ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಮಾರ್ಗಸೂಚಿ ಅನ್ವಯ ಸಿಇಟಿ ಪರೀಕ್ಷೆಗೆ ಸಕಲ ಸಿದ್ಧತೆ

Last Updated 29 ಜುಲೈ 2020, 14:07 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಗುರುವಾರ (ಜುಲೈ 30) ಮತ್ತು ಶುಕ್ರವಾರ (ಜುಲೈ 31) ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಜಿಲ್ಲಾಡಳಿತವು ಕೋವಿಡ್ ಮಾರ್ಗಸೂಚಿ ಅನ್ವಯ ಸಕಲ ಸಿದ್ಧತೆ ಮಾಡಿದೆ.

ಜಿಲ್ಲೆಯ 17 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 5,400 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಸುಸೂತ್ರವಾಗಿ ನಡೆಸಲು ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಅಗತ್ಯ ಕ್ರಮ ಕೈಗೊಂಡಿದೆ.

ಕೋಲಾರ ತಾಲ್ಲೂಕಿನ 10 ಕೇಂದ್ರಗಳಲ್ಲಿ, ಬಂಗಾರಪೇಟೆ 1, ಕೆಜಿಎಫ್‌ ತಾಲ್ಲೂಕಿನಲ್ಲಿ 2, ಮಾಲೂರು 1, ಮುಳಬಾಗಿಲು 1 ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 2 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕೊರೊನಾ ಸೋಂಕು ತಗುಲಿರುವ ವಿದ್ಯಾರ್ಥಿಗಳಿಗೆ ಜಿಲ್ಲಾ ಕೇಂದ್ರದ ಗಾಜಲದಿನ್ನೆಯ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತ್ಯೇಕ ಪರೀಕ್ಷಾ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ.

ರಾಮಚಂದ್ರಪ್ಪ

ಜಿಲ್ಲೆಯಲ್ಲಿ ಒಬ್ಬ ಕೊರೊನಾ ಸೋಂಕಿತ ವಿದ್ಯಾರ್ಥಿಯಿದ್ದು, ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲೇ ಪರೀಕ್ಷಾ ಕೇಂದ್ರಕ್ಕೆ ತರಲಾಗುತ್ತದೆ. ಈ ವಿದ್ಯಾರ್ಥಿಯ ಚಿಕಿತ್ಸೆಗೆ ನಿಯೋಜನೆಗೊಂಡಿರುವ ಒಬ್ಬರು ವೈದ್ಯರು ಮತ್ತು ಶುಶ್ರೂಷಕಿಯೇ ಪರೀಕ್ಷಾ ಕಾರ್ಯ ನಿರ್ವಹಿಸಲಿದ್ದಾರೆ.

8 ಹೆಚ್ಚುವರಿ ಕೇಂದ್ರ: ಕೊರೊನಾ ಸೋಂಕಿನ ಪ್ರಕರಣಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ 8 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಸಕಲ ಸಿದ್ಧತೆಯೊಂದಿಗೆ ಕಾದಿರಿಸಲಾಗಿದೆ. ಸೋಂಕಿನ ಪ್ರಕರಣಗಳ ಹೆಚ್ಚಳ ಹಾಗೂ ಸೀಲ್‌ಡೌನ್‌ ಪರಿಸ್ಥಿತಿ ಎದುರಾದರೆ ಹೆಚ್ಚುವರಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ದಿನದಂದು ಬೆಳಿಗ್ಗೆ 8.30ಕ್ಕೆ ಕೇಂದ್ರದಲ್ಲಿ ಹಾಜರಿರಬೇಕೆಂದು ಸೂಚಿಸಲಾಗಿದೆ. ಪ್ರತಿ ವಿದ್ಯಾರ್ಥಿಯೂ ಕಡ್ಡಾಯ ಮಾಸ್ಕ್ ಧರಿಸಬೇಕು ಮತ್ತು ಕೇಂದ್ರ ಪ್ರವೇಶಿಸುವಾಗ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಗಾಗಬೇಕು.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಬಳಿ ಗುಂಪು ಸೇರುವಂತಿಲ್ಲ. ಪರೀಕ್ಷಾ ಕೇಂದ್ರಗಳಿಗೆ ಪೋಷಕರು ಅಥವಾ ಇತರೆ ವ್ಯಕ್ತಿಗಳ ಪ್ರವೇಶ ನಿರ್ಬಂಧಿಸಲಾಗಿದೆ. ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ತರಬೇಕೆಂದು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದ ಹೊರಗೆ ಹಾಗೂ ಒಳಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.

ಪ್ರತ್ಯೇಕ ಕೊಠಡಿ: ಜ್ವರ, ಶೀತ, ಕೆಮ್ಮಿನ ಲಕ್ಷಣವಿರುವ ಹಾಗೂ ಕಂಟೈನ್‌ಮೆಂಟ್‌ ವಲಯದಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಮೊಬೈಲ್‌, ಕ್ಯಾಮೆರಾ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸೇವೆ ಒದಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT