ಭಾನುವಾರ, ಜನವರಿ 19, 2020
28 °C
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಅಮರ್ ಆಳ್ವ ಒತ್ತಾಯ

ಕೋಲಾರ: ಚಿಲಿಪಿಲಿ ಶಿಕ್ಷಣ ನೀತಿ ಜಾರಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಬಾಲ್ಯಾರಂಭದ ಪೋಷಣೆ ಮತ್ತು ಚಿಲಿಪಿಲಿ ಶಿಕ್ಷಣ ನೀತಿಯನ್ನು ಸರ್ಕಾರ ಕೂಡಲೇ ಜಾರಿಗೊಳಿಸಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಅಮರ್ ಆಳ್ವ ಒತ್ತಾಯಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಬಾಲ್ಯಾರಂಭದ ಪೋಷಣೆ ಅರಂಭಿಸಬೇಕು’ ಎಂದರು.

‘ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಒತ್ತು ನೀಡಿದರೆ ದೇಶದ ಅಭಿವೃದ್ಧಿಯಾಗುತ್ತದೆ. ಪೌಷ್ಟಿಕ ಆಹಾರದ ಮೇಲೆ ಮಗುವಿನ ದೈಹಿಕ, ಮಾನಸಿಕ ಆರೋಗ್ಯದ ಬೆಳವಣಿಗೆ ನಿಂತಿದೆ. ಮಗು ಹುಟ್ಟಿದ ದಿನದಿಂದ 1 ಸಾವಿರ ದಿನಗಳು ಹಾಗೂ 6 ವರ್ಷದ ಅವಧಿಯಲ್ಲಿ ಪೌಷ್ಟಿಕ ಆಹಾರ ಸಿಗದಿದ್ದರೆ ಅಪೌಷ್ಟಿಕತೆ ಉಂಟಾಗುವ ಸಾಧ್ಯತೆಯಿದೆ’ ಎಂದು ಹೇಳಿದರು.

‘ಶಾಲಾ ಪೂರ್ವ ಶಿಕ್ಷಣದ ಬಲವರ್ಧನೆ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸರ್ಕಾರಗಳಿಗೆ ಸಾಕಷ್ಟು ಶಿಫಾರಸು ಮಾಡಿದ್ದರೂ ಕೆಲವೊಂದು ಮಾತ್ರ ಅನುಷ್ಠಾನಗೊಂಡಿವೆ. ಸರ್ಕಾರದ ಗಮನ ಸೆಳೆಯುವ ಉದ್ದೇಶಕ್ಕೆ ಎಲ್ಲಾ ಜಿಲ್ಲೆಗಳಲ್ಲೂ ಪತ್ರಿಕಾಗೋಷ್ಠಿ ನಡೆಸಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ’ ಎಂದು ವಿವರಿಸಿದರು.

‘ರಾಜ್ಯದಲ್ಲಿ ಐಸಿಡಿಎಸ್‌ ಕಾರ್ಯಕ್ರಮ ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಂಗನವಾಡಿಗಳಿಗೆ ಸೂಕ್ತ ಸೌಲಭ್ಯವಿಲ್ಲ. ಕಾರ್ಯಕರ್ತೆಯರು, ಸಹಾಯಕಿಯರ ಮೇಲ್ವಿಚಾರಣೆ ನಡೆಸಬೇಕಾದ ಸಿಡಿಪಿಒ ಮತ್ತು ಡಿಸಿಪಿಒ ಹುದ್ದೆಗಳಲ್ಲಿ ಪ್ರಭಾರಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ’ ಎಂದು ದೂರಿದರು.

ತರಬೇತಿ: ‘ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಚಿಲಿಪಿಲಿ ಪಠ್ಯಕ್ರಮ ಬೋಧಿಸಲು ಕಾರ್ಯಕರ್ತರು ಮುಂದಾಗಿಲ್ಲ. ಅವರಿಗೆ ಸೂಕ್ತ ತರಬೇತಿ ನೀಡಿದರೆ ಯೋಜನೆಯ ಪ್ರಯೋಜನ ಕಲ್ಪಿಸಲು ಸಹಾಯವಾಗುತ್ತದೆ’ ಎಂದು ಜನಾಂದೋಲನದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಮರಿಸ್ವಾಮಿ ತಿಳಿಸಿದರು.

‘ಸಿಡಿಪಿಒ, ಎಸಿಡಿಪಿಒಗಳಿಗೆ ದಕ್ಷಿಣ ಭಾರತದ 7 ರಾಜ್ಯಗಳ ತರಬೇತಿ ಕೇಂದ್ರವಾದ ನಿಪ್ಸಿಡ್ ಮೂಲಕ ಹಾಗೂ 3 ಸಾವಿರ ಅಂಗನವಾಡಿ ಮೇಲ್ವಿಚಾರಕಿಯರಿಗೆ ಎಂಎಲ್‌ಟಿಸಿ ತರಬೇತಿ ಕೇಂದ್ರದ ಮೂಲಕ, ಸುಮಾರು 1.30 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಾಜ್ಯದ 21 ತರಬೇತಿ ಕೇಂದ್ರಗಳಲ್ಲಿ 4 ದಿನಗಳ ಕಾಲ ಶಾಲಾ ಪೂರ್ವ ಶಿಕ್ಷಣದ ಬಗ್ಗೆ ತರಬೇತಿ ನೀಡಲಾಗುತ್ತದೆ’ ಎಂದು ವಿವರಿಸಿದರು.

‘ಲಭ್ಯವಿರುವ ಸರ್ಕಾರದ ಕಟ್ಟಡಗಳನ್ನು ಜಿಲ್ಲಾ ತರಬೇತಿ ಕೇಂದ್ರವಾಗಿಸಿ ಮತ್ತು ಮಾದರಿ ಅಂಗನವಾಡಿ ಕೇಂದ್ರಗಳನ್ನು ವೃತ್ತ ಮಟ್ಟದ ಸಂಪನ್ಮೂಲ ಕೇಂದ್ರವಾಗಿ ನೀಡಬೇಕು. 4 ತಿಂಗಳಿಗೊಮ್ಮೆ ತರಬೇತಿ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಶಾಲಾ ಪೂರ್ವ ಶಿಕ್ಷಣ ಹೊರತುಪಡಿಸಿ ಇತರೆ ಯಾವುದೇ ಚಟುವಟಿಕೆಗಳಿಗೆ ನಿಯೋಜಿಸಬಾರದು. ಖಾಲಿ ಹುದ್ದೆ ಭರ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್.ಚೌಡಪ್ಪ, ಜನಾಂದೋಲನ ರಾಜ್ಯ ಸಮಿತಿ ಸದಸ್ಯೆ ಎಸ್.ಪ್ರಭಾವತಿ, ಮಾಜಿ ಅಧ್ಯಕ್ಷ ಐಪಲ್ಲಿ ನಾರಾಯಣಸ್ವಾಮಿ, ಲೋಕಮಿತ್ರ ಸಂಸ್ಥೆ ಸದಸ್ಯ ನರಸಿಂಹಮೂರ್ತಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು