ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ವಂಚನೆ: ಆರೋಪ

ಕಾಮಗಾರಿ ನೀಡಲು ಅಧಿಕಾರಿಗಳೇ ಅಡ್ಡಗಾಲು: ಸಂಘದ ಜಿಲ್ಲಾಧ್ಯಕ್ಷ ಆರೋಪ
Published : 22 ಆಗಸ್ಟ್ 2024, 16:56 IST
Last Updated : 22 ಆಗಸ್ಟ್ 2024, 16:56 IST
ಫಾಲೋ ಮಾಡಿ
Comments

ಕೋಲಾರ: ‘ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ಗುತ್ತಿಗೆದಾರರಿಗೆ ಯಾವುದೇ ಕಾಮಗಾರಿ ನೀಡದೆ ವಂಚನೆ ಮಾಡಲಾಗುತ್ತಿದೆ. ಅಧಿಕಾರಿಗಳು ಈ ಕೂಡಲೇ ಕಾನೂನು ರೀತಿಯಲ್ಲಿ ಈ ಸಮುದಾಯದ ಸ್ಥಳೀಯ ಗುತ್ತಿಗೆದಾರರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಜಿಲ್ಲಾ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಾಬು ವಿ.ಮಾರ್ಜೆನಹಳ್ಳಿ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ‌ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಕಾಮಗಾರಿಗಳ ಟೆಂಡರ್‌ ನೀಡಲು ಮೀಸಲಾತಿ ಮಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹50 ಲಕ್ಷದಿಂದ ₹1 ಕೋಟಿಗೆ ಹೆಚ್ಚಿಸಿದ್ದಾರೆ. ಆದರೆ, ಇಲಾಖೆಗಳು ಈ ಮೀಸಲಾತಿಯನ್ನು ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ, ಅಧಿಕಾರಿಗಳು ಅಡ್ಡಗಾಲಾಗಿ ಪರಿಣಮಿಸಿದ್ದಾರೆ. ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ನಮ್ಮ ಪಾಲು ನೀಡುತ್ತಿಲ್ಲ’ ಎಂದು ಆರೋಪಿಸಿದರು.

‘ಹಿಂದೆಯೂ ಈ ವಿಚಾರದಲ್ಲಿ ನಾವು ಹೋರಾಟ ನಡೆಸಿದ್ದೆವು. ವಿಧಾನಸೌಧ ಮುತ್ತಿಗೆ ಹಾಕಿದ್ದೆವು. ಆಗ ಮೀಸಲಾತಿ ಅನುಷ್ಠಾನಗೊಳಿಸುವಂತೆ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿತ್ತು’ ಎಂದರು.

‘ಜಿಲ್ಲೆಯಲ್ಲಿ 200ರಿಂದ 300 ಎಸ್‌ಸಿ, ಎಸ್‌ಟಿ ಗುತ್ತಿಗೆದಾರರು ಇದ್ದಾರೆ. ಆದರೆ, ಅಧಿಕಾರಿಗಳು ಅಡ್ಡಗಾಲು ಆಗಿರುವುದರಿಂದ ಪರವಾನಗಿ ಇದ್ದರೂ ಕೆಲಸ ಸಿಗುತ್ತಿಲ್ಲ. ಜಿಲ್ಲೆಗೆ ಬಂದ ಕಾಮಗಾರಿಗಳನ್ನು ಕೆಆರ್‌ಐಡಿಎಲ್ ಹಾಗೂ ನಿರ್ಮಿತಿ ಕೇಂದ್ರಕ್ಕೆ ಕೊಡಲಾಗುತ್ತಿದೆ’ ಎಂದು ಹೇಳಿದರು.

‘ಕೆಟಿಪಿಪಿ ಪ್ರಕಾರ ಸರ್ಕಾರದಿಂದ ಅನುಮೋದನೆಗೊಂಡ ಕಾಮಗಾರಿಗಳಿಗೆ ₹ 2 ಕೋಟಿ ವರೆಗೆ ಮಾತ್ರ ವಿನಾಯಿತಿ ಇದ್ದು, ಬಹಳ ತುರ್ತು ಹಾಗೂ ಅನಿವಾರ್ಯ ಸಮಯದಲ್ಲಿ ಮಾತ್ರ ನಿರ್ಮಿಸಲು ಅವಕಾಶವಿರುತ್ತದೆ. ಆದರೆ ವಿನಾಕಾರಣ ಈ ಸಂಸ್ಥೆಗಳಿಗೆ ಇತರೆ ಇಲಾಖೆಗಳಲ್ಲಿನ ಕಾಮಗಾರಿ ಅನುಷ್ಠಾನ ಮಾಡಲು ತಾಂತ್ರಿಕ ಇಲಾಖೆ ಇದ್ದರೂ ಸ್ಥಳೀಯ ಪ್ರತಿನಿಧಿಗಳು ಮೌಕಿಕ ಆದೇಶದ ಮೇರೆಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ’ ಎಂದು ದೂರಿದರು.

‘ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ₹ 9.8 ಕೋಟಿ ಮೊತ್ತದ ಕಾಮಗಾರಿಗಳನ್ನು ಕೆಆರ್‌ಐಡಿಎಲ್ ಹಾಗೂ ನಿರ್ಮಿತಿ ಕೇಂದ್ರಕ್ಕೆ ವರ್ಗಾವಣೆ  ಮಾಡಲಾಗಿದೆ. ಎಸ್‌ಸಿಪಿ ಹಾಗೂ ಟಿಎಸ್‌ಪಿ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಯನ್ನೂ ಅವರಿಗೆ ನೀಡಲಾಗಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಲಭಿಸಿದ ಎಲ್ಲಾ ಕಾಮಗಾರಿಗಳೂ ಅವರಿಗೆ ಹೋಗಿವೆ. ಈ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ವಂಚನೆ ಮಾಡಲಾಗಿದೆ’ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ ಒಟ್ಟು ಸಾವಿರ ಗುತ್ತಿಗೆದಾರರು ಇದ್ದಾರೆ. ಅವರಿಗೆ ವಿವಿಧ ಇಲಾಖೆಗಳಿಂದ ಬರಬೇಕಿರುವ ₹ 98 ಕೋಟಿ ಶುಲ್ಕ ಬಾಕಿ ಇದೆ’ ಎಂದರು.

‘ಮುಂದಿನಗಳಲ್ಲಿ ಇಂತಹ ವಂಚನೆಗಳಿಗೆ ಕಡಿವಾಣ ಹಾಕಬೇಕು. ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಕಾಮಗಾರಿ ಕೊಡಬೇಕು. ಇಲ್ಲದೆ ಹೋದರೆ ಸಂಘದಿಂದ ಉಗ್ರ ಹೋರಾಟವನ್ನು ಇಲಾಖೆ ಹಾಗೂ ಸರ್ಕಾರದ ವಿರುದ್ಧ ಹಮ್ಮಿಕೊಳ್ಳಲಾಗುತ್ತದೆ’ ಎಂದು ಎಚ್ಚರಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ವೆಂಕಟರೆಡ್ಡಿ ಗೌಡಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್‌ ವಿ. ಹಾಗೂ ಕೃಷ್ಣಪ್ಪ ಇದ್ದರು.

Highlights - ಜಿಲ್ಲೆಯಲ್ಲಿ 200ರಿಂದ 300 ಎಸ್‌ಸಿ, ಎಸ್‌ಟಿ ಗುತ್ತಿಗೆದಾರರು ದೊಡ್ಡಮಟ್ಟದ ಹೋರಾಟದ ಎಚ್ಚರಿಕೆ ಕೆಆರ್‌ಐಡಿಎಲ್, ನಿರ್ಮಿತಿ ಕೇಂದ್ರಕ್ಕೆ ಎಲ್ಲಾ ಟೆಂಡರ್‌–ದೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT