ಬುಧವಾರ, ಆಗಸ್ಟ್ 4, 2021
28 °C
ರಾಜ್ಯ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ರಾಜಣ್ಣ ಕಿವಿಮಾತು

ಮೀಟರ್ ಬಡ್ಡಿ ಶೋಷಣೆ ತಪ್ಪಿಸಿ: ರಾಜಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮೀಟರ್ ಬಡ್ಡಿ ಶೋಷಣೆ ತಪ್ಪಿಸಿ ಸಮಾಜದ ಕಟ್ಟಕಡೆಯ ರೈತನಿಗೂ ಸಾಲ ತಲುಪಿಸಿದರೆ ಮಾತ್ರ ಸಹಕಾರಿ ಆಂದೋಲನ ಯಶಸ್ವಿಯಾಗುತ್ತದೆ’ ಎಂದು ರಾಜ್ಯ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

ಡಿಸಿಸಿ ಬ್ಯಾಂಕ್‌ ವತಿಯಿಂದ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ (ಪ್ಯಾಕ್ಸ್‌) ಕಂಪ್ಯೂಟರ್‌ ವಿತರಣೆ ಮತ್ತು ಮೈಕ್ರೊ ಎಟಿಎಂ ಸೇವೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ‘ರೈತರು ಮತ್ತು ಮಹಿಳೆಯರ ಮೇಲಿನ ವಾಣಿಜ್ಯ ಬ್ಯಾಂಕ್‌ಗಳ ಶೋಷಣೆ ತಪ್ಪಿಸಿ’ ಎಂದು ಸಲಹೆ ನೀಡಿದರು.

‘ಕೃಷಿಯ ಜತೆಗೆ ಉಪಕಸುಬು ಮಾಡಲು ರೈತರಿಗೆ ಸಾಲ ಒದಗಿಸಿ ಅವರ ನೆರವಿಗೆ ನಿಲ್ಲಬೇಕು. ಸಹಕಾರಿ ವ್ಯವಸ್ಥೆ ಇಲ್ಲವಾದರೆ ಜನ ವಂಚನೆಗೆ ಒಳಗಾಗುತ್ತಾರೆ. ತಾಂತ್ರಿಕ ಅಭಿವೃದ್ಧಿಯ ಸಂದರ್ಭದಲ್ಲಿ ಹೊಸ ಪೀಳಿಗೆಗೆ ಅನುಕೂಲವಾಗುವ ವಾತಾವರಣ ಸೃಷ್ಟಿಯು ಸಹಕಾರಿ ರಂಗದಲ್ಲಿ ಅಗತ್ಯವಾಗಿದೆ. ಕೃಷಿ ಸಾಲದ ಜತೆಗೆ ಶೇ 50ರಷ್ಟು ಕೃಷಿಯೇತರ ಸಾಲ ನೀಡಿದರೆ ಬ್ಯಾಂಕ್‌ಗಳು ಆರ್ಥಿಕವಾಗಿ ಸದೃಢವಾಗುತ್ತವೆ’ ಎಂದರು.

‘ಸಾಲಕ್ಕೆ ಮಾತ್ರ ಸಹಕಾರಿ ಸಂಸ್ಥೆಗಳಲ್ಲ. ಸಹಕಾರಿ ಸಂಘಗಳು ಕೆಲ ಸಮಸ್ಯೆ ಎದುರಿಸುತ್ತಿವೆ. ಸಾಲ ಮನ್ನಾ ಮತ್ತು ಬಡ್ಡಿ ಹಣವನ್ನು ಸರ್ಕಾರಗಳು ಸಕಾಲಕ್ಕೆ ಬಿಡುಗಡೆ ಮಾಡಲ್ಲ. ಸರ್ಕಾರದ ವಿವಿಧ ಇಲಾಖೆಗಳ ಠೇವಣಿಯನ್ನು ಸಹಕಾರಿ ಸಂಸ್ಥೆಗಳಲ್ಲಿ ಇಡುವುದಿಲ್ಲ. ಇದು ಸಹಕಾರಿ ಸಂಸ್ಥೆಗಳ ಹಿನ್ನಡೆಗೆ ಕಾರಣವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಮಸ್ಯೆ ನಡುವೆಯೂ ನಬಾರ್ಡ್, ಅಫೆಕ್ಸ್ ಬ್ಯಾಂಕ್ ನೆರವು, ಸ್ವಂತ ಬಂಡವಾಳ ಸೇರಿಸಿ ಸಾಲ ವಿತರಣೆ ಗುರಿ ತಲುಪಬೇಕು. ರೈತರ ನಿರೀಕ್ಷೆಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ಸಹಕಾರಿಗಳ ಆದ್ಯ ಕರ್ತವ್ಯ. ವಾಣಿಜ್ಯ ಬ್ಯಾಂಕ್‌ಗಳು ಕಾರಲ್ಲಿ ಹೋದವರಿಗೆ ಮಾತ್ರ ಸಾಲ ನೀಡುತ್ತವೆ. ಬರಿಗಾಲಲ್ಲಿ ಹೋದವರನ್ನು ಬ್ಯಾಂಕ್‌ನ ಒಳಗೂ ಬಿಟ್ಟುಕೊಳ್ಳುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಡಮಾನ: ‘ಸ್ತ್ರೀಶಕ್ತಿ ಸಂಘಗಳಿಗೆ ಭದ್ರತೆ ಇಲ್ಲದೆ ಸಾಲ ನೀಡುತ್ತೇವೆ. ಮಹಿಳೆಯರ ಪ್ರಾಮಾಣಿಕತೆಯೇ ಅಡಮಾನ. ವಾಣಿಜ್ಯ ಬ್ಯಾಂಕ್‌ಗಳು ಈ ಕೆಲಸ ಮಾಡುವುದಿಲ್ಲ. ಸೊಸೈಟಿಗಳು ಬಲಗೊಳ್ಳಲು ಪ್ರಾಮಾಣಿಕತೆ, ಪಾರದರ್ಶಕತೆಗೆ ಒತ್ತು ನೀಡಬೇಕು’ ಎಂದು ಕಿವಿಮಾತು ಹೇಳಿದರು.

‘ಪ್ಯಾಕ್ಸ್‌ ಸಿಇಒಗಳ ಜವಾಬ್ದಾರಿ ಹೆಚ್ಚಿದೆ. ಅಭಿವೃದ್ಧಿಗೆ ದಕ್ಷತೆ, ನಿರ್ವಹಣೆ, ಸಿಇಒಗಳ ಪ್ರಾಮಾಣಿಕತೆಯೇ ಆಧಾರ. ಸಾಲ ಸದ್ಬಳಕೆ ಮಾಡಿಕೊಳ್ಳುವವರನ್ನು ಹುಡುಕಿ ಸಾಲ ಕೊಡಿ. ಸೋಮಾರಿಗಳಿಗೆ ಸಾಲ ಬೇಡ. ಅವಳಿ ಜಿಲ್ಲೆಯ ಪ್ಯಾಕ್ಸ್‌ಗಳಿಗೆ ಇನ್ನೂ 100 ಕಂಪ್ಯೂಟರ್‌ ಒದಗಿಸುತ್ತೇವೆ’ ಎಂದು ಭರವಸೆ ನೀಡಿದರು.

ಶಾಸಕಿ ಎಂ.ರೂಪಕಲಾ ಮೈಕ್ರೊ ಎಟಿಎಂ ಸೇವೆಗೆ ಚಾಲನೆ ನೀಡಿದರು. ಶಾಸಕ ಕೆ.ಶ್ರೀನಿವಾಸಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ, ಉಪಾಧ್ಯಕ್ಷ ನಾಗರಾಜ್, ನಬಾರ್ಡ್ ಸಹಾಯಕ ಪ್ರಧಾನ ವ್ಯವಸ್ಥಾಪಕ ನಟರಾಜನ್, ಅಫೆಕ್ಸ್ ಬ್ಯಾಂಕ್ ನಿರ್ದೇಶಕ ನೀಲಕಂಠೇಗೌಡ, ವ್ಯವಸ್ಥಾಪಕ ನಿರ್ದೇಶಕ ವೆಂಕಟಸ್ವಾಮಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.