ಮಂಗಳವಾರ, ಮಾರ್ಚ್ 21, 2023
23 °C

ಮುಳಬಾಗಿಲು | ಅಕ್ಕ–ತಂಗಿ ವರಿಸಿದ ಭೂಪ ಜೈಲು ಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ವೇಗಮಡುಗು ಗ್ರಾಮದಲ್ಲಿ ಒಂದೇ ಮುಹೂರ್ತದಲ್ಲಿ ಅಕ್ಕ–ತಂಗಿಯನ್ನು ಮದುವೆಯಾಗಿದ್ದ ಉಮಾಪತಿ (30) ಅವರನ್ನು ಬಾಲ್ಯವಿವಾಹ ಆರೋಪದಡಿ ನಂಗಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮುಳಬಾಗಿಲು ತಾಲ್ಲೂಕು ಚಿನ್ನಬಾಲೇಪಲ್ಲಿ ಗ್ರಾಮದ ಉಮಾಪತಿ ಅವರು ವೇಗಮಡುಗು ಗ್ರಾಮದ ಸುಪ್ರಿಯಾ ಸಹೋದರಿಯರನ್ನು ಮೇ 7ರಂದು ಮದುವೆಯಾಗಿದ್ದರು. ಅವರ ವಿವಾಹದ ಆಮಂತ್ರಣ ಪತ್ರಿಕೆ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು.

ಇದನ್ನೂ ಓದಿ: ಒಂದೇ ಮುಹೂರ್ತದಲ್ಲಿ ಅಕ್ಕ–ತಂಗಿಯರನ್ನು ವರಿಸಿದ ವರ

ಈ ಸಂಬಂಧ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ. ರಮೇಶ್‌ ಪರಿಶೀಲನೆ ನಡೆಸಿದಾಗ ಸುಪ್ರಿಯಾ ಅವರ ಸಹೋದರಿಗೆ 17 ವರ್ಷವಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಹೀಗಾಗಿ ರಮೇಶ್‌ ಅವರು ಬಾಲ್ಯವಿವಾಹ ಆರೋಪ ಮತ್ತು ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಉಮಾಪತಿ ಸೇರಿದಂತೆ 7 ಮಂದಿ ವಿರುದ್ಧ ಭಾನುವಾರ ಪ್ರಕರಣ ದಾಖಲಿಸಿದ್ದರು. ಬಳಿಕ ಎಲ್ಲಾ ಆರೋಪಿಗಳು ಪರಾರಿಯಾಗಿದ್ದರು.

ಪೊಲೀಸರು ಮೊಬೈಲ್‌ ಕರೆ ಮಾಹಿತಿ ಆಧರಿಸಿ ಉಮಾಪತಿಯನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಾದ ಉಮಾಪತಿಯ ತಂದೆ ಚಿಕ್ಕಚನ್ನರಾಯಪ್ಪ, ತಾಯಿ ದೊಡ್ಡಲಕ್ಷ್ಮಮ್ಮ, ಬಾಲಕಿಯ ತಂದೆ ನಾಗರಾಜಪ್ಪ, ತಾಯಿ ರಾಣೆಮ್ಮ, ವಿವಾಹ ಆಮಂತ್ರಣ ಪತ್ರಿಕೆ ಮುದ್ರಿಸಿದ್ದ ಮುಳಬಾಗಿಲಿನ ಗಾಯತ್ರಿ ಆಫ್‌ಸೆಟ್‌ ಪ್ರಿಂಟರ್ಸ್‌ ಮಾಲೀಕ, ಮದುವೆ ನಡೆದ ಚನ್ನರಾಯಸ್ವಾಮಿ ದೇವಾಲಯದ ಅರ್ಚಕ ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ: ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ವರಿಸಿದ್ದ ವರನಿಗೆ ಎದುರಾಗಿದೆ ಸಂಕಷ್ಟ

ಸುಪ್ರಿಯಾ, ನಾಗರಾಜಪ್ಪ ಅವರ ಹಿರಿಯ ಮಗಳು. ಅವರ ಕಿರಿಯ ಮಗಳಿಗೆ ವಾಕ್‌ ಮತ್ತು ಶ್ರವಣ ದೋಷವಿದೆ. ಹೀಗಾಗಿ, ಆಕೆಗೆ ಭವಿಷ್ಯದಲ್ಲಿ ಮದುವೆ ಆಗುವುದಿಲ್ಲ ಎಂದು ಚಿಂತಿತರಾಗಿದ್ದ ನಾಗರಾಜಪ್ಪ, ಪತ್ನಿ ರಾಣೆಮ್ಮ ಅವರ ತಮ್ಮ ಉಮಾಪತಿ ಜತೆ ಇಬ್ಬರೂ ಹೆಣ್ಣುಮಕ್ಕಳ ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಅವರ ನಿರ್ಧಾರಕ್ಕೆ ಒಪ್ಪಿ ಉಮಾಪತಿ ಸಹೋದರಿಯರನ್ನು ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಸರ್ಕಾರ ಕೋವಿಡ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿರುವುದರಿಂದ ಮದುವೆಗೆ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಈ ವಿವಾಹಕ್ಕೆ ಕುಟುಂಬದ ಸದಸ್ಯರು ಪೂರ್ವಾನುಮತಿ ಪಡೆದಿರಲಿಲ್ಲ. ಲಾಕ್‌ಡೌನ್‌ ಆದೇಶ ಉಲ್ಲಂಘಿಸಿದ ಆರೋಪದಡಿ ಪ್ರತ್ಯೇಕ ಪ್ರಕರಣ ದಾಖಲಿಸುತ್ತೇವೆ’ ಎಂದು ಮುಳಬಾಗಿಲು ತಹಶೀಲ್ದಾರ್‌ ರಾಜಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು