ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಸಂಭ್ರಮಕ್ಕೆ ಅಡ್ಡಿಯಾಗದ ಆದೇಶ‌

Last Updated 15 ನವೆಂಬರ್ 2020, 13:49 IST
ಅಕ್ಷರ ಗಾತ್ರ

ಕೋಲಾರ: ಹಸಿರು ಪಟಾಕಿ ಮಾತ್ರ ಬಳಸುವಂತೆ ಸರ್ಕಾರ ಹೊರಡಿಸಿದ್ದ ಆದೇಶವು ಜಿಲ್ಲೆಯಲ್ಲಿ ದೀಪಾವಳಿ ಸಂಭ್ರಮಕ್ಕೆ ಅಡ್ಡಿಯಾಗಲಿಲ್ಲ. ನಾಗರೀಕರು ಸ್ವಯಂಪ್ರೇರಿತರಾಗಿ ದೀಪ ಬೆಳಗಿಸಿ ಅರ್ಥಪೂರ್ಣವಾಗಿ ದೀಪಾವಳಿ ಆಚರಿಸಿದರೆ ಮತ್ತೆ ಕೆಲವರು ಪಟಾಕಿ ಸಿಡಿಸಿ ಎಂದಿನಂತೆ ಹಬ್ಬ ಆಚರಿಸಿದರು.

ಪಟಾಕಿ ಇಲ್ಲದೆ ದೀಪಾವಳಿ ಆಚರಿಸಲು ಸಾಧ್ಯವೆ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿತ್ತು. ಜನರು ಸರ್ಕಾರದ ಆದೇಶ ಲೆಕ್ಕಿಸದೆ ಅಧಿಕಾರಿಗಳ ಕಣ್ತಪ್ಪಿಸಿ ಕದ್ದುಮುಚ್ಚಿ ಪಟಾಕಿ ಖರೀದಿಸಿ ಹಬ್ಬ ಆಚರಿಸಿ ಸಂಭ್ರಮಿಸಿದ್ದು ಕಂಡುಬಂತು.

ಸರ್ಕಾರ ಅಂತಿಮ ಕ್ಷಣದಲ್ಲಿ ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗೆ ಆದೇಶ ಹೊರಡಿಸಿತು. ತಿಂಗಳ ಹಿಂದೆಯೇ ಬಂಡವಾಳ ಹಾಕಿದ್ದ ಪಟಾಕಿ ವ್ಯಾಪಾರಿಗಳು ಸರ್ಕಾರದ ಆದೇಶದಿಂದ ಕಂಗಾಲಾದರು. ಮತ್ತೊಂದೆಡೆ ಪಟಾಕಿ ಮಳಿಗೆ ತೆರೆಯಲು ಜಿಲ್ಲಾಡಳಿತವು ಸಾಕಷ್ಟು ತಡ ಮಾಡಿದ್ದರಿಂದ ವ್ಯಾಪಾರಿಗಳು ಪರದಾಡಿದರು.

ಸರ್ಕಾರದ ಆದೇಶದಿಂದ ಈ ಬಾರಿ ಪಟಾಕಿ ವ್ಯಾಪಾರ ಸಂಪೂರ್ಣ ನೆಲಕಚ್ಚಿತು. ಸಾಂಪ್ರದಾಯಿಕ ಪಟಾಕಿಗಳ ದರಕ್ಕೆ ಹೋಲಿಸಿದರೆ ಹಸಿರು ಪಟಾಕಿಗಳ ಬೆಲೆ ತುಂಬಾ ಹೆಚ್ಚಿತ್ತು. ಹೀಗಾಗಿ ನಿರೀಕ್ಷೆಯಂತೆ ಪಟಾಕಿ ವಹಿವಾಟು ನಡೆಯಲಿಲ್ಲ. ಬಂಡವಾಳ ಹಾಕಿದ್ದ ವ್ಯಾಪಾರಿಗಳು ನಷ್ಟ ತಪ್ಪಿಸಿಕೊಳ್ಳಲು ವಿಧಿಯಿಲ್ಲದೆ ಅಡ್ಡದಾರಿ ಹಿಡಿದು ಕದ್ದುಮುಚ್ಚಿ ಪಟಾಕಿ ಮಾರಾಟ ಮಾಡಿದರು.

ಸಾರ್ವಜನಿಕರು ಪಟಾಕಿ ಸಿಡಿಸುವ ಸಂಪ್ರದಾಯಕ್ಕಾಗಿ ಹಸಿರು ಪಟಾಕಿ ಕೊಂಡು ತಂದು ಸಂಭ್ರಮಿಸಿದರು. ಬಹುಪಾಲು ಮಂದಿ ಎಲ್ಲಾ ಮಾದರಿಯ ಪಟಾಕಿ ಸಿಡಿಸುತ್ತಿದ್ದ ದೃಶ್ಯ ಕಂಡುಬಂತು. ಜನರ ಸಂಪ್ರದಾಯಬದ್ಧ ಸಂಭ್ರಮಕ್ಕೆ ಸರ್ಕಾರದ ಆದೇಶ ಲೆಕ್ಕಕ್ಕಿಲ್ಲದಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT