ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಮಲ್‌ ಕಾಂಟ್ರಾಕ್ಟ್‌ ಕಾರ್ಮಿಕರಿಂದ ಸಾಂಕೇತಿಕ ಪ್ರತಿಭಟನೆ

Published 24 ಜೂನ್ 2024, 15:55 IST
Last Updated 24 ಜೂನ್ 2024, 15:55 IST
ಅಕ್ಷರ ಗಾತ್ರ

ಕೆಜಿಎಫ್: ಬೆಮಲ್ ಕಾಂಟ್ರಾಕ್ಟ್ ಆಪರೇಟರ್ಸ್‌ಗಳಿಗೆ ಆಡಳಿತ ವರ್ಗದಿಂದ ಬರಬೇಕಾದ ಸವಲತ್ತು ನೀಡಲು ಬೆಮಲ್ ಆಡಳಿತ ವರ್ಗ ನಿರಾಕರಿಸುತ್ತಿರುವುದರಿಂದ ಸೋಮವಾರ ಡಿಮಾಂಡ್‌ ಬಾಡ್ಜ್ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಬೆಮಲ್‌ ಕಂಪನಿ ಅಭಿವೃದ್ಧಿಯಾಗಬೇಕು. ಲಾಭದಾಯಕವಾಗಿ ನಡೆಯಬೇಕು ಎಂಬ ದೃಷ್ಟಿಯಿಂದ ಕಾಯಂ ನೌಕರರಷ್ಟೇ ಕಾಂಟ್ರಾಕ್ಟ್ ಆಪರೇಟರ್ಸ್‌ ಕೂಡ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಸಿಗುವ ಸೌಲಭ್ಯಗಳನ್ನು ನಮಗೆ ನೀಡುತ್ತಿಲ್ಲ. ಬೆಮಲ್ ಪ್ರಾರಂಭವಾಗಿ 60 ವರ್ಷವಾದ ಹಿನ್ನಲೆ ಕಾಯಂ ನೌಕರರಿಗೆ ಚಿನ್ನದ ನಾಣ್ಯ ನೀಡಿದ್ದಾರೆ. ಆದರೆ, ಕಾಂಟ್ರಾಕ್ಟ್‌ ಆಪರೇಟರ್ಸ್‌ಗಳಿಗೆ ಏನೂ ನೀಡಿಲ್ಲ. ಕಾಂಟ್ರಾಕ್ಟ್ ಆಪರೇಟರ್ಸ್‌ ಅವರಿಗೆ ವೇತನ ಪರಿಷ್ಕರಣೆ ಮಾಡಲು ಬಹಳ ದಿನಗಳಿಂದ ಬೇಡಿಕೆ ನೀಡುತ್ತಲೇ ಇದ್ದೇವೆ. ಆದರೆ, ಆಡಳಿತ ವರ್ಗ ಮಾತುಕತೆ ಮುಂದೂಡುತ್ತಲೇ ಬಂದಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಬಿಜಿಎಂಎಲ್‌ ಮುಚ್ಚಿನ ನಂತರ ಬೆಮಲ್‌ ಮಾತ್ರ ಸ್ಥಳೀಯ ಜನರಿಗೆ ಉದ್ಯೋಗ ನೀಡುವ ಆಸರೆಯಾಗಿದೆ. ಸಾವಿರಾರು ಜನ ಬೆಮಲ್ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಈ ಹಿನ್ನಲೆ ಸಂಸದರು ಮತ್ತು ಶಾಸಕರು ಕಾಂಟ್ರಾಕ್ಟ್ ಆಪರೇಟರ್ಸ್‌ ಪರವಾಗಿ ಮಾತನಾಡಬೇಕು. ನಮ್ಮ ಸಮಸ್ಯೆ ಪರಿಹರಿಸುವಂತೆ ಆಡಳಿತ ವರ್ಗದ ಮೇಲೆ ಒತ್ತಡ ಹೇರಬೇಕು ಎಂದು ಕಾರ್ಮಿಕರು ಆಗ್ರಹಿಸಿದ್ದಾರೆ.

ಕಾರ್ಮಿಕರ ಸಮಸ್ಯೆ ನೀಗಿಸುವಂತೆ ಹಲವಾರು ಬಾರಿ ಸಾಂಕೇತಿಕ ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದೇವೆ. ನಮ್ಮ ಬೇಡಿಕೆಯನ್ನು ಆಡಳಿತ ವರ್ಗ ಗಂಭೀರವಾಗಿ ತೆಗೆದುಕೊಂಡಿಲ್ಲ. ಕಂಪನಿಯ ಉತ್ಪಾದನೆ ಕೊರತೆ ಆಗದಂತೆ ಇದುವರೆವಿಗೂ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಇದೇ ಪರಿಸ್ಥಿತಿ ಮುಂದುವರೆದರೆ ಕುಟುಂಬದ ಸದಸ್ಯರ ಸಮೇತ ತೀವ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಕಾರ್ಮಿಕರು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT