ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಎಸ್‌ಡಿಪಿಐ–ಪಿಎಫ್‌ಐ ನಿಷೇಧಿಸಿ

Last Updated 13 ಆಗಸ್ಟ್ 2020, 16:35 IST
ಅಕ್ಷರ ಗಾತ್ರ

ಕೋಲಾರ: ‘ಬೆಂಗಳೂರಿನ ದೇವರಜೀವನಹಳ್ಳಿ ಹಾಗೂ ಕಾಡುಗೊಂಡನಹಳ್ಳಿಯಲ್ಲಿ ನಡೆದ ದಾಂಧಲೆ ಅಮಾನೀಯ ಕೃತ್ಯ. ಇಂತಹ ಕುಕೃತ್ಯ ಎಸಗುವವರು ನಿಜಕ್ಕೂ ಭಯೋತ್ಪಾದಕರು’ ಎಂದು ಸಂಸದ ಎಸ್.ಮುನಿಸ್ವಾಮಿ ಕಿಡಿಕಾರಿದರು.

ಇಲ್ಲಿ ಗುರುವಾರ ಸುದ್ದಿಗಾರೊಂದಿಗೆ ಮಾತನಾಡಿ, ‘ಮೊದಲೇ ಸಂಚು ರೂಪಿಸಿ ವ್ಯವಸ್ಥಿತವಾಗಿ ದಾಂಧಲೆ ನಡೆಸಲಾಗಿದೆ. ಕಿಡಿಗೇಡಿಗಳು ಶಾಸಕರ ಮನೆ, ಪೊಲೀಸ್‌ ಠಾಣೆ ಧ್ವಂಸ ಮಾಡಿರುವುದರ ಜತೆಗೆ ಸಾರ್ವಜನಿಕರ ಆಸ್ತಿಗೆ ಹಾನಿ ಮಾಡಿದ್ದಾರೆ. ಅಲ್ಲದೇ, ವಾಹನಗಳನ್ನು ಸುಟ್ಟು ಭಸ್ಮ ಮಾಡಿದ್ದಾರೆ’ ಎಂದು ದೂರಿದರು.

‘ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ತೆಗೆದುಕೊಂಡ ಕ್ರಮದ ಮಾದರಿಯಲ್ಲೇ ಸಾರ್ವಜನಿಕರ ಆಸ್ತಿಗೆ ಹಾನಿ ಉಂಟು ಮಾಡಿದವರಿಂದಲೇ ನಷ್ಟ ವಸೂಲಿ ಮಾಡಬೇಕು. ರಾಜ್ಯದಲ್ಲಿ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು’ ಎಂದು ಒತ್ತಾಯಿದರು.

‘ಇಂತಹ ಕೃತ್ಯಗಳು ಮರುಕಳಿಸದಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಸಮಾಜದಲ್ಲಿ ಶಾಂತಿ ಕದಡುವ ವ್ಯಕ್ತಿಗಳನ್ನು ಸದೆ ಬಡಿಯಬೇಕು. ಸಾರ್ವಜನಿಕರಿಗೆ ರಕ್ಷಣೆ ಒದಗಿಸಬೇಕು. ಜನರನ್ನು ಮಾರಕಾಸ್ತ್ರಗಳಿಂದ ಥಳಿಸಿ ವಾಹನಗಳಿಗೆ ಬೆಂಕಿ ಹಚ್ಚಿರುವ ಕೃತ್ಯ ಖಂಡಿಸಬೇಕು. ಇದು ದೇಶದ್ರೋಹಿ ಚಟುವಟಿಕೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಶ್ವತ ಪರಿಹಾರ: ‘ಜಿಲ್ಲೆಯ ಬಂಗಾರಪೇಟೆ ಹಾಗೂ ಕೆಜಿಎಫ್ ತಾಲ್ಲೂಕುಗಳಲ್ಲಿ ಕಾಡಾನೆ ದಾಳಿಯಿಂದ ಐದಾರು ಮಂದಿ ಮೃತಪಟ್ಟಿದ್ದಾರೆ. ಈ ಸಂಗತಿಯನ್ನು ಅರಣ್ಯ ಇಲಾಖೆ ಸಚಿವ ಆನಂದ್‌ಸಿಂಗ್‌ ಹಾಗೂ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆನೆ ಕಾರಿಡಾರ್ ನಿರ್ಮಿಸುವ ಜಿಲ್ಲೆಯಲ್ಲಿ ಆನೆ ದಾಳಿ ಸಮಸ್ಯೆ ಶಾಶ್ವತವಾಗಿ ಪರಿಹರಿಸುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT