ಮಂಗಳವಾರ, ಫೆಬ್ರವರಿ 18, 2020
16 °C

ವೃತ್ತಿ ಶಿಕ್ಷಣ ಕಲಿಕೆಗೆ ಪೂರಕ: ವಿಷಯ ಪರಿವೀಕ್ಷಕ ವೆಂಕಟೇಶಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ವೃತ್ತಿ ಶಿಕ್ಷಣವು ಸಮಗ್ರ ಶಿಕ್ಷಣ ಮಾತ್ರವಲ್ಲ. ಶಾಲೆ ಪರಿಸರವನ್ನು ಸುಂದರಗೊಳಿಸಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸುವ ಕಾರ್ಯದಲ್ಲಿ ವೃತ್ತಿ ಶಿಕ್ಷಣ ಹೆಚ್ಚು ಮಹತ್ವ ಪಡೆದಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಬಿ.ವೆಂಕಟೇಶಪ್ಪ ಅಭಿಪ್ರಾಯಪಟ್ಟರು.

ಇಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪ್ರೌಢ ಶಾಲಾ ವೃತ್ತಿ ಶಿಕ್ಷಕರ ಸಭೆ ಹಾಗೂ ವಿಷಯಾಧಾರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ವೃತ್ತಿ ಶಿಕ್ಷಣ ಮಹಾತ್ಮ ಗಾಂಧೀಜಿಯ ಕನಸಿನ ಮೂಲ ಶಿಕ್ಷಣವಾಗಿದೆ. ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸುವುದು ಮತ್ತು ಸಂಸ್ಕಾರ ಕಲಿಸುವ ಕಾರ್ಯವನ್ನು ವೃತ್ತಿ ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಶಾಲೆ ಆವರಣ ಹಸಿರಾಗಿರಲು ವೃತ್ತಿ ಶಿಕ್ಷಕರೇ ಕಾರಣರಾಗಿದ್ದಾರೆ’ ಎಂದರು.

‘ವೃತ್ತಿ ಶಿಕ್ಷಕರು ಪರಿಸರ ನಾಶದಿಂದಾಗುವ ಸಮಸ್ಯೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿ ಗಿಡ ಮರ ಬೆಳೆಸುವ ಮನೋಭಾವ ಸದೃಢಗೊಳಿಸಬೇಕು. ಬಿಸಿಯೂಟಕ್ಕೂ ನೆರವು ನೀಡುವ ವೃತ್ತಿ ಶಿಕ್ಷಕರ ಬೋಧನೆಗೆ ಅನುಕೂಲವಾಗುವಂತೆ ಪಠ್ಯಪುಸ್ತಕ ಒದಗಿಸಲು ಶಿಕ್ಷಣ ಇಲಾಖೆ ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಮಳೆ ಮತ್ತು ನೀರಿನ ಅಭಾವವಿದೆ ಎಂಬ ಸಂಗತಿ ಎಲ್ಲರಿಗೂ ಗೊತ್ತಿದೆ. ಇದನ್ನೇ ನೆಪ ಮಾಡಿಕೊಂಡು ಶಾಲೆ ಆವರಣದಲ್ಲಿ ಗಿಡ ಮರ ಬೆಳಸದಿರುವುದು ಸರಿಯಲ್ಲ. ಕನಿಷ್ಠ ಬಿಸಿಯೂಟದ ನಂತರ ಕೈತೊಳೆಯುವ ನೀರನ್ನು ಬಳಸಿಯಾದರೂ ಗಿಡಗಳನ್ನು ಬೆಳೆಸಬಹುದು’ ಎಂದು ಸಲಹೆ ನೀಡಿದರು.

‘ಶಿಕ್ಷಣ ಇಲಾಖೆ ಈಗಾಗಲೇ ವೃತ್ತಿ ಶಿಕ್ಷಣದ ವಿಷಯವಾರು ಮಾಹಿತಿ ಕೇಳಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯಪುಸ್ತಕ ಸಿಗುವ ಸಾಧ್ಯತೆಯಿದೆ. ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಯಶಸ್ವಿಯಾಗಿದ್ದು, 50ಕ್ಕೂ ಹೆಚ್ಚು ಶಾಲೆಗಳು ಪಾಲ್ಗೊಂಡು ಗಮನ ಸೆಳೆದವು’ ಎಂದು ಹೇಳಿದರು.

ಪರೀಕ್ಷೆ ಸಮೀಪಿಸುತ್ತಿವೆ: ‘ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿವೆ, ಸಿಸಿಇ ಅಡಿ ಅಗತ್ಯವಿರುವ ಯೋಜನೆಗಳನ್ನು ಮಕ್ಕಳಿಂದ ಮಾಡಿಸಬೇಕು. ಅಂಕಗಳ ವಹಿ ಸೇರಿದಂತೆ ದಾಖಲೆಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಿ’ ಎಂದು ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್‌ ಕಿವಿಮಾತು ಹೇಳಿದರು.

ರಾಜ್ಯ ಮಟ್ಟದ ವಸ್ತು ಪ್ರದರ್ಶನದಲ್ಲಿ ರೇಷ್ಮೆ ಕೃಷಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ರೋಣೂರು ಶಾಲೆ ಶಿಕ್ಷಕ ವೆಂಕಟೇಶಪ್ಪ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಕಾರ್ಯದರ್ಶಿ ಮಾರ್ಕಂಡೇಶ್ವರ್, ಖಜಾಂಚಿ ಆಂಜನೇಯ, ಉಪಾಧ್ಯಕ್ಷೆ ಧನಲಕ್ಷ್ಮಿ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು