ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಮನುವಾದದ ಮೇಲುಗೈ: ಜ್ಞಾನಪ್ರಕಾಶ ಸ್ವಾಮೀಜಿ ಕಳವಳ

Last Updated 6 ಡಿಸೆಂಬರ್ 2019, 14:35 IST
ಅಕ್ಷರ ಗಾತ್ರ

ಕೋಲಾರ: ‘ಅಂಬೇಡ್ಕರ್‌ರ ಹೆಸರೇಳಿಕೊಂಡು ಸೂಟು, ಬೂಟು, ಐಶ್ವರ್ಯ ಪಡೆದವರು ಶೋಷಿತರನ್ನು ಮರೆತಿದ್ದಾರೆ’ ಎಂದು ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಬುಡ್ಡಿ ದೀಪ ಪ್ರಕಾಶನ ಹಾಗೂ ಕೆಪಿಟಿಸಿಎಲ್‌ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಕಲ್ಯಾಣ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಪರಿನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿ, ‘ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಾಜಕೀಯವಾಗಿ ಅಧಿಕಾರ ಪಡೆದುಕೊಳ್ಳಲು ಕಾರಣ ಯಾರೆಂಬುದನ್ನು ಮರೆತಿದ್ದಾರೆ’ ಎಂದು ವಿಷಾದಿಸಿದರು.

‘ಅಂಬೇಡ್ಕರ್ ವಿದೇಶ ಪ್ರವಾಸ ಕೈಗೊಂಡು ಶೋಷಿತ ಸಮುದಾಯಗಳನ್ನು ವಿಮೋಚನೆಗೊಳಿಸಿದರು. ಇತ್ತೀಚಿನ ವರ್ಷಗಳಲ್ಲಿ ಅಂಬೇಡ್ಕರ್‌ ವಾದಕ್ಕಿಂತ ಮನುವಾದ ಮೇಲುಗೈ ಸಾಧಿಸಿದೆ. ಸುಮಾರು ವರ್ಷಗಳಿಂದ ಮನುವಾದಿಗಳು ಅಧಿಕಾರದಲ್ಲಿದ್ದರು. ನಾವೀಗ ಅವಕಾಶವಾದಿಗಳು ಹಾಗೂ ಸಮಯ ಸಾಧಕರಾಗಿದ್ದೇವೆ’ ಎಂದು ಮಾರ್ಮಿಕವಾಗಿ ನುಡಿದರು.

‘ಅಂಬೇಡ್ಕರ್ ಮೃತಪಟ್ಟಿದ್ದರೂ ನಮ್ಮೆಲ್ಲರ ಎಚ್ಚರಿಕೆಯ ವಾರಸುದಾರರಾಗಿದ್ದಾರೆ. ಜತೆಗೆ ನಮ್ಮೆಲ್ಲರ ಅಸ್ತಿತ್ವದ ಪ್ರಜ್ಞೆ. ಅವರ ಬರವಣಿಗೆ ದೇಶದ ಜನರ ಬದುಕು ರೂಪಿಸಿದೆ. ಅಂಬೇಡ್ಕರ್‌ ಪುತ್ಥಳಿಗೆ ಹೂವು ಚೆಲ್ಲುವುದು ದೊಡ್ಡ ಸಾಧನೆಯಲ್ಲ. ಸ್ವಾತಂತ್ರ್ಯ ಬಂದು 7 ದಶಕವಾದರೂ ಕೆಳ ವರ್ಗದವರು ಅಧಿಕಾರಕ್ಕೆ ಬರಲಿಲ್ಲ ಎಂಬ ನೋವಿದೆ. ಅಂಬೇಡ್ಕರ್‌ರ ದಮ್ಮ ಮತ್ತು ಅಧಿಕಾರದ ರಥ ಮುನ್ನಡೆಸಲು ಸಂಕಲ್ಪ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಶೋಷಿತರ ಪರವೆಂದು ಅಂಬೇಡ್ಕರ್ ಘೋಷಿಸಿದ್ದರು. ಜೈ ಭೀಮ್ ಎಂದು ಕೂಗಿದರೂ ಆಧುನಿಕ ಗುಲಾಮರಾಗಿಯೇ ಉಳಿಯಬೇಕಾ? ಕೇವಲ ಜಯಂತಿಗೆ ಅಂಬೇಡ್ಕರ್ ನೆನಪು ಕಾಣಬಾರದು. ಜಿಲ್ಲೆಯಲ್ಲಿ ಅಂಬೇಡ್ಕರ್ ಹೆಜ್ಜೆ ಗುರುತುಗಳಿದ್ದು, ಅವರ ಹೋರಾಟದ ಉದ್ದೇಶ ಈಡೇರಿಸುವ ಕೆಲಸ ಈ ನೆಲದಿಂದಲೇ ಆರಂಭವಾಗಬೇಕು’ ಎಂದು ಸಲಹೆ ನೀಡಿದರು.

ಭೌತಿಕತೆ ವಿಸ್ತರಿಸಬೇಕು: ‘ಅಂಬೇಡ್ಕರ್ ಓದು ಅರ್ಥ ಮಾಡಿಕೊಂಡವರು ಏಕಶೀಲ ರೂಪಕಗಳನ್ನು ಛಿದ್ರಗೊಳಿಸಬೇಕು. ಬೆಳ್ಳಿ ರಥಗಳಲ್ಲಿ ಕೆಟ್ಟ ರೀತಿಯಲ್ಲಿ ವಿವಿಧ ಜಯಂತಿ ಆಚರಣೆ ಮಾಡುವುದು ಶೋಭೆಯಲ್ಲ. ಸಮಾಜದಲ್ಲಿನ ತಪ್ಪು ತಿದ್ದುವ ಸಂದೇಶ ಸಾರುವ ವಿಚಾರಪೂರ್ಣ ಕಾರ್ಯಕ್ರಮ ನಡೆಯುವ ಅಗತ್ಯವಿದೆ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಪ್ರತಿಪಾದಿಸಿದರು.

‘ದೇಶದಲ್ಲಿ ಕೆಲ ಶಕ್ತಿಗಳು ಪೇಶ್ವೆ ಭಾರತ ತರುತ್ತಿವೆ. ಆದರೆ, ಅಂಬೇಡ್ಕರ್ ಪ್ರಭುತ್ವ ಭಾರತ ನೋಡಬೇಕಿದೆ. ಮುಂದಿನ ಪೀಳಿಗೆಗೆ ಸ್ವಾಭಿಮಾನದ ನುಡಿಗೆ ಅಕ್ಷರದ ಮೂಲಕ ಭೌತಿಕತೆ ವಿಸ್ತರಿಸಬೇಕು’ ಎಂದು ಸಲಹೆ ನೀಡಿದರು.

ಅಂಬೇಡ್ಕರ್‌ಗೆ ಸಂಬಂಧಿಸಿದಂತೆ ರಚನೆಯಾಗಿರುವ ಪುಸ್ತಕಗಳ ಪ್ರದರ್ಶನ ನಡೆಯಿತು. ರಕ್ತದಾನ ಶಿಬಿರ ನಡೆಸಲಾಯಿತು. ಕೆಪಿಟಿಸಿಎಲ್ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಗುರುಸ್ವಾಮಿ, ಲೆಕ್ಕ ಪರಿಶೋಧಕ ಶಫೀವುಲ್ಲಾ, ಕಾರ್ಯ ನಿರ್ವಾಹಕ ಎಂಜಿನಿಯರ್ ಸತೀಶ್, ಮುಖಂಡ ರಾಜಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT