ಕೋಲಾರ: ನಗರ ಹೊರವಲಯದ ಕೋಲಾರ-ಬಂಗಾರಪೇಟೆ ಮುಖ್ಯರಸ್ತೆಯ ಸಹಕಾರ ನಗರ ಬಳಿ ಶನಿವಾರ ನಸುಕಿನಲ್ಲಿ ಸಂಭವಿಸಿದ ಔಡಿ ಕಾರು ಅಪಘಾತದಲ್ಲಿ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಅವರ ಸ್ನೇಹಿತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಾಸನದ ಹರ್ಷವರ್ಧನ್, ಬಳ್ಳಾರಿಯ ಬಸನಗೌಡ ಹಾಗೂ ಕೋಲಾರ ಜಿಲ್ಲೆ ಬಂಗಾರಪೇಟೆಯ ಪ್ರಜ್ವಲ್ ಮೃತರು. ಕಾರಿನಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿ, ಬಂಗಾರಪೇಟೆಯ ಸಾಯಿ ಗಗನ್ ಅಪಾಯದಿಂದ ಪಾರಾಗಿದ್ದಾರೆ. ಈ ಎಲ್ಲರೂ 22ರಿಂದ 23 ವರ್ಷ ವಯಸ್ಸಿನವರು ಎಂದು ಪೊಲೀಸರು ತಿಳಿಸಿದ್ದಾರೆ.
ಹರ್ಷವರ್ಧನ್, ಬಸನಗೌಡ ಹಾಗೂ ಸಾಯಿ ಗಗನ್ ಈ ಮೂವರೂ ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳು. ಇವರ ಸ್ನೇಹಿತ ಪ್ರಜ್ವಲ್ ಬಂಗಾರಪೇಟೆಯಲ್ಲಿ ತಂದೆಯ ಜೊತೆ ಹಣಕಾಸು ವ್ಯವಹಾರ ನಡೆಸುತ್ತಿದ್ದ.
ವೇಗವಾಗಿ ಬಂದ ಕಾರು ಆರ್.ವಿ.ಕಾಲೇಜು ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಔಡಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಎರಡು ತುಂಡಾಗಿದೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲೇಜಿಗೆ ರಜೆ ಇದ್ದ ಕಾರಣ ಬಂಗಾರಪೇಟೆ ಸ್ನೇಹಿತನ ಮನೆಗೆ ಹೋಗುವುದಾಗಿ ಪೋಷಕರಿಗೆ ತಿಳಿಸಿ ಬೇರೊಬ್ಬ ಸ್ನೇಹಿತನೊಬ್ಬನ ಔಡಿ ಕಾರು ತೆಗೆದುಕೊಂಡು ಬಂದಿದ್ದರು ಎಂಬುದು ಗೊತ್ತಾಗಿದೆ. ತಡರಾತ್ರಿ ಬಂಗಾರಪೇಟೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದರು. ಭಾನುವಾರ ಹರ್ಷವರ್ಧನ್ ಜನ್ಮದಿನ ಆಚರಣೆಗೆ ಸಿದ್ಧತೆ ನಡೆದಿತ್ತು.
‘ನನ್ನ ಅಕ್ಕನ ಮದುವೆಗೆ ಸಿದ್ಧತೆ ನಡೆಯುತ್ತಿದ್ದು ಅವರೆಲ್ಲಾ ಬಂಗಾರಪೇಟೆಯ ನನ್ನ ಮನೆಗೆ ಬಂದಿದ್ದರು. ಬೆಂಗಳೂರಿನಲ್ಲಿ ಮದುವೆ ಆಮಂತ್ರಣ ಪತ್ರಿಕೆ ಹಂಚಿ ಬೇಗನೆ ವಾಪಸ್ ಬರಲು ಹೊರಟಿದ್ದೆವು. ಓವರ್ ಟೇಕ್ ಮಾಡುವಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿತು. ಓವರ್ ಸ್ಪೀಡ್ ಇರಲಿಲ್ಲ. ನಾವೆಲ್ಲಾ ಎಂಜಿನಿಯರಿಂಗ್ ಸಹಪಾಠಿಗಳು. ನಾನು ಹಿಂಬದಿ ಸೀಟಿನಲ್ಲಿ ಕುಳಿತಿದ್ದೆ’ ಎಂದು ಅಘಾತದಲ್ಲಿ ಬದುಕುಳಿದ ಸಾಯಿ ಗಗನ್ ಪ್ರತಿಕ್ರಿಯಿಸಿದರು.
ಬಸನಗೌಡ ಪೋಷಕರು ಬಳ್ಳಾರಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಹರ್ಷವರ್ಧನ್ ಹಾಗೂ ಪ್ರಜ್ವಲ್ ಪೋಷಕರು ಅವರ ಊರಿನಲ್ಲಿ ಹಣಕಾಸು ವ್ಯವಹಾರ ಮಾಡುತ್ತಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಕೋಲಾರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಕಾಂತರಾಜ್, ಪಿಎಸ್‌ಐ ಭಾರತಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶವಗಳನ್ನು ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆಸ್ಪತ್ರೆ ಬಳಿ ಮೃತರ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಅತಿ ವೇಗದ ಚಾಲನೆ ಕಾರಣ
ವಾಹನವೊಂದನ್ನು ಹಿಂದಿಕ್ಕಲು ಹೋಗಿ ಮರಕ್ಕೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದುದೇ ಈ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಕಾರಿನಲ್ಲಿದ್ದವರ ರಕ್ತ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ –ನಿಖಿಲ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.