ಬಂಗಾರಪೇಟೆ: ಯಳೇಸಂದ್ರ ಸೌರ ವಿದ್ಯುತ್ ಸ್ಥಾವರಕ್ಕೆ ಕಾಯಕಲ್ಪ ಬೇಕಾಗಿದ್ದು, ಇದು ಸಾಧ್ಯವಾದರೆ ಸೌರ ಶಕ್ತಿಯಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆ.
ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಿ, ಅರುಣೋದಯ ಯೋಜನೆ ಮೂಲಕ ಗ್ರಾಮಸ್ಥರಿಗೆ ಪೂರೈಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು, ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಯಳೇಸಂದ್ರ ಗ್ರಾಮದ ಬಳಿ ಮೂರು ಮೆಗಾ ವಾಟ್ ಸೋಲಾರ್ ಸ್ಥಾವರ ನಿರ್ಮಿಸಿದೆ.
2009ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಸ್ಥಾವರ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿದ್ದರು. 15 ಎಕರೆ ಪ್ರದೇಶದಲ್ಲಿ ಟೈಟಾನ್ ಎನರ್ಜಿ ಸಿಸ್ಟಮ್ ಲಿಮಿಟೆಡ್ ಸ್ಥಾವರ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿತ್ತು. ಒಟ್ಟು ₹59 ಕೋಟಿ ವೆಚ್ಚದಲ್ಲಿ 10 ಎಕರೆ ಪ್ರದೇಶದಲ್ಲಿ ನೂತನ ತಂತ್ರಜ್ಞಾನದ 13,300 ಸೌರಫಲಕಗಳನ್ನು ಅಳವಡಿಸಲಾಗಿದೆ. ಸ್ಥಾವರದಿಂದ ನಿತ್ಯ 15 ಸಾವಿರ ಯುನಿಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದ್ದು, ಡಿಸಿ ವಿದ್ಯುತ್ ಅನ್ನು ಎಸಿ ವಿದ್ಯುತ್ ಆಗಿ ಪರಿವರ್ತಿಸಿ ಗ್ರಿಡ್‌ಗೆ ಪೂರೈಸಲು ಜರ್ಮನಿಯಿಂದ ತರಿಸಿಕೊಳ್ಳಲಾದ 12 ಇನ್ವರ್ಟರ್‌ಗಳನ್ನು ಅಳವಡಿಸಲಾಗಿದೆ.
ಈ ಯೋಜನೆಯಿಂದ ತಿಂಗಳಿಗೆ 90 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಿ ಸಬ್‌ಸ್ಟೇಷನ್‌ಗೆ ರವಾನೆಯಾಗಬೇಕು. ಆದರೆ, ಇದೀಗ ತಿಂಗಳಿಗೆ ಯಳೇಸಂದ್ರ ಸೋಲಾರ್ ಘಟಕಿಂದ ಬೂದಿಕೋಟೆಯ ಸಬ್‌ಸ್ಟೇಷನ್‌ಗೆ ತಿಂಗಳಿಗೆ 35–40 ಮೆಗಾವಾಟ್‌ನಷ್ಟು ವಿದ್ಯುತ್ ಮಾತ್ರವೇ ಸರಬರಾಜು ಆಗುತ್ತಿದೆ.
ಬೂದಿಕೋಟೆಯ ಸಬ್‌ಸ್ಟೇಷನ್‌ನಿಂದ 55 ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಆಗುತ್ತಿದೆ. ಪ್ರತಿದಿನ 20 ಮೆಗಾವಾಟ್ ಬೇಡಿಕೆ ಇದೆ. ಆದರೆ, ಸಬ್‌ಸ್ಟೇಷನ್‌ನಿಂದ ದಿನಕ್ಕೆ 10–12 ಮೆಗಾವಾಟ್ ವಿತರಣೆ ಮಾಡಲಾಗುತ್ತಿದೆ. ಇದರಿಂದಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತಿದೆ. ಮೂರು ಮೆಗಾವಾಟ್ ಸಾಮರ್ಥ್ಯದ ಸೌರ ಸ್ಥಾವರದಲ್ಲಿ ಉತ್ಪಾದನೆ ಅಗುತ್ತಿರುವ ವಿದ್ಯುತ್ ಬೂದಿಕೋಟೆ ಗ್ರಾಮಕ್ಕೂ ಸಾಕಾಗುತ್ತಿಲ್ಲ. 15 ಎಕರೆ ಪ್ರದೇಶದ ಪೈಕಿ ಕೇವಲ 10 ಎಕರೆಯಲ್ಲಿ ಮಾತ್ರ ಸೌರ ಫಲಕಗಳನ್ನು ಅಳವಡಿಸಲಾಗಿದ್ದು, ಉಳಿದ ಐದು ಎಕರೆ ಪ್ರದೇಶ ಖಾಲಿ ಇದೆ. ಈ ಸ್ಥಳದಲ್ಲಿ ಸೌರಫಲಕ ಅಳವಡಿಸಬೇಕು. ಜೊತೆಗೆ ಈಗಾಗಲೇ ಇರುವ ಫಲಕಗಳನ್ನು ಉನ್ನತೀಕರಿಸಿದರೆ, ಸ್ಥಾವರದಿಂದ ತಿಂಗಳಿಗೆ ಕನಿಷ್ಠ 150 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಸೌರ ಸ್ಥಾವರಕ್ಕೆ ಕಾಯಕಲ್ಪ ಕಲ್ಪಿಸಲು ಕಾರ್ಯಪ್ರವೃತ್ತವಾಗಬೇಕಿದೆ.
ರೈತರ ಕೃಷಿ ಚಟುವಟಿಕೆ ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗೆ ವಿದ್ಯುತ್ ಅಭಾವವಿದೆ. ಸೋಲಾರ್ ಸ್ಥಾವರದಿಂದ ಕಡಿಮೆ ವಿದ್ಯಾತ್ ಉತ್ಪಾದನೆ ಆಗುತ್ತಿದೆ. ನೂತನ ತಂತ್ರಜ್ಞಾನ ಅಳವಡಿಸಬೇಕು. ಜೊತೆಗೆ ಖಾಲಿ ಇರುವ ಐದು ಎಕರೆ ಪ್ರದೇಶದಲ್ಲಿ ಇನ್ನಷ್ಟು ಸೋಲಾರ್ ಪ್ಯಾನಲ್ ಅಳವಡಿಸಬೇಕು. ಇದರಿಂದ ವಿದ್ಯುತ್ ಉತ್ಪಾದನೆ ಹೆಚ್ಚಿ, ಅಭಾವ ಕಡಿಮೆಯಾಗಲಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹದೇವಣ್ಣ ಹೇಳಿದರು.
ಸೋಲಾರ್ ವಿದ್ಯುತ್ ಸ್ಥಾವರಕ್ಕೆ ಒಮ್ಮೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ಅದರ ಕಾರ್ಯ ವೈಖರಿ ತಿಳಿದುಕೊಳ್ಳಲಾಗುವುದು. ಅಗತ್ಯವಿದ್ದರೆ ಸರ್ಕಾರದ ಗಮನಕ್ಕೆ ತಂದು ಅನುದಾನ ಪಡೆದು ಅಭಿವೃದ್ಧಿಪಡಿಸಲಾಗುವುದು
- ಎಸ್.ಎನ್. ನಾರಾಯಣಸ್ವಾಮಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.