ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಚುನಾವಣೆ: ಮಂಜುನಾಥ್‌ಗೆ ಗೆಲುವು

ಜೆಡಿಎಸ್‌ನ ಬಣ ರಾಜಕೀಯ: ನಿರ್ದೇಶಕಿ ರೇಖಾ ಪರಾಭವ
Last Updated 17 ಆಗಸ್ಟ್ 2021, 15:01 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ಎಪಿಎಂಸಿ ಅಧ್ಯಕ್ಷಗಾದಿಗೆ ಮಂಗಳವಾರ ನಡೆದ ಚುನಾವಣೆಯು ಜೆಡಿಎಸ್‌ನ ಬಣ ರಾಜಕೀಯಕ್ಕೆ ಸಾಕ್ಷಿಯಾಯಿತು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 16 ಮಂದಿ ನಿರ್ದೇಶಕರಿದ್ದು, ಜೆಡಿಎಸ್‌ನ ರೇಖಾ ಮತ್ತು ಸಿ.ಎಂ.ಮಂಜುನಾಥ್‌ ಉಮೇದುವಾರಿಕೆ ಸಲ್ಲಿಸಿದರು. ಇಬ್ಬರೂ ನಾಮಪತ್ರ ಹಿಂಪಡೆಯದ ಕಾರಣ ಚುನಾವಣೆ ನಡೆಸಲಾಯಿತು.

ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದ ಶಾಸಕ ಕೆ.ಶ್ರೀನಿವಾಸಗೌಡ ಹಾಗೂ ಪಕ್ಷದ ಮುಖಂಡರು ರೇಖಾ ಹಾಗೂ ಮಂಜುನಾಥ್‌ ಅವರ ನಡುವೆ ಒಮ್ಮತ ಮೂಡಿಸುವ ಪ್ರಯತ್ನ ಸಹ ಮಾಡಲಿಲ್ಲ. ಹೀಗಾಗಿ ಗೊಂದಲಕ್ಕೆ ಸಿಲುಕಿದ ನಿರ್ದೇಶಕರು ರೇಖಾ ಹಾಗೂ ಮಂಜುನಾಥ್‌ರ ಬಣದಲ್ಲಿ ಹಂಚಿ ಹೋದರು.

ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕ ವರ್ತೂರು ಪ್ರಕಾಶ್ ಹಾಗೂ ಎಪಿಎಂಸಿ ನಿರ್ದೇಶಕ ವಡಗೂರು ನಾಗರಾಜ್ ಚುನಾವಣಾ ರಣತಂತ್ರ ರೂಪಿಸಿ ಮಂಜುನಾಥ್‌ ಅವರನ್ನು ಅಖಾಡಕ್ಕೆ ಇಳಿಸಿದರು. ಬಿಜೆಪಿಯ 3 ಮಂದಿ ನಾಮನಿರ್ದೇಶಿತ ನಿರ್ದೇಶಕರು, ಜೆಡಿಎಸ್‌ನ 4 ಮಂದಿ, ಕಾಂಗ್ರೆಸ್‌ ಮತ್ತು ವರ್ತೂರು ಪ್ರಕಾಶ್ ಬಣದ ನಿರ್ದೇಶಕರನ್ನು ಒಗ್ಗೂಡಿಸಿ ಅಭ್ಯರ್ಥಿ ಮಂಜುನಾಥ್ ಪರ ಮತ ಚಲಾಯಿಸುವಂತೆ ಮಾಡಿದರು.

ಮಂಜುನಾಥ್‌ 12 ಮತ ಪಡೆದು ಗೆಲುವಿನ ನಗೆ ಬೀರಿದರು. ಪ್ರತಿಸ್ಪರ್ಧಿ ರೇಖಾ ಅವರು 4 ಮತ ಗಳಿಸಿ ಪರಾಭವಗೊಂಡರು.

ಕೈ ಕೊಟ್ಟ ಸ್ವಪಕ್ಷೀಯರು: ಎಪಿಎಂಸಿ ಆಡಳಿತ ಮಂಡಳಿಯ ಅವಧಿ ಅಂತ್ಯಗೊಳ್ಳಲು 5 ತಿಂಗಳು ಮಾತ್ರ ಬಾಕಿಯಿದೆ. ಶಾಸಕ ಶ್ರೀನಿವಾಸಗೌಡರ ಅಣತಿಯಂತೆ ಅಧ್ಯಕ್ಷಗಾದಿಗೆ ಆಯ್ಕೆ ಆಗಲೇಬೇಕೆಂಬ ಮಹಾದಾಸೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಿದ ರೇಖಾ ಅವರಿಗೆ ಸ್ವಪಕ್ಷೀಯ ನಿರ್ದೇಶಕರೇ ಕೈ ಕೊಟ್ಟರು.

ಈ ಹಿಂದೆ ಎಪಿಎಂಸಿ ಅಧ್ಯಕ್ಷರಾಗಿದ್ದ ಧನಮಟ್ನಹಳ್ಳಿ ಮಂಜುನಾಥ್ ಅವರಿಂದ ರಾಜೀನಾಮೆ ಕೊಡಿಸಿ ಒಮ್ಮತದ ಅಭ್ಯರ್ಥಿಯಾಗಿ ರೇಖಾ ಅವರನ್ನು ಅವಿರೋಧ ಆಯ್ಕೆ ಮಾಡಲು ಜೆಡಿಎಸ್‌ ನಿರ್ದೇಶಕರು ನಿರ್ಣಯ ಕೈಗೊಂಡಿದ್ದರು. ಅಧಿಕಾರವಧಿ ಕೇವಲ 5 ತಿಂಗಳು ಮಾತ್ರ ಇರುವುದರಿಂದ ನಿರ್ದೇಶಕರು ಚುನಾವಣೆ ಬೇಡವೆಂಬ ನಿರ್ಧಾರಕ್ಕೆ ಬಂದಿದ್ದರು. ಸಿ.ಎಂ.ಮಂಜುನಾಥ್ ಸಹ ಇದಕ್ಕೆ ಸಮ್ಮತಿಸಿದ್ದರು.

ಸಂಸದರಿಗೆ ಕರೆ: ಚುನಾವಣಾ ದಿನಾಂಕ ಘೋಷಣೆಯಾದ ನಂತರ ರಾಜಕೀಯ ಚಿತ್ರಣವೇ ಬದಲಾಯಿತು. ನಿರ್ದೇಶಕರು ಸಹ ಕೊಟ್ಟ ಮಾತು ಮರೆತು ಸಿ.ಎಂ.ಮಂಜುನಾಥ್‌ರ ಪಾಳಯಕ್ಕೆ ಜಿಗಿದರು. ಶತಾಯಗತಾಯ ರೇಖಾ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಹಟಕ್ಕೆ ಬಿದ್ದ ಶಾಸಕ ಶ್ರೀನಿವಾಸಗೌಡರು ಬಿಜೆಪಿಯ ನಾಮನಿರ್ದೇಶಿತ ಸದಸ್ಯರ ಬೆಂಬಲ ಕೋರಿ ದೆಹಲಿಯಿಂದಲೇ ಸಂಸದರಿಗೆ ಹಲವು ಬಾರಿ ಕರೆ ಮಾಡಿದರು. ಆದರೆ, ಸಂಸದರು ಕರೆ ಸ್ವೀಕರಿಸಲಿಲ್ಲ. ಹೀಗಾಗಿ ಶ್ರೀನಿವಾಸಗೌಡರ ಕೊನೆ ಕ್ಷಣದ ಪ್ರಯತ್ನವೂ ವಿಫಲವಾಯಿತು.

‘ನಿರ್ದೇಶಕರು ಒಮ್ಮತದಿಂದ ನನ್ನನ್ನು ಗೆಲ್ಲಿಸಿದ್ದಾರೆ. ಎಪಿಎಂಸಿಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತೇನೆ. ಹೊಸ ಮಾರುಕಟ್ಟೆ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ನೂತನ ಅಧ್ಯಕ್ಷ ಸಿ.ಎಂ.ಮಂಜುನಾಥ್‌ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT