ಶುಕ್ರವಾರ, ಜುಲೈ 30, 2021
21 °C
ಹಾಲು ಉತ್ಪಾದಕರ ಆರೋಗ್ಯ ರಕ್ಷಣೆಗೆ ಡಿಸಿಸಿ ಬ್ಯಾಂಕ್‌ನ ಮೊಬೈಲ್ ಎಟಿಎಂ

ಮನೆ ಬಾಗಿಲಲ್ಲೇ ಬ್ಯಾಂಕಿಂಗ್‌ ಸೇವೆ: ಬ್ಯಾಲಹಳ್ಳಿ ಎಂ.ಗೋವಿಂದಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್ 2ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ರೈತರು ಹಾಗೂ ಹಾಲು ಉತ್ಪಾದಕರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಅವರ ಮನೆ ಬಾಗಿಲಿಗೆ ಬ್ಯಾಂಕಿಂಗ್‌ ಸೇವೆ ಒದಗಿಸಲಾಗುತ್ತದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತೆರಳಿದ ಎಟಿಎಂ, ಮೈಕ್ರೋ ಎಟಿಎಂ ಸೌಲಭ್ಯ ಹೊಂದಿರವ ಸುಸಜ್ಜಿತ ಮೊಬೈಲ್ ಬ್ಯಾಂಕಿಂಗ್ ವಾಹನಕ್ಕೆ ಇಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿ, ‘ಜಿಲ್ಲೆಯ ಜೀವಾಳವಾಗಿರುವ ಹೈನುಗಾರಿಕೆಯು ಗ್ರಾಮೀಣ ಜನರ ಬದುಕಿಗೆ ರಕ್ಷಣೆ ನೀಡಿದೆ’ ಎಂದರು.

‘454 ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ 14,260 ಮಂದಿ ಹಾಲು ಉತ್ಪಾದಕ ರೈತರ ಉಳಿತಾಯ ಖಾತೆಗಳು ಡಿಸಿಸಿ ಬ್ಯಾಂಕ್‌ನಲ್ಲಿವೆ. ಈ ರೈತರು ಎಂಪಿಸಿಎಸ್‌ಗಳಿಗೆ ಹಾಕುವ ಹಾಲಿನ ಬಟವಾಡೆ ಹಣವನ್ನು ಹಾಲು ಒಕ್ಕೂಟವು ಅವರ ಖಾತೆಗೆ ತುಂಬುತ್ತದೆ. ಈ ಹಣವನ್ನು ಪಡೆಯಲು ರೈತರು ಬ್ಯಾಂಕ್‌ಗೆ ಬರಲು ಕೋವಿಡ್ ಮಾರಿ ಅಡ್ಡಿಯಾಗಿದೆ. ಗ್ರಾಮೀಣ ಪ್ರದೇಶಕ್ಕೂ ಕೊರೊನಾ ಸೋಂಕು ಹರಡಿ ರೈತರನ್ನು ಆತಂಕಕ್ಕೆ ದೂಡಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕೋವಿಡ್‌ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ಆರೋಗ್ಯದ ದೃಷ್ಟಿಯಿಂದ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ವಾಹನ, ಮೈಕ್ರೋ ಎಟಿಎಂ ಸೌಲಭ್ಯ ಕಲ್ಪಿಸಿದೆ. ಪ್ರತಿ ಹಾಲು ಉತ್ಪಾದಕರಿಗೂ ಎಟಿಎಂ ಕಾರ್ಡ್ ನೀಡಲಾಗಿದೆ. ಎಟಿಎಂ ಕಾರ್ಡ್‌ ಅಗತ್ಯವಿರುವವರು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು’ ಎಂದು ಹೇಳಿದರು.

‘ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯದರ್ಶಿಗಳು ಕರೆ ಮಾಡಿದರೆ ಮೊಬೈಲ್ ಬ್ಯಾಂಕಿಂಗ್ ವಾಹನ ದಿನದ 24 ತಾಸು ಸೇವೆಗೆ ಸಿದ್ಧವಿದೆ. ವಾಹನವು ಸಹಕಾರ ಸಂಘದ ಮುಂದೆ ಬಂದು ನಿಲ್ಲುತ್ತದೆ. ಬಳಿಕ ರೈತರು ಅಲ್ಲಿಗೆ ಬಂದು ಎಟಿಎಂ ಮೂಲಕ ತಮ್ಮ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳಬಹುದು. ಇದಕ್ಕೆ ಬ್ಯಾಂಕ್ ಯಾವುದೇ ಶುಲ್ಕ ವಿಧಿಸುವುದಿಲ್ಲ’ ಎಂದು ವಿವರಿಸಿದರು.

ರಕ್ಷಿಸುವ ಪ್ರಯತ್ನ: ‘ಮೊಬೈಲ್ ಎಟಿಎಂ ವಾಹನದ ಮೂಲಕ ರೈತರನ್ನು ಕೋವಿಡ್‌ನಿಂದ ರಕ್ಷಿಸುವ ಪ್ರಾಮಾಣಿಕ ಪ್ರಯತ್ನ, ಅನ್ನದಾತರಿಗೆ ಹಣಕಾಸು ನಿರ್ವಹಣೆ ಮತ್ತು ಡಿಜಿಟಲ್ ಸಾಕ್ಷರತೆ ಕುರಿತು ಅರಿವು ನೀಡುವ ಕೆಲಸವನ್ನು ಬ್ಯಾಂಕ್ ಮಾಡುತ್ತಿದೆ. ರೇಷ್ಮೆ ಬೆಳೆಗಾರರು ಹಾಗೂ ರೈತರ ಸಹಕಾರ ಸಂಘಗಳಿಗೆ ಈಗಾಗಲೇ ಮೈಕ್ರೋ ಎಟಿಎಂ ನೀಡಲಾಗಿದೆ. ಅಲ್ಲಿಯೂ ರೈತರು ಹಣ ಡ್ರಾ ಅಥವಾ ಸಂದಾಯ ಮಾಡಲು ಅವಕಾಶ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಹಾಲು ಉತ್ಪಾದಕರಿಗೆ ಬಟವಾಡೆ ಹಣ ಡ್ರಾ ಮಾಡಲು ಅಗತ್ಯವಿದ್ದರೆ ಆಯಾ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳು ಡಿಸಿಸಿ ಬ್ಯಾಂಕ್‌ನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬೇಕು. 9449252678, 8660547217 ಅಥವಾ 9686088093 ಮೊಬೈಲ್‌ ಸಂಖ್ಯೆ ಸಂಪರ್ಕಿಸಿ ಮೊಬೈಲ್ ಬ್ಯಾಂಕಿಂಗ್ ಸೇವೆ ಪಡೆಯಬಹುದು’ ಎಂದರು.

ಮೈಲಿಗಲ್ಲು: ‘ರೈತರು, ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಬದ್ಧವಾಗಿರುವ ಬ್ಯಾಂಕ್‌ಗೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಿಗುವ ಎಲ್ಲಾ ಆನ್‌ಲೈನ್‌ ಸೇವೆಗಳು ಇಲ್ಲಿಯೂ ಲಭ್ಯವಿವೆ. ರೈತರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸುತ್ತಿರುವುದು ಬ್ಯಾಂಕಿಂಗ್ ಇತಿಹಾಸದಲ್ಲೇ ಮೈಲಿಗಲ್ಲು. ರೈತರು ಮತ್ತು ಹಾಲು ಉತ್ಪಾದಕರು ಬ್ಯಾಂಕಿಂಗ್‌ ಸೇವೆಯ ಸದುಪಯೋಗ ಪಡೆಯಬೇಕು’ ಎಂದು ಮನವಿ ಮಾಡಿದರು.

ಬ್ಯಾಂಕ್‌ನ ಅಧಿಕಾರಿಗಳಾದ ಹುಸೇನ್‌ ದೊಡ್ಡಮನಿ, ಅಮೀನಾ, ಅಬ್ದುಲ್ ಜಬ್ಬಾರ್, ಸತೀಶ್, ನಾಗರಾಜ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು