ಸೋಮವಾರ, ಮಾರ್ಚ್ 30, 2020
19 °C
ಸಿಎಎ ವಿರೋಧಿ ಸಭೆ

ಬಿಜೆಪಿ ಮುಖಂಡರದು ಗೋಡ್ಸೆ ಸಂತತಿ: ಹೋರಾಟಗಾರ್ತಿ ಅಮೂಲ್ಯಾ ಲಿಯೋನಾ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಾತಿ, ಧರ್ಮದ ಆಧಾರದಲ್ಲಿ ಕಾನೂನು ಜಾರಿಗೆ ತರುವವರು ದೇಶದ್ರೋಹಿಗಳು’ ಎಂದು ಹೋರಾಟಗಾರ್ತಿ ಅಮೂಲ್ಯಾ ಲಿಯೋನಾ ಬಿಜೆಪಿ ಮುಖಂಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಹೋರಾಟ ಸಮಿತಿಯು ಇಲ್ಲಿ ಭಾನುವಾರ ಎನ್‌ಆರ್‌ಸಿ ಮತ್ತು ಸಿಎಎ ವಿರೋಧಿಸಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ. ನಿರ್ಗತಿಕರು ಹಾಗೂ ಶೋಷಿತರನ್ನು ದೇಶದಿಂದ ಓಡಿಸುವ ಕಾನೂನು ಜಾರಿಗೆ ತರಲು ಮುಂದಾಗಿದೆ’ ಎಂದು ಕಿಡಿಕಾರಿದರು.

‘ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸರ್ವಾಧಿಕಾರಿಗಳಂತೆ ಅಧಿಕಾರ ನಡೆಸುತ್ತಿದ್ದಾರೆ. ಸಂಘ ಪರಿವಾರದವರನ್ನು ಎತ್ತಿಕಟ್ಟಿ ಸಮಾಜದಲ್ಲಿ ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ. ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ ಗೋಡ್ಸೆ ಸಂತತಿಯ ಬಿಜೆಪಿ ಮುಖಂಡರು ದೇಶಭಕ್ತರಂತೆ ವರ್ತಿಸುತ್ತಿದ್ದಾರೆ’ ಎಂದು ಅಣಕಿಸಿದರು.

‘ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ಅಧಿಕಾರದಲ್ಲಿ ಕೂರಿಸಿದ ಪ್ರತಿ ಪ್ರಜೆಗೂ ಸರ್ಕಾರದ ನಡೆ ಪ್ರಶ್ನಿಸುವ ಜವಾಬ್ದಾರಿಯಿದೆ. ಸಂವಿಧಾನವು ಪ್ರತಿಯೊಬ್ಬರಿಗೂ ಬದುಕುವ ಹಕ್ಕು ನೀಡಿದೆ. ಜನರನ್ನು ಪ್ರಶ್ನಿಸಿದರೆ ಸಂವಿಧಾನವನ್ನು ಪ್ರಶ್ನಿಸಿದಂತೆ. ಕೇಂದ್ರ ಸರ್ಕಾರವು ಮನುಷ್ಯರನ್ನು ಮನುಷ್ಯರಾಗಿ ಕಾಣುವ ಪ್ರವೃತ್ತಿ ಮೈಗೂಡಿಸಿಕೊಳ್ಳಬೇಕು’ ಎಂದರು.

‘ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಅಲ್ಲಿನ ಜನರಿಂದ ಕಿರುಕುಳಕ್ಕೆ ಒಳಗಾಗಿರುವವರಿಗೆ ಕೇಂದ್ರವು ಭಾರತದ ಪೌರತ್ವ ನೀಡಲು ಮುಂದಾಗಿದೆ. ಆದರೆ, ಶ್ರೀಲಂಕಾ, ಚೀನಾ ಸೇರಿದಂತೆ ಇತರೆ ದೇಶಗಳಲ್ಲಿ ಯಾರು ತೊಂದರೆಗೆ ಒಳಗಾಗಿಲ್ಲವೆ? ಸರ್ಕಾರದ ಅಧಿಕಾರಿಗಳು ಮನೆ ಬಳಿ ಬಂದು ರಾಷ್ಟ್ರೀಯ ನೋಂದಣಿ ಪ್ರಕ್ರಿಯೆಗೆ (ಎನ್‌ಆರ್‌ಸಿ) ದಾಖಲೆ ಕೇಳಿದರೆ ಜನ ಎಲ್ಲಿಂದ ತರಬೇಕು?’ ಎಂದು ಪ್ರಶ್ನಿಸಿದರು.

ಅರಾಜಕತೆ ಸೃಷ್ಟಿ: ‘ನೋಟು ಅಮಾನ್ಯೀಕರಣ ಕ್ರಮದಿಂದ ಕೋಟ್ಯಂತರ ಬಡವರು, ಸಣ್ಣ ವ್ಯಾಪಾರಿಗಳು ಬೀದಿಗೆ ಬಿದ್ದಿದ್ದಾರೆ. ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಎಲ್ಲೆಡೆ ನಿರುದ್ಯೋಗ ತಾಂಡವವಾಡುತ್ತಿದೆ. ಕೇಂದ್ರವು ಉದ್ಯೋಗ ಕಲ್ಪಿಸುವ ಯೋಜನೆ ರೂಪಿಸಿಲ್ಲ. ಸಂಘ ಪರಿವಾರದವರು ನರಹಂತಕರ ರೀತಿಯಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಸಿಎಎ, ಎನ್‌ಆರ್‌ಸಿ ವಿರುದ್ಧ ಹೋರಾಟ ನಡೆಸುವವರ ಮೇಲೆ ಕೇಂದ್ರವು ಎಬಿವಿಪಿ ಕಾರ್ಯಕರ್ತರನ್ನು ಛೂಬಿಟ್ಟು ಹಲ್ಲೆ ಮಾಡಿಸಿತು. ಅಲ್ಲದೇ, ದೇಶದ್ರೋಹದ ಪಟ್ಟ ಕಟ್ಟಿ ದೂರು ದಾಖಲಿಸಿತು. ನ್ಯಾಯಯುತ ಹೋರಾಟ ಹತ್ತಿಕ್ಕುವ ದೇಶದ್ರೋಹಿಗಳಿಗೆ ನಾವು ಭಯ ಪಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಅಧಿಕಾರಿಗಳು ದೇಶದ ಪೌರತ್ವಕ್ಕೆ ಸಂಬಂಧಿಸಿದ ದಾಖಲೆಪತ್ರ ಕೇಳಿದರೆ ಬಿಳಿ ಕಾಗದ ತೋರಿಸಲು ಸಾಧ್ಯವೇ? ದೇಶದ ರಕ್ಷಣೆಗಾಗಿ ಸರ್ಕಾರದ ವಿರುದ್ಧ ನಿರಂತರವಾಗಿ ಹೋರಾಟ ನಡೆಸಬೇಕು. ಬಿಜೆಪಿ ಮತ್ತು ಆರ್‌ಎಸ್‌ಎಸ್‌್ ಮುಖಂಡರ ಮುಖವಾಡ ಕಳಚಬೇಕು’ ಎಂದು ಕೋರಿದರು.

ಹೋರಾಟ ನಡೆಸಿ: ‘ಮುಸ್ಲಿಮರು ಹಾಗೂ ದಲಿತರು ನಿಜವಾದ ದೇಶ ಪ್ರೇಮಿಗಳು. ದೇಶದಲ್ಲಿನ ಸಂಘ ಪರಿವಾರದವರು ದೇಶ ದ್ರೋಹಿಗಳು. ಸಿಎಎ, ಎನ್‍ಆರ್‌ಸಿಯ ದುಷ್ಪರಿಣಾಮದ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ನಡೆಸಬೇಕು’ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ವಿ.ಗೀತಾ ಮನವಿ ಮಾಡಿದರು.

ಅಂಜುಮಾನ್‌ ಇಸ್ಲಾಮಿಯಾ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಜಮೀರ್‌ ಅಹಮ್ಮದ್‌, ಮೌಲ್ವಿಗಳಾದ ಇಫ್ತಿಯಾರ್ ಅಹಮ್ಮದ್ ಖಾಸಿಂ, ಕಲೀಲ್‌ ವುಲ್ಲಾ, ಭೀಮಸೇನೆ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಪಂಡಿತ್‌ ಮುನಿವೆಂಕಟಪ್ಪ, ಪೌರತ್ವ ತಿದ್ದುಪಡಿ ಕಾಯ್ದೆ ಹೋರಾಟ ಸಮಿತಿ ಸದಸ್ಯೆ ನಾಜೀದಾ ಬೇಗಂ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು