ಶನಿವಾರ, ನವೆಂಬರ್ 28, 2020
24 °C

ಸರ್ವರ್ ಸಮಸ್ಯೆ: ಪಡಿತರಕ್ಕೆ ಫಲಾನುಭವಿಗಳ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ಸರ್ವರ್ ಸಮಸ್ಯೆಯಿಂದಾಗಿ ತಾಲ್ಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಪದಾರ್ಥಗಳನ್ನು ಸಮಯಕ್ಕೆ ಸರಿಯಾಗಿ ವಿತರಿಸುತ್ತಿಲ್ಲ. ಹಾಗಾಗಿ ಪಡಿತರ ಚೀಟಿದಾರರು ನಿತ್ಯ ಅಂಗಡಿಗಳ ಮುಂದೆ ಕಾಯುವ ಅನಿವಾರ್ಯತೆ ತಲೆದೋರಿದೆ.

ದೀಪಾವಳಿ ಹಬ್ಬದ ಬಳಿಕ ತಾಲ್ಲೂಕಿನಲ್ಲಿ ಆಹಾರ ಇಲಾಖೆಯ ಸರ್ವರ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕಳೆದ ಐದು ದಿನಗಳಿಂದಲೂ ಅಕ್ಕಿ ವಿತರಣೆಗೆ ಬಯೊಮೆಟ್ರಿಕ್ ಪಡೆಯಲು ಸಾಧ್ಯವಾಗದೆ ನ್ಯಾಯಬೆಲೆ ಅಂಗಡಿ ಮಾಲೀಕರು ಪರದಾಡುತ್ತಿದ್ದಾರೆ. ಅಕ್ಕಿ ಪಡೆಯಲು ಪಡಿತರದಾರರು ಇಡೀ ದಿನ ಕಾಯ್ದು ಮನೆಗೆ ಹಿಂತಿರುಗುವ ಪರಿಸ್ಥಿತಿ ಉಂಟಾಗಿದೆ.

ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಸಮಸ್ಯೆ ಹೆಚ್ಚಾಗಿದೆ. ತಿಂಗಳ ಅಂತ್ಯ ಸಮೀಪಿಸುತ್ತಿದ್ದರೂ ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡುದಾರರಿಗೆ ಅಕ್ಕಿ ವಿತರಣೆ ಮಾಡಲಾಗುತ್ತಿಲ್ಲ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಪಡಿತರದಾರರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೆ ತಿಂಗಳ 1ನೇ ತಾರೀಖಿನಿಂದಲೇ ನ್ಯಾಯಬೆಲೆ ಅಂಗಡಿಗಳಿಗೆ ಅಧಿಕಾರಿಗಳು ಅಕ್ಕಿ ಸರಬರಾಜು ಮಾಡುತ್ತಿದ್ದರು. ಅಂದಿನಿಂದಲೇ ವಿತರಣೆ ನಡೆಯುತ್ತಿತ್ತು. ಆದರೆ, ಈಗ ಪ್ರತಿ ತಿಂಗಳು 11ರ ಬಳಿಕವೇ ಪಡಿತರ ವಿತರಣೆ ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿರುವುದು ಮತ್ತೊಂದು ಸಮಸ್ಯೆಗೆ ಕಾರಣವಾಗಿದೆ.

ತಿಂಗಳ ಆರಂಭದಲ್ಲಿ ಸರ್ವರ್ ಚೆನ್ನಾಗಿದ್ದು, ಮಧ್ಯೆದಲ್ಲಿ ಕೈಕೊಡುತ್ತಿರುವುದರಿಂದ ಬಡವರು ಅನ್ನಭಾಗ್ಯದಿಂದ ವಂಚಿತರಾಗುತ್ತಿದ್ದಾರೆ ಎನ್ನುವುದು ಪಡಿತರ ಅಂಗಡಿ ಮಾಲೀಕರ ಆರೋಪ.

‘ಇಲಾಖೆಯ ಅಧಿಕಾರಿಗಳು ಸರ್ವರ್ ಸಮಸ್ಯೆ ಸರಿಪಡಿಸದಿದ್ದರೆ ಪಡಿತರ ಚೀಟಿದಾರರು ಒಟ್ಟಾಗಿ ತಾಲ್ಲೂಕು ಕಚೇರಿ ಮುಂದೆ ಹೋರಾಟ ಮಾಡಲಾಗುವುದು’ ಎಂದು ಪಡಿತರದಾರ ಮುರಳಿ ಪ್ರತಿಕ್ರಿಯಿಸಿದರು. ‘ಜಿಲ್ಲೆಯಾದ್ಯಂತ ಆಹಾರ ಇಲಾಖೆಯ ಸರ್ವರ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಬೆಂಗಳೂರಿನಲ್ಲಿ ಸೂಕ್ತ ನಿರ್ವಹಣೆ ಮಾಡದ ಕಾರಣ ಸಮಸ್ಯೆಯಾಗುತ್ತಿದೆ’ ಎಂದು ಆಹಾರ ನಿರೀಕ್ಷಕ ಲೋಕೇಶ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.