ಬುಧವಾರ, ಜೂನ್ 29, 2022
24 °C
ಗ್ರಾಹಕ ಸೇವೆ ಸುಧಾರಿಸಲಿದೆ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಅಭಿಪ್ರಾಯ

13 ಹೊಸ ಶಾಖೆಗೆ ಸಹಕಾರ ಇಲಾಖೆ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯಲ್ಲಿ ಬ್ಯಾಂಕ್‌ನ 13 ಹೊಸ ಶಾಖೆ ಆರಂಭಕ್ಕೆ ಸಹಕಾರ ಇಲಾಖೆ ಅನುಮತಿ ನೀಡಿದ್ದು, ಇದರಿಂದ ಗ್ರಾಹಕ ಸೇವೆ ಮತ್ತಷ್ಟು ಸುಧಾರಿಸಲಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಅಭಿಪ್ರಾಯಪಟ್ಟರು.

ಇಲ್ಲಿ ಶನಿವಾರ ನಡೆದ ಬ್ಯಾಂಕ್‌ನ ಕಾರ್ಯಪಡೆ ಸಮಿತಿ ಸಭೆಯಲ್ಲಿ ಮಾತನಾಡಿ, ‘ಗ್ರಾಹಕ ಸೇವೆ ಹೆಚ್ಚಿಸುವ, ರೈತರು ಹಾಗೂ ಮಹಿಳೆಯರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ ತಲುಪಿಸುವ ಸದುದ್ದೇಶದಿಂದ ಹೊಸ ಶಾಖೆಗಳ ಅನುಮತಿಗೆ ಸಹಕಾರ ಸಂಘಗಳ ನಿಬಂಧಕರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು’ ಎಂದರು.

‘ಹೊಸ ಶಾಖೆಗಳ ಆರಂಭಕ್ಕೆ ಒಪ್ಪಿಗೆ ನೀಡಿರುವ ಸಹಕಾರ ಇಲಾಖೆ ಈ ಸಂಬಂಧ ನಬಾರ್ಡ್‍ಗೆ ಶಿಫಾರಸು ಮಾಡಿದೆ. ಪ್ರಸ್ತಾವವನ್ನು ನಬಾರ್ಡ್ ಆರ್‌ಬಿಐಗೆ ಕಳುಹಿಸಲಿದ್ದು, ಖಂಡಿತ ಅನುಮತಿ ಸಿಗುತ್ತದೆ. ಶೀಘ್ರದಲ್ಲೇ ಹೊಸ ಶಾಖೆಗಳು ಆರಂಭವಾಗುತ್ತವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಹೊಸ ಶಾಖೆಗಳ ಆರಂಭ ಮತ್ತು ಬ್ಯಾಂಕ್‌ನ ವೇಗದ ಅಭಿವೃದ್ಧಿ ಹಿನ್ನೆಲೆಯಲ್ಲಿ ಷೇರು ಬಂಡವಾಳ ಹೆಚ್ಚಿಸಬೇಕು. ಸಾಲ ನೀಡಿಕೆ, ವಸೂಲಾತಿ, ಠೇವಣಿ ಸಂಗ್ರಹಕ್ಕೆ ಆದ್ಯತೆ ನೀಡುವ ಮೂಲಕ ಬ್ಯಾಂಕ್ ಲಾಭ ಗಳಿಸುವಂತೆ ಮಾಡಬೇಕು. ಜತೆಗೆ ಎನ್‍ಪಿಎ ಕಡಿಮೆ ಮಾಡಿ ಬ್ಯಾಂಕ್‌ನ ನೆಟ್‍ವರ್ತ್ ಉತ್ತಮಪಡಿಸಲು ಕ್ರಮ ಕೈಗೊಳ್ಳಿ’ ಎಂದು ಸೂಚಿಸಿದರು.

ಠೇವಣಿ ಗುರಿ ಸಾಧಿಸಿ: ‘ಸಿಬ್ಬಂದಿ ಠೇವಣಿ ಸಂಗ್ರಹದ ಗುರಿ ಸಾಧನೆ ಮಾಡಬೇಕು. ಠೇವಣಿ, ಸಾಲ ವಸೂಲಾತಿ ಪ್ರಗತಿ ಆಧರಿಸಿಯೇ ಸಿಬ್ಬಂದಿಗೆ ಬ್ಯಾಂಕ್‌ನ ಸೌಲಭ್ಯ, ಪದೋನ್ನತಿ ನೀಡಲು ಕ್ರಮ ವಹಿಸುತ್ತೇವೆ. ಠೇವಣಿ ಗುರಿ ಸಾಧಿಸದ ಸಿಬ್ಬಂದಿ ವಿರುದ್ಧ ಸೇವಾ ನಿಯಮಗಳಡಿ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಬ್ಯಾಂಕ್‌ನಿಂದ ₹ 40 ಲಕ್ಷದವರೆಗೂ ಮಧ್ಯಮಾವಧಿ ಸಾಲದ ಮಿತಿ ನೀಡಲಾಗಿದೆ. ಇದನ್ನು ವಸೂಲು ಮಾಡುವುದು ಕಷ್ಟವಾಗುತ್ತಿರುವುದರಿಂದ ಬ್ಯಾಂಕ್‌ನ ಆರ್ಥಿಕ ಭದ್ರತೆ ದೃಷ್ಟಿಯಿಂದ ಮಧ್ಯಮಾವಧಿ ಸಾಲದ ಮಿತಿಯನ್ನು ₹ 10 ಲಕ್ಷಕ್ಕೆ ನಿಗದಿ‍ಪಡಿಸಲು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದರು.

ನಬಾರ್ಡ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಮನೋಜ್‍ಕುಮಾರ್, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಸೋಮಣ್ಣ, ಕೆ.ವಿ.ದಯಾನಂದ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿಚ್ಚಯ್ಯ ರಾಪುರಿ, ಲೆಕ್ಕ ಪರಿಶೋಧನಾ ಉಪ ನಿರ್ದೇಶಕ ಶ್ರೀಕಾಂತ್‍ರಾವ್, ಸಹಕಾರ ಸಂಘಗಳ ಉಪ ನಿಬಂಧಕ ಸಿ.ಎಸ್.ಅಸೀಫ್‍ಉಲ್ಲಾ ಅನೀಫ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಕೃಷ್ಣಮೂರ್ತಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.