ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲೂರು ಬಳಿಯ ಆನಂದಮಾರ್ಗ ಆಶ್ರಮದಲ್ಲಿ ಹೊಡೆದಾಟ: ಚಿನ್ಮಯಾನಂದ ಸ್ವಾಮೀಜಿ ಹತ್ಯೆ

Published 22 ಜೂನ್ 2024, 11:23 IST
Last Updated 22 ಜೂನ್ 2024, 11:23 IST
ಅಕ್ಷರ ಗಾತ್ರ

ಮಾಲೂರು (ಕೋಲಾರ): ತಾಲ್ಲೂಕಿನ ಮೈಲಾಂಡಹಳ್ಳಿ ಬಳಿಯ ಆನಂದ ಮಾರ್ಗ ಆಶ್ರಮದ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ (70) ಅವರನ್ನು ಶನಿವಾರ ಆಶ್ರಮದಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅದೇ ಆಶ್ರಮದ ಇಬ್ಬರು ಸ್ವಾಮಿಗಳು ಮತ್ತು ಮಾಜಿ ಸಿಬ್ಬಂದಿ ಸೇರಿದಂತೆ ಮೂವರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ.

ಆಶ್ರಮದ ಆಚಾರ್ಯ ಧರ್ಮ ಪ್ರಾಣಾನಂದ ಸ್ವಾಮೀಜಿ (45), ಪ್ರಾಣೇಶ್ವರಾನಂದ ಸ್ವಾಮೀಜಿ (48) ಹಾಗೂ ಆಶ್ರಮದ ಮಾಜಿ ಸಿಬ್ಬಂದಿ ಅರುಣ್ ಕುಮಾರ್‌ (55) ಬಂಧಿತ ಆರೋಪಿಗಳು.

ಪಶ್ಚಿಮ ಬಂಗಾಳ, ತಮಿಳುನಾಡಿಗೆ ಪರಾರಿಯಾಗಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ನೇತೃತ್ವದ ತಂಡ ಬಂಧಿಸಿದೆ. ಇನ್ನುಳಿದ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ.

ಆಸ್ತಿ, ಅಧಿಕಾರಕ್ಕಾಗಿ ಕೊಲೆ: ಆನಂದ ಮಾರ್ಗ ಪಾಲಿಟೆಕ್ನಿಕ್‌ ಕಾಲೇಜಿನ ಆಡಳಿತ ಮತ್ತು ಜಮೀನು ವಿಚಾರವಾಗಿ ಆಶ್ರಮದ ಎರಡು ಗುಂಪುಗಳ ನಡುವೆ ಅನೇಕ ವರ್ಷಗಳಿಂದ ಮುಸುಕಿನ ಗುದ್ದಾಟ ನಡೆಯುತಿತ್ತು.

ಇದೇ ವಿಚಾರವಾಗಿ ಶನಿವಾರ ಕೋಲ್ಕತ್ತ ಮೂಲದ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಅವರನ್ನು ಆಚಾರ್ಯ ಧರ್ಮ ಪ್ರಾಣಾನಂದ ಸ್ವಾಮೀಜಿ ಗುಂಪು ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ಬೆಳಿಗ್ಗೆ ಆರು ಗಂಟೆಗೆ ಶೌಚಾಲಯದಲ್ಲಿದ್ದ ಸ್ವಾಮೀಜಿಯನ್ನು ಆರೋಪಿಗಳು ಹೊರಗೆ ಎಳೆದು ಮುಖಕ್ಕೆ ‘ಸ್ಪ್ರೇ’ ಸಿಂಪಡಿಸಿದ್ದಾರೆ. ಬಳಿಕ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಸ್ವಾಮೀಜಿಯ ತಲೆಗೂದಲು, ಗಡ್ಡ ಕತ್ತರಿಸಿ ಅವರ ಬಳಿ ಇದ್ದ ಮೊಬೈಲ್ ಹಾಗೂ ಕೀ ಕಿತ್ತು
ಕೊಂಡಿದ್ದಾರೆ. 

ಸ್ಥಳೀಯರು ಗಲಾಟೆ ಬಿಡಿಸಿ ಸ್ವಾಮೀಜಿಯನ್ನು ಆಂಬುಲೆನ್ಸ್‌ನಲ್ಲಿ ಮಾಲೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪೊಲೀ ಸರು ಸ್ವಾಮೀಜಿಯನ್ನು ಕೋಲಾರದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ತೀವ್ರ ರಕ್ತಸ್ರಾವದಿಂದ ಮಧ್ಯಾಹ್ನ ಸ್ವಾಮೀಜಿ ಮೃತಪಟ್ಟರು.

ಆಶ್ರಮ ಹಾಗೂ ಆಸ್ಪತ್ರೆಗೆ ಎಸ್‌ಪಿ ಭೇಟಿ ನೀಡಿದರು. ವಿಧಿವಿಜ್ಞಾನ ವಿಭಾಗದ ತಜ್ಞರು ಸ್ಥಳಕ್ಕೆ ಬಂದು ಮಾಹಿತಿ ಕಲೆಹಾಕಿದ್ದಾರೆ. ಹಲ್ಲೆಗೆ ಬಳಸಿದ ದೊಣ್ಣೆ, ಡಿಜಿಟಲ್‌ ಸಾಕ್ಷ್ಯ ಕಲೆಹಾಕಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT