ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಮಾರ್ಪಾಡು ಅಗತ್ಯ: ಗೋವಿಂದಗೌಡ ಸಲಹೆ

ಸಹಕಾರಿ ತತ್ವಕ್ಕೆ ಧಕ್ಕೆ ಆಗಬಾರದು: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಸಲಹೆ
Last Updated 12 ಮೇ 2021, 15:25 IST
ಅಕ್ಷರ ಗಾತ್ರ

ಕೋಲಾರ: ‘ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ-2020ಕ್ಕೆ ಲೋಕಸಭೆ ಒಪ್ಪಿಗೆ ನೀಡಿದ್ದು, ಸಹಕಾರಿ ತತ್ವ ಮತ್ತು ಪ್ರಜಾಪ್ರಭುತ್ವದ ಸಿದ್ಧಾಂತಗಳಿಗೆ ಧಕ್ಕೆಯಾಗದಂತೆ ಕಾಯ್ದೆಯಲ್ಲಿ ಕೆಲ ಮಾರ್ಪಾಡು ಮಾಡುವ ಅಗತ್ಯವಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸಲಹೆ ನೀಡಿದರು.

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ತಿದ್ದುಪಡಿ ಕುರಿತಂತೆ ನಬಾರ್ಡ್, ಬ್ಯಾಂಕಿಂಗ್ ಇನ್‌ಸ್ಟಿಟ್ಯೂಟ್‌ ಆಫ್‌ ರೂರಲ್ ಡೆವಲಪ್‍ಮೆಂಟ್ ಸಂಸ್ಥೆ, ಅಫೆಕ್ಸ್ ಬ್ಯಾಂಕ್, ಸಹಕಾರ ಸಂಘಗಳ ನಿಬಂಧಕರ ಕಚೇರಿ ಸಹಯೋಗದಲ್ಲಿ ಇಲ್ಲಿ ಬುಧವಾರ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದರು.

‘ಠೇವಣಿದಾರರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಜಾರಿ ಮಾಡಿರುವ ಈ ಕಾಯ್ದೆ ಸ್ವಾಗತಾರ್ಹ. ಕೇವಲ ಅಧಿಕಾರಿಗಳಿಂದ ಸಹಕಾರ ರಂಗ ಬೆಳೆಸಲು ಅಸಾಧ್ಯ ಎಂಬುದನ್ನು ಮನಗಾಣಬೇಕು. ಸಹಕಾರ ತತ್ವಗಳಲ್ಲಿ ನಂಬಿಕೆಯುಳ್ಳ ಚುನಾಯಿತ ಆಡಳಿತ ಮಂಡಳಿ ಜತೆಗಿದ್ದರೆ ಮಾತ್ರ ಸಹಕಾರಿ ರಂಗದ ಬಲವರ್ಧನೆ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಇಷ್ಟು ದಿನ ಸಹಕಾರ ಸಂಘಗಳ ನಿಬಂಧಕರಿಗೆ ಸಹಕಾರಿ ಬ್ಯಾಂಕ್‌ಗಳ ಮೇಲೆ ಇದ್ದ ಅಧಿಕಾರವನ್ನು ಆರ್‌ಬಿಐ ತೆಗೆದುಕೊಳ್ಳುತ್ತಿದೆ ಮತ್ತು ಶೇ 51ರಷ್ಟು ನಿರ್ದೇಶಕರಿಗೆ ಕನಿಷ್ಠ ವಿದ್ಯಾರ್ಹತೆ ಇರಬೇಕೆಂಬ ಸಲಹೆ ಇದೆ’ ಎಂದು ವಿವರಿಸಿದರು.

ಆರ್‌ಬಿಐಗೆ ಅಧಿಕಾರ: ಕೇಂದ್ರ ಸರ್ಕಾರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ–1949ಕ್ಕೆ ತಿದ್ದುಪಡಿ ತಂದು 2020ರ ಸೆಪ್ಟೆಂಬರ್‌ ತಿಂಗಳಲ್ಲಿ ಸಂಸತ್ತಿನಲ್ಲಿ ಒಪ್ಪಿಗೆ ಪಡೆದುಕೊಂಡಿತ್ತು. ಈ ಕಾಯ್ದೆಯಲ್ಲಿನ ಅಂಶಗಳ ಕುರಿತು ಮಂಗಳೂರಿನ ಬ್ಯಾಂಕಿಂಗ್ ಇನ್‌ಸ್ಟಿಟ್ಯೂಟ್‌ ಆಫ್ ರೂರಲ್ ಡೆವಲಪ್‍ಮೆಂಟ್ ಸಂಸ್ಥೆ ಜಂಟಿ ನಿರ್ದೇಶಕ ಅರುಣ್ ತಲ್ಲೂರು ಮಾಹಿತಿ ನೀಡಿದರು.

‘ಡಿಸಿಸಿ ಬ್ಯಾಂಕ್‌ಗಳಲ್ಲಿನ ನಿರ್ದೇಶಕರ ಮಂಡಳಿ ಸೂಪರ್‌ ಸೀಡ್ ಆದಾಗ ವಿಶೇಷಾಧಿಕಾರಿ ನೇಮಿಸುವ ಮತ್ತು ಲೆಕ್ಕಪತ್ರ ಪರಿಶೋಧಕರನ್ನು ಬ್ಯಾಂಕ್‌ಗೆ ನೇಮಿಸುವ ಅಧಿಕಾರ ಆರ್‌ಬಿಐಗೆ ಇರುತ್ತದೆ. ಈಗಾಗಲೇ ಏ.1ರಿಂದ ನೂತನ ಕಾಯ್ದೆ ಜಾರಿಯಾಗಿದೆ. ಕಾಯ್ದೆ ಸಂಬಂಧ ಡಿಸಿಸಿ ಬ್ಯಾಂಕ್, ಅಫೆಕ್ಸ್ ಬ್ಯಾಂಕ್ ಆಡಳಿತ ಮಂಡಳಿಗಳಿಗೆ ಸ್ಪಷ್ಟತೆ ಮೂಡಿಸಲು ಆನ್‌ಲೈನ್ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಅರುಣ್ ತಲ್ಲೂರು ತಿಳಿಸಿದರು.

ವೇತನ ನಿಗದಿ: ‘ಕಾಯ್ದೆಯ ಸೆಕ್ಷನ್ 35 ಬಿ ಅಡಿಯಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು, ಅಧ್ಯಕ್ಷರು, ವ್ಯವಸ್ಥಾಪಕರ ವೇತನ ನಿಗದಿ ಅಧಿಕಾರ ಆರ್‌ಬಿಐ ಪಡೆಯುವುದು ಸರಿಯಾದ ಕ್ರಮವಲ್ಲ. ಬ್ಯಾಂಕ್‌ನ ಆರ್ಥಿಕ ಶಕ್ತಿಗೆ ಅನುಗುಣವಾಗಿ ವೇತನ ನಿಗದಿ ಮಾಡುವ ಅಧಿಕಾರ ಬ್ಯಾಂಕ್‌ಗೆ ಇರಬೇಕು’ ಎಂದು ಗೋವಿಂದಗೌಡ ಸಲಹೆ ನೀಡಿದರು.

‘ಹೊಸ ಕಾಯ್ದೆಯಿಂದ ಸಹಕಾರಿ ರಂಗ ಉಳಿಯುತ್ತೋ, ಬೆಳೆಯುತ್ತೋ ಎಂಬ ವಿಮರ್ಶೆ ಬೇಕು. ನಮ್ಮ ಅನುಮಾನಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಲಿದ್ದು, ಪರಿಹಾರ ನೀಡಬೇಕು’ ಎಂದು ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮನವಿ ಮಾಡಿದರು.

ನಬಾರ್ಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ನೀರಜ್‌ಕುಮಾರ್ ವರ್ಮ, ಅಫೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ದೇವರಾಜ್, ಉಪ ಪ್ರಧಾನ ವ್ಯವಸ್ಥಾಪಕ ರವಿಶಂಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗಿರೆಡ್ಡಿ, ಮೋಹನ್‌ರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಭಾಗಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT