ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ ನಿರ್ಣಾಯಕ: ಡಾ.ಕಮಲಾ

Last Updated 16 ಆಗಸ್ಟ್ 2021, 15:37 IST
ಅಕ್ಷರ ಗಾತ್ರ

ಕೋಲಾರ: ‘ದೇಶದಲ್ಲಿ ಶೇ 30ರಷ್ಟು ಯುವ ಜನರಿದ್ದಾರೆ. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಆರೋಗ್ಯವಂತ ಯುವ ಜನರ ಪಾತ್ರ ನಿರ್ಣಾಯಕ’ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಕಮಲಾ ಅಭಿಪ್ರಾಯಪಟ್ಟರು.

ಇಲ್ಲಿ ಸೋಮವಾರ ಸಿ.ಬೈರೇಗೌಡ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಅಂತರರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮಾತನಾಡಿ, ‘ಯುವ ಜನತೆ ದುಶ್ಚಟಗಳಿಗೆ ಒಳಗಾಗದೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕು. ದೇಶ ಕಟ್ಟುವಲ್ಲಿ ಯುವಕ ಯುವತಿಯ ಪಾಲ್ಗೊಳ್ಳುವಿಕೆ ಮುಖ್ಯ’ ಎಂದು ಕಿವಿಮಾತು ಹೇಳಿದರು.

‘ಪ್ರತಿನಿತ್ಯ ವ್ಯಾಯಾಮ ಮಾಡಿ ಮತ್ತು ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿನಿಯರು ಪೌಷ್ಟಿಕ ಆಹಾರ ಸೇವಿಸದೆ ನಿರ್ಲಕ್ಷ್ಯ ತೋರಿದರೆ ರಕ್ತಹೀನತೆ ಪ್ರಮಾಣ ಹೆಚ್ಚುತ್ತದೆ. ಹಣ್ಣು, ತರಕಾರಿ, ಮೊಳಕೆ ಕಾಳುಗಳು, ಮಾಂಸ ಮೊಟ್ಟೆ ಹೆಚ್ಚಾಗಿ ಸೇವಿಸಬೇಕು’ ಎಂದು ಸಲಹೆ ನೀಡಿದರು.

‘ಏಡ್ಸ್ ನಿಯಂತ್ರಣಕ್ಕೆ ಯುವಕ -ಯುವತಿಯರು ಪ್ರಮುಖ ಪಾತ್ರ ವಹಿಸಬೇಕು. ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕಿತ ವ್ಯಕ್ತಿಯ ರಕ್ತ ಪರೀಕ್ಷೆ ಮಾಡದೆ ಪಡೆಯುವುದರಿಂದ, ಸೋಂಕಿತ ತಾಯಿಯಿಂದ ಮಗುವಿನ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ, ಎದೆ ಹಾಲಿನ ಮೂಲಕ ಹಾಗೂ ಸಂರಕ್ಷಣೆ ಮಾಡದ ಸೂಜಿ ಸಿರಂಜ್‌ ಬಳಸುವುದರಿಂದ ಸೋಂಕು ಹರಡುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

ಜೀವ ರಕ್ಷಕರು: ‘ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಆಗುವುದಿಲ್ಲ. ರಕ್ತ ದಾನಿಗಳು ಜೀವ ರಕ್ಷಕರು. ರಕ್ತವು ಜೀವ ಉಳಿಸಲು ನೀಡುವ ಉಡುಗೊರೆಯಾಗಿದೆ. ರಕ್ತದ ಕೊರತೆಯಿಂದಾಗಿ ಗರ್ಭಿಣಿಯರು, ಅಪಘಾತದ ಗಾಯಾಳುಗಳ ಚಿಕಿತ್ಸೆಗೆ ದೊಡ್ಡ ಸಮಸ್ಯೆಯಾಗಿದೆ. ರಕ್ತದ ಕೊರತೆಯಿಂದ ಆಪತ್ತಿನಲ್ಲಿರುವ ಜೀವಕ್ಕೆ ಮತ್ತೊಬ್ಬ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬಲ್ಲ’ ಎಂದರು.

‘ಮನುಷ್ಯ ರಕ್ತ ನೀಡುವುದರಿಂದ ಸಣ್ಣಗಾಗುತ್ತಾನೆ ಎಂಬ ತಪ್ಪು ಭಾವನೆ ಬಿಡಬೇಕು. ಯುವಕ ಯುವತಿಯರು ರಕ್ತದಾನದ ಮಹತ್ವ ಅರಿಯಬೇಕು. ವರ್ಷಕ್ಕೆ 2 ಬಾರಿ ರಕ್ತದಾನ ಮಾಡಿ ಆರೋಗ್ಯವಂತರಾಗಿರಬೇಕು. 45 ಕೆ.ಜಿಗಿಂತ ಹೆಚ್ಚು ತೂಕವಿರುವ 18 ವರ್ಷದಿಂದ 60 ವರ್ಷದೊಳಗಿನ ಆರೋಗ್ಯವಂತ ಪುರುಷರು ಮತ್ತು ಮಹಿಳೆಯರು ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಕೊಬ್ಬಿನಾಂಶ ಕಡಿಮೆಯಾಗುತ್ತದೆ ಮತ್ತು ಹೃದಯಾಘಾತದ ಸಾಧ್ಯತೆ ಕಡಿಮೆ’ ಎಂದು ವಿವರಿಸಿದರು.

ಜಿಲ್ಲಾ ಮಟ್ಟದ ಭಿತ್ತಿಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಿಬಿಐಟಿ ಕಾಲೇಜಿನ ಪ್ರಾಂಶುಪಾಲ ಶ್ರೀರಾಮರೆಡ್ಡಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT