ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ವರ್ತಕರಿಗೆ ಬ್ರೋಕರ್‌ಗಳ ಹಾವಳಿ

ಮಾರುಕಟ್ಟೆ ಹರಾಜು ಸಮಸ್ಯೆ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪ
Last Updated 6 ಫೆಬ್ರುವರಿ 2021, 6:11 IST
ಅಕ್ಷರ ಗಾತ್ರ

ಕೆಜಿಎಫ್‌: ವಿಧಾನಸಭಾ ಅಧಿವೇಶನದಲ್ಲಿ ಗುರುವಾರ ಶಾಸಕಿ ಎಂ. ರೂಪಕಲಾ ಅವರು ನಗರದ ಎಂ.ಜಿ. ಮಾರುಕಟ್ಟೆ ಹರಾಜು ಸಮಸ್ಯೆ, ಆನೆಗಳ ಹಾವಳಿ ಮತ್ತು ಕಾರ್ಮಿಕರಿಗೆ ಬದಲಿ ಉದ್ಯೋಗ ನೀಡುವ ಕುರಿತು ಸದನದ ಗಮನ ಸೆಳೆದಿದ್ದಾರೆ.

ಎಂ.ಜಿ. ಮಾರುಕಟ್ಟೆಯ ಇ–ಹರಾಜು ವಿವಾದ ಕುರಿತು ಮಾತನಾಡಿದ ಅವರು, ನೂರು ವರ್ಷಗಳ ಹಿಂದೆ ಬ್ರಿಟಿಷರು ಈ ಜಾಗವನ್ನು ವರ್ತಕರಿಗೆ ಮುಫತ್ತಾಗಿ ನೀಡಿದ್ದರು. ನಂತರದ ದಿನಗಳಲ್ಲಿ ವರ್ತಕರು ಅದೇ ಜಾಗದಲ್ಲಿ ಸ್ವಂತ ಖರ್ಚಿನಿಂದ ಅಂಗಡಿಗಳನ್ನು ಕಟ್ಟಿಕೊಂಡರು. ಬೆಂಗಳೂರು ಬಿಟ್ಟರೆ ಅತಿಹೆಚ್ಚು ಅಂದರೆ 1,450 ಮಳಿಗೆಗಳು ಒಂದೇ ಜಾಗದಲ್ಲಿ ಇವೆ. ರಾಬರ್ಟಸನ್‌ಪೇಟೆ ಮತ್ತು ಆಂಡರ್‌ಸನ್‌ಪೇಟೆಯಲ್ಲಿ ಮಾರುಕಟ್ಟೆಗಳು ಇವೆಎಂದರು.

ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿರುವವರು ದಲ್ಲಾಳಿಗಳಾಗಿ ಕೆಲಸ ಮಾಡುತ್ತಿದ್ದಾರೆ. ವರ್ತಕರನ್ನು ಹಿಂಸಿಸುತ್ತಿದ್ದಾರೆ. ಮಳಿಗೆಗಳನ್ನು ನಿಮಗೇ ಮಾಡಿಕೊಡುವುದಾಗಿ ಪ್ರತಿ ಹಂತದಲ್ಲಿಯೂ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಲಯ ಟೆಂಡರ್ ಆಗಬೇಕೆಂದು ಹೇಳಿದೆ. ಆದರೆ, ಅವರ ಪಕ್ಷದಲ್ಲಿರುವ ಮುಖಂಡರು ಬಡ ವರ್ತಕರಿಂದ ಹತ್ತು ತಿಂಗಳಿಂದ ₹ 2 ಕೋಟಿಯಿಂದ ₹ 5 ಕೋಟಿ ವಸೂಲಿ ಮಾಡಿದ್ದಾರೆ ಎಂದು ದೂರಿದರು.

ವರ್ತಕರು ಬಾಡಿಗೆ ಕಟ್ಟುತ್ತೇವೆ. ಸರ್ಕಾರ ಬೊಕ್ಕಸಕ್ಕೆ ತೊಂದರೆಯಾಗದಂತೆ ಲೋಕೋಪಯೋಗಿ ಇಲಾಖೆ ನಿಗದಿ ಮಾಡುವ ಬಾಡಿಗೆ ಮತ್ತು ಠೇವಣಿ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಸುಮಾರು ಹತ್ತು ಸಾವಿರ ಕುಟುಂಬಗಳು ಮಾರುಕಟ್ಟೆಯಿಂದ ಜೀವನ ಮಾಡುತ್ತಿವೆ. ಕೂಡಲೇ ಪೌರಾಡಳಿತ ಸಚಿವರು ಮಧ್ಯವರ್ತಿಗಳಿಗೆ ಅವಕಾಶ ಮಾಡಿಕೊಡದೆ ವರ್ತಕರಿಗೆ ಅನುಕೂಲ ಮಾಡಿಕೊಡಬೇಕು. ಬ್ರೋಕರ್‌ಗಳು ವರ್ತಕರನ್ನು ಕಿತ್ತು ತಿನ್ನುತ್ತಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕೋರಿದರು.

ಕಾಡಾನೆ ಹಾವಳಿ: ಹತ್ತು ತಿಂಗಳಿಂದ ಕೆಜಿಎಫ್ ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ಜಾಸ್ತಿಯಾಗಿದೆ. ರೈತರು ಬೆಳೆದ ಫಸಲು ಅವರ ಕೈಗೆ ಬರುತ್ತಿಲ್ಲ. ಆನೆಗಳಿಂದ ಬೆಳೆ ಮತ್ತು ಜೀವ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರೂಪಕಲಾ ಮನವಿ ಮಾಡಿದರು.

ಕೆಜಿಎಫ್ ನಗರದಲ್ಲಿ ಕಾರ್ಮಿಕರ ಸಂಖ್ಯೆ ಜಾಸ್ತಿ ಇದೆ. ಪ್ರತಿನಿತ್ಯ ಹತ್ತರಿಂದ ಹದಿನೈದು ಸಾವಿರ ಕಾರ್ಮಿಕರು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ಕೆಲಸಕ್ಕಾಗಿ ಹೋಗುತ್ತಿದ್ದಾರೆ. ಈಗಾಗಲೇ ಬೆಮಲ್‌ನಲ್ಲಿ ಉಪಯೋಗಿಸದೆ ಇದ್ದ ಸುಮಾರು ಒಂದು ಸಾವಿರ ಎಕರೆ ಪ್ರದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಸರ್ಕಾರದ್ದೇ ಜಾಗ ಇರುವ ಕಾರಣದಿಂದಾಗಿ, ಯಾವುದೇ ಖಾಸಗಿ ಜಮೀನು ಖರೀದಿ ಮಾಡದೆ ಕೈಗಾರಿಕೆ ಸ್ಥಾಪಿಸಲು ಅವಕಾಶ ಇದೆ. ಜನರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT