ಭಾನುವಾರ, 20 ಜುಲೈ 2025
×
ADVERTISEMENT
ADVERTISEMENT

ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಘಟನೆಗೆ ಆಕ್ರೋಶ
Published : 17 ಜೂನ್ 2025, 13:53 IST
Last Updated : 17 ಜೂನ್ 2025, 13:53 IST
ಫಾಲೋ ಮಾಡಿ
0
ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಬೆಂಗಳೂರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಘಟನೆ ಖಂಡಿಸಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಮಾಲೂರು ಪಟ್ಟಣದ ಮಾರಿಕಾಂಬ ವೃತ್ತದಲ್ಲಿ ತಾಲ್ಲೂಕು ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಸಲಾಯಿತು

ಮಾಲೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಘಟನೆ ಖಂಡಿಸಿ ತಾಲ್ಲೂಕು ಬಿಜೆಪಿ ಘಟಕದಿಂದ ಇಲ್ಲಿನ ಮಾರಿಕಾಂಬ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. 

ADVERTISEMENT
ADVERTISEMENT

ಈ ವೇಳೆ 11 ಮಂದಿ ಅಮಾಯಕರನ್ನು ಬಲಿತೆಗೆದುಕೊಂಡ ಕಾಲ್ತುಳಿತದ ಘಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಕಾರಣವಾಗಿದ್ದು, ಈ ಇಬ್ಬರು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು. 

ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಟಿ.ಬಿ. ಕೃಷ್ಣಪ್ಪ ಮಾತನಾಡಿ, ‘ಆರ್‌ಸಿಬಿ ಗೆಲುವಿಗಾಗಿ ಅಭಿಮಾನಿಗಳು ಸತತ 18 ವರ್ಷಗಳಿಂದ ಕಾಯುತ್ತಿದ್ದರು. ಐಪಿಎಲ್‌ನಲ್ಲಿ ಆರ್‌ಸಿಬಿ ಕಪ್ ಗೆಲ್ಲಬೇಕೆಂಬ 18 ವರ್ಷಗಳ ಕನಸು ನನಸಾದ ಕಾರಣ ಸಾವಿರಾರು ಅಭಿಮಾನಿಗಳು ರಾಜ್ಯದಾದ್ಯಂತ ಸಂಭ್ರಮಾಚರಣೆ ಮಾಡಿದ್ದರು. ಆರ್‌ಸಿಬಿ ಆಟಗಾರರಿಗೆ ಸನ್ಮಾನ ರೀತಿಯ ಕಾರ್ಯಕ್ರಮ ಹಮ್ಮಿಕೊಂಡರೆ, ಎಷ್ಟು ಮಂದಿ ಪಾಲ್ಗೊಳ್ಳಬಹುದು ಎಂಬ ಬಗ್ಗೆ ಪೂರ್ವಪ್ರಜ್ಞೆ ಇಲ್ಲದ ಸರ್ಕಾರವು ತನ್ನ ಸ್ವಪ್ರತಿಷ್ಠೆಗಾಗಿ ಯಾವುದೇ ಸಿದ್ಧತೆ ಮಾಡಿಕೊಳ್ಳದೆ, ಈ ದುರ್ಘಟನೆಗೆ ಕಾರಣವಾಗಿದೆ’ ಎಂದು ಆರೋಪಿಸಿದರು. 

‘ತರಾತುರಿಯಲ್ಲಿ ವಿಧಾನಸೌಧದ ಮುಂದೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಕುಟುಂಬದ ಮಕ್ಕಳು ಆಟಗಾರರ ಜೊತೆ ಫೋಟೊ ತೆಗೆಸಿಕೊಂಡರು. ನಂತರ ಯಾವುದೇ ಮುನ್ನೆಚ್ಚರಿಕಾ ಕ್ರಮ ವಹಿಸದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಣೆಗೆ ಅವಕಾಶ ಕಲ್ಪಿಸಿದ ಕಾರಣ ಕಾಲ್ತುಳಿತ ಸಂಭವಿಸಿದೆ. ಇದಕ್ಕೆ ಸರ್ಕಾರವೇ ನೇರ ಹೊಣೆ. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಲೇಬೇಕು’ ಎಂದು ಪಟ್ಟು ಹಿಡಿದರು. 

ADVERTISEMENT

ತಾಲ್ಲೂಕು ಸೇರಿದಂತೆ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ವಿರೋಧ ಪಕ್ಷದ ಶಾಸಕರಿಗೆ ಸಚಿವರು ಸ್ಪಂದಿಸುತ್ತಿಲ್ಲ. ಯಾವುದೇ ಇಲಾಖೆಯಲ್ಲಿ ಲಂಚವಿಲ್ಲದೆ ಜನರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಜನರ ಸಂಕಷ್ಟಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಕಾರರು ದೂರಿದರು. 

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪುರ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಪದ್ಮಾವತಿ, ಪುರಸಭೆ ಸದಸ್ಯ ವೇಮನ, ವೆಂಕಟೇಶ್, ಅನಿತಾ ನಾಗರಾಜ್, ಅಪ್ಪಿ, ವೆಂಕಟೇಶ್, ದೊಡ್ಡಿ ರಾಜಪ್ಪ, ಬೆಳ್ಳಾವಿ ಸೋಮಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0