ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ ಸಹಕಾರಿ ಕಾಯ್ದೆಗೆ ತಿದ್ದುಪಡಿ: ಕೃಷ್ಣಾರೆಡ್ಡಿ

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಗಮದ ಅಧ್ಯಕ್ಷ
Last Updated 26 ನವೆಂಬರ್ 2021, 13:59 IST
ಅಕ್ಷರ ಗಾತ್ರ

ಕೋಲಾರ: ‘ಸೌಹಾರ್ದ ಸಹಕಾರಿ ಕಾಯ್ದೆಯಲ್ಲಿ ಆದಾಯ ತೆರಿಗೆ ತೊಂದರೆ ನಿವಾರಣೆಗೆ ಸರ್ಕಾರವು ರಾಜ್ಯ ಹಾಗೂ ಕೇಂದ್ರದ ಎಲ್ಲಾ ಕಾಯ್ದೆಗಳಲ್ಲಿ ಸೌಹಾರ್ದ ಸಹಕಾರಿಗಳು ಸಹಕಾರ ಸಂಘಗಳೆಂದು ಪರಿಗಣಿಸಲು ಸಾಧ್ಯವಾಗುವಂತೆ ತಿದ್ದುಪಡಿ ತಂದಿದೆ’ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಗಮದ ಅಧ್ಯಕ್ಷ ಎಚ್.ಬಿ.ಕೃಷ್ಣಾರೆಡ್ಡಿ ಹೇಳಿದರು.

ಇಲ್ಲಿ ಶುಕ್ರವಾರ ‍ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಆದಾಯ ತೆರಿಗೆ ಸಮಸ್ಯೆ ನಿವಾರಣೆಗೆ ಸೌಹಾರ್ದ ಸಹಕಾರಿ ಕಾಯ್ದೆಯಡಿ ಅಗತ್ಯ ತಿದ್ದುಪಡಿ ತರಲು ನಿರಂತರ ಪ್ರಯತ್ನ ನಡೆಯುತ್ತಿತ್ತು. ಇದರ ಫಲವಾಗಿ ಸೌಹಾರ್ದ ಸಹಕಾರಿ ಅಧಿನಿಯಮಕ್ಕೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಅಗತ್ಯ ತಿದ್ದುಪಡಿಯೊಂದಿಗೆ ಮಂಡನೆಯಾಗಿ ಅಂಗೀಕಾರಗೊಂಡಿದೆ’ ಎಂದರು.

‘ರಾಜ್ಯದಲ್ಲಿ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದ ನಂತರ ಈವರೆಗೆ ಹಲವು ತಿದ್ದುಪಡಿಗಳಾಗಿವೆ. ಸೌಹಾರ್ದ ಸಹಕಾರಿ ಕ್ಷೇತ್ರದ ಮೂಲ ಆಶಯಕ್ಕೆ ದಕ್ಕೆಯಾಗುವಂತೆ ತಿದ್ದುಪಡಿ ಆಗಿದ್ದವು. ಸರ್ಕಾರ ಇದನ್ನು ಸರಿಪಡಿಸುವ ಕೆಲಸ ಮಾಡಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ದೇಶದಲ್ಲಿ 8.50 ಲಕ್ಷ ವಿವಿಧ ಸಹಕಾರ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. 30 ಕೋಟಿಗಿಂತ ಹೆಚ್ಚು ಸದಸ್ಯರಿದ್ದು, ದೇಶದ ಶೇ 95 ಗ್ರಾಮಗಳಲ್ಲಿ ಅಂದರೆ 6.30 ಲಕ್ಷ ಗ್ರಾಮಗಳಲ್ಲಿ ಸಹಕಾರ ಕ್ಷೇತ್ರ ವ್ಯಾಪಿಸಿದೆ. ಕ್ಷೇತ್ರ ಇಷ್ಟು ದೊಡ್ಡದಾಗಿದ್ದರೂ ಕೇಂದ್ರದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯ ಇರಲಿಲ್ಲ. ಈ ನಿಟ್ಟಿನಲ್ಲಿ ಸಹಕಾರ ಭಾರತಿ ಮತ್ತು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಜಂಟಿಯಾಗಿ ಕೇಂದ್ರಕ್ಕೆ ಸಲ್ಲಿಸಿದ ಮನವಿ ಪುರಸ್ಕರಿಸಿದ ಪ್ರಧಾನಿ ಮೋದಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ಸಚಿವರನ್ನು ನೇಮಕ ಮಾಡಿರುವುದು ಆಶಾದಾಯಕ ಬೆಳವಣಿಗೆ’ ಎಂದರು.

ಅಧಿಕಾರಿಗಳ ತೊಂದರೆ: ‘ಸಹಕಾರ ಕ್ಷೇತ್ರ ಎದುರಿಸುತ್ತಿರುವ ಆದಾಯ ತೆರಿಗೆ ತೊಂದರೆ ನಿವಾರಣೆಗೆ ಸಂಯುಕ್ತ ಸಹಕಾರಿಯ ನಿರ್ದೇಶಕರ ನಿಯೋಗವು ಸಹಕಾರ ಸಚಿವ ಅಮಿತ್‌ ಷಾ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾಯ್ದೆಗೆ ತಿದ್ದುಪಡಿ ತಂದ ನಂತರವೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೆಲವೆಡೆ ತೊಂದರೆ ಕೊಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಿಗಳ ಕಿರುಕುಳ ತಪ್ಪಿಸುವಂತೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್, ಸಿಬಿಡಿಟಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. 2022ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಸಂಯುಕ್ತ ಸಹಕಾರಿ ಕೇಂದ್ರ ಕಟ್ಟಡ ಉದ್ಘಾಟನೆ ಹಾಗೂ ಬೃಹತ್ ಸಮಾವೇಶ ಆಯೋಜಿಸುತ್ತೇವೆ. ಕಾರ್ಯಕ್ರಮಕ್ಕೆ ಅಮಿತ್‍ಷಾ ಅವರನ್ನು ಆಹ್ವಾನಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಗಮದ ವ್ಯವಸ್ಥಾಪಕ ಸಂಜಯ್ ಕೊರಟ್ಕರ್, ವಿವಿಧ ಸೌಹಾರ್ದ ಸೊಸೈಟಿ ಪ್ರತಿನಿಧಿಗಳಾದ ಬಸವರಾಜು, ವಿವೇಕ್‍ಚಂದ್ರು, ಹರ್ಷಜಿತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT