ಶನಿವಾರ, ಡಿಸೆಂಬರ್ 5, 2020
19 °C

ಕೆಜಿಎಫ್‌: ಸರಳವಾಗಿ ನಡೆದ ‘ಆಲ್‌ ಸೋಲ್ಸ್ ಡೇ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ಅಗಲಿದ ಕುಟುಂಬದ ಸದಸ್ಯರಿಗೆ, ಹಿತೈಷಿಗಳಿಗೆ ಗೌರವ ಸಲ್ಲಿಸುವ ಆಲ್‌ ಸೋಲ್ಸ್ ಡೇ (ಸ್ಮಶಾನ ಪೂಜೆ) ಸೋಮವಾರ ನಗರದ ವಿವಿಧ ಸ್ಮಶಾನಗಳಲ್ಲಿ ಸರಳವಾಗಿ ನಡೆಯಿತು.

ಕೋವಿಡ್‌ ಕಾರಣಕ್ಕಾಗಿ ಚಾಂಪಿಯನ್‌ ರೀಫ್ಸ್ ಸ್ಮಶಾನಕ್ಕೆ ಭಾನುವಾರದಂದು ಬೀಗ ಜಡಿಯಲಾಗಿತ್ತು. ಸ್ಮಶಾನಗಳಿಗೆ ಸಿಂಗಾರ ಮಾಡಲು ಯಾರನ್ನೂ ಬಿಡಲಿಲ್ಲ.  ಸ್ಮಶಾನಕ್ಕೆ ಹೋಗುವ ಎಲ್ಲ ದಾರಿಗಳನ್ನು ಮುಚ್ಚಿದ ಪೊಲೀಸರು ಯಾವುದೇ ಅಂಗಡಿಗಳನ್ನು ಇಡಲು ಅವಕಾಶ ನೀಡಲಿಲ್ಲ. ಆದರೆ ಪೂಜೆ ಸಲ್ಲಿಸುವವರಿಗೆ ಸ್ಮಶಾನದ ಬಾಗಿಲು ತೆರೆದು ಅವಕಾಶ ಕಲ್ಪಿಸಲಾಯಿತು.

ಹಿನ್ನೆಲೆ: ಚಿನ್ನದ ಗಣಿಯಲ್ಲಿ ಚಿನ್ನ ತೆಗೆಯಲು ಬಂದಿದ್ದ ಬ್ರಿಟಿಷರು ಪ್ರತಿ ವರ್ಷ ನವೆಂಬರ್ 2ರಂದು ತಮ್ಮನ್ನು ಅಗಲಿದ ಹಿರಿಯರಿಗೆ ಗೌರವ ಸೂಚಿಸಲು ಆಲ್‌ ಸೋಲ್ಸ್‌ ಡೇ ಆಚರಣೆ ಮಾಡುತ್ತಿದ್ದರು. ಅವರನ್ನು ಅನುಕರಿಸಿದ ಸ್ಥಳೀಯ ಕ್ರಿಶ್ಚಿಯನ್‌ ಮತ್ತು ಹಿಂದೂ ಸಮುದಾಯದವರು ತಾವೂ ಕೂಡ ಆಚರಣೆ ಮಾಡಲು ಶುರು ಮಾಡಿದರು. ಸ್ಮಶಾನದಲ್ಲಿರುವ ಗೋರಿಗಳಿಗೆ ಸಿಂಗಾರ ಮಾಡಲಾಗುತ್ತಿತ್ತು. ಹಲವು ದಿನಗಳ ಮೊದಲೇ ಇದಕ್ಕೆಲ್ಲಾ ಸಿದ್ಧತೆ ನಡೆಸಲಾಗುತ್ತಿತ್ತು. ಗೋರಿಗಳಿಗೆ ಸುಣ್ಣ ಬಣ್ಣ ಬಳಿದು, ಅಲಂಕಾರ ಮಾಡಲಾಗುತ್ತಿತ್ತು. 

ಅಗಲಿದವರು ಇಷ್ಟ ಪಡುತ್ತಿದ್ದ ತಿಂಡಿ ತಿನಿಸು, ಮದ್ಯ, ಸಿಗರೇಟ್‌, ಬೀಡಿ ಮೊದಲಾದ ವಸ್ತುಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಿದ್ದರು. ತಮ್ಮ ಹಿತೈಷಿಗಳನ್ನು ನೆನೆದು ಕಣ್ಣೀರು ಹಾಕುತ್ತಿದ್ದರು. ಈ ಕಾರ್ಯಕ್ರಮಕ್ಕಾಗಿ ಎಲ್ಲೇ ಇದ್ದರೂ ತಪ್ಪದೆ ನಗರದ ಸ್ಮಶಾನಕ್ಕೆ ಕುಟುಂಬ ಸಮೇತರಾಗಿ ಬಂದು ಪೂಜೆ ಸಲ್ಲಿಸುತ್ತಿದ್ದುದು ವಾಡಿಕೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.