ಬುಧವಾರ, ಆಗಸ್ಟ್ 10, 2022
23 °C
ಸಭೆಯಲ್ಲಿ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಗೌಡ ಸೂಚನೆ

ಶಾಲೆಗೆ ಹಾಜರಾಗಿ ದಾಖಲಾತಿ ಆರಂಭಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯಲ್ಲಿ ಲಾಕ್‌ಡೌನ್‌ ತೆರವಿನ ನಂತರ ಜೂನ್‌ 15ರಿಂದಲೇ ಶಾಲಾ ಚಟುವಟಿಕೆ ಆರಂಭಿಸಲು ಶಿಕ್ಷಣ ಇಲಾಖೆ ಆಯುಕ್ತರ ಸೂಚನೆ ನೀಡಿದ್ದು, ಶಿಕ್ಷಕರು ಸಕಾಲಕ್ಕೆ ಹಾಜರಾಗಿ ದಾಖಲಾತಿ ಪ್ರಕ್ರಿಯೆ ಆರಂಭಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಸೂಚಿಸಿದರು.

ಶಾಲಾ ಚಟುವಟಿಕೆ ಆರಂಭದ ಸಂಬಂಧ ಇಲ್ಲಿ ಸೋಮವಾರ ಬಿಆರ್‌ಸಿ, ಬಿಆರ್‌ಪಿ ಹಾಗೂ ಸಿಆರ್‌ಪಿಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿ, ‘ಕೋವಿಡ್‌ನಿಂದ ಈಗಾಗಲೇ ಶೈಕ್ಷಣಿಕ ಹಿನ್ನಡೆಯಾಗಿದೆ. ಮಕ್ಕಳ ಕಲಿಕೆಗೆ ಅಡ್ಡಿಯಾಗಿದ್ದು, ಇದನ್ನು ಸರಿಪಡಿಸುವ ಹೊಣೆ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಮೇಲಿದೆ’ ಎಂದರು.

‘ಶಿಕ್ಷಕರು ಜೂನ್‌ 15ರಿಂದಲೇ ಶಾಲೆಗೆ ಹಾಜರಾಗಬೇಕು. ಮಕ್ಕಳ ಬರುವಿಕೆಗಾಗಿ ಶಾಲೆಗಳನ್ನು ಸಜ್ಜುಗೊಳಿಸಬೇಕು. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ಜುಲೈ 1ರಿಂದ ತರಗತಿ ಆರಂಭವಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸ್ಪಷ್ಟಪಡಿಸಿದ್ದು, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ’ ಎಂದು ತಿಳಿಸಿದರು.

‘ಆ.31ರೊಳಗೆ ಮಕ್ಕಳ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇದು ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿಗೂ ಅನ್ವಯವಾಗುತ್ತದೆ. ಶಾಲೆಗಳಲ್ಲಿ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು. ಶಾಲೆಗೆ ಮಕ್ಕಳು ಬರುವಂತಿಲ್ಲ, ಶಿಕ್ಷಕರು ಮಾತ್ರ ಆಗಮಿಸಿ ವಾರ್ಷಿಕ ಕ್ರಿಯಾಯೋಜನೆ ಸಿದ್ಧಪಡಿಸಿ ದಾಖಲಾತಿ ಕಾರ್ಯ ನಿರ್ವಹಣೆ ಮಾಡಬೇಕು’ ಎಂದು ಹೇಳಿದರು.

‘ಹಲವು ತಿಂಗಳಿಂದ ಬಂದ್ ಆಗಿರುವ ಶಾಲೆಗಳನ್ನು ಸುಂದರಗೊಳಿಸುವ ಅಗತ್ಯವಿದೆ. ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲು ಶಾಲಾ ಆವರಣ ಸ್ವಚ್ಛಗೊಳಿಸಿ. ಗಿಡಗಳಿಗೆ ಪಾತಿ ಮಾಡಬೇಕು, ಶಾಲಾ ಕೊಠಡಿಗಳು ಮತ್ತು ಮೇಲ್ಛಾವಣಿಯಲ್ಲಿ ನೀರು ನಿಲ್ಲದಂತೆ ಮಾಡಬೇಕು’ ಎಂದು ಸೂಚಿಸಿದರು.

ಮಾಹಿತಿ ದಾಖಲಿಸಿ: ‘ಮಕ್ಕಳ ಮಾಹಿತಿಯನ್ನು ಸ್ಯಾಟ್ಸ್‌ನಲ್ಲಿ ದಾಖಲು ಮಾಡಿ. ಅಂಕಗಳ ವಹಿ ಮತ್ತಿತರ ದಾಖಲೆ ನಿರ್ವಹಿಸಬೇಕು, ಶಾಲೆಯ ಶೌಚಾಲಯಗಳನ್ನು ಸ್ವಚ್ಛ ಮಾಡಿಸಿ. ಅಗತ್ಯವಿದ್ದರೆ ಇಡೀ ಶಾಲೆಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿಸಿ. ಬಿಆರ್‌ಪಿ, ಸಿಆರ್‌ಪಿಗಳು ಶಾಲೆಗಳಿಗೆ ಭೇಟಿ ಕೊಟ್ಟು ತರಗತಿ ಆರಂಭಕ್ಕೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ’ ಎಂದು ಸಲಹೆ ನೀಡಿದರು.

‘ಶಾಲೆಗಳಿಗೆ ಈಗಾಗಲೇ ಅಕ್ಷರ ದಾಸೋಹ ಯೋಜನೆಯಡಿ ಆಹಾರ ಧಾನ್ಯ ಸರಬರಾಜಾಗಿದೆ. ಇದನ್ನು ಮಕ್ಕಳಿಗೆ ಸಮರ್ಪಕವಾಗಿ, ಪಾರದರ್ಶಕವಾಗಿ ವಿತರಿಸಲು ಮುಖ್ಯ ಶಿಕ್ಷಕರು ಕ್ರಮ ವಹಿಸಬೇಕು, ಸುತ್ತೋಲೆಯಲ್ಲಿ ತಿಳಿಸಿರುವ ನಿಯಮ ಪಾಲಿಸಬೇಕು’ ಎಂದು ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ ಹೇಳಿದರು.

ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ವೆಂಕಟಾಚಲಪತಿ, ರಾಘವೇಂದ್ರ, ಆರ್.ಶ್ರೀನಿವಾಸನ್, ಬೈರೆಡ್ಡಿ, ಬಿಆರ್‌ಪಿಗಳಾದ ಪ್ರವೀಣ್, ಸಿ.ಎಸ್.ನಾಗರಾಜ್, ಟಿ.ಎಂ.ನಾಗರಾಜ್, ಸವಿತಾ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು