಟಿದೆ ಎಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿರುವುದಕ್ಕೆ ನೋವಾಗಿದೆ’ ಎಂದರು.
‘ಸಿದ್ದರಾಮಯ್ಯ ಏನು ಹೇಳ್ತಾರೋ ಬಿಡ್ತಾರೋ ಅದು ಮುಖ್ಯವಲ್ಲ. ನಮಗೆ ಅವರ ಹೇಳಿಕೆಯೇ ಅಗತ್ಯವಿಲ್ಲ. ಕುರುಬ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರಿಸುವುದು ನಮ್ಮ ಉದ್ದೇಶ. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಗುಡುಗಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.