ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸಿ

ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಸೂಚನೆ
Last Updated 2 ಜುಲೈ 2019, 10:46 IST
ಅಕ್ಷರ ಗಾತ್ರ

ಕೋಲಾರ: ‘ಶ್ರೀನಿವಾಸಪುರ ಪಟ್ಟಣದ ಅಮಾನಿಕೆರೆ ಸಮೀಪದ ಸರ್ಕಾರಿ ಜಾಗವನ್ನು ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸಬೇಕು’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಪಟ್ಟಣದ ಸಮೀಪದ ಅಮಾನಿಕೆರೆ ಪಕ್ಕದ ಖಾಲಿ ಜಾಗದಲ್ಲಿ ಬಡವರು ಗುಡಿಸಲಿನಲ್ಲಿ ವಾಸವಿದ್ದಾರೆ. ಅದಕ್ಕೆ ಕೆಲ ಪ್ರಭಾವಿಗಳು ನ್ಯಾಯಾಲಯಕ್ಕೆ ಹೋಗಿ ಅಡ್ಡಿಪಡಿಸುತ್ತಿದ್ದು, ನ್ಯಾಯಾಲಯವೂ ಬಡವರ ಪರವಾಗಿಯೇ ತೀರ್ಪು ನೀಡಿದೆ’ ಎಂದರು.

‘106 ಎಕರೆ ಜಾಗದಲ್ಲಿ 46 ಎಕರೆಯಲ್ಲಿ ಬಡವರು, ನಿರ್ಗತಿಕರು ವಾಸವಿದ್ದಾರೆ. ಉಳಿದ ಜಾಗದಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಲಾಗಿತ್ತು, ಆದರೆ ಯಾಕೆ ಇದುವರೆಗೂ ಕ್ರಮಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.

‘ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಕೆಲ ವ್ಯಕ್ತಿಗಳು ನ್ಯಾಯಾಲಯದಿಂದ ತಡೆಯಾಜ್ಞೆ ಮಾಡಿಸಿದ್ದಾರೆ’ ಎಂದು ಬಿ.ಎಸ್.ರಾಜೀವ್ ಹೇಳಿದರು.

ಇದಕ್ಕೆ ಗರಂ ಆದ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್, ‘ನ್ಯಾಯಾಲಯದ ಆದೇಶ ಓದುವುದು ಬರುವುದಿಲ್ವೆ. ಮನಸ್ಸಿಗೆ ಬಂದಂತೆ ಉತ್ತರ ಕೊಡಲು ಬರಬೇಡಿ. ಸಾರ್ವಜನಿಕರ ಜೀವನದಲ್ಲಿ ಬಡವರಿಗೆ ಅನುಕೂಲ ಮಾಡಿದಾಗೆ ಗೌರವದೊರೆಯುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎಲ್ಲ ಇಲಾಖೆಗಳೂ ಒಂದೇ ಸಂಕೀರ್ಣದಲ್ಲಿ ಇರುವಂತೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಕಚೇರಿ ಕಟ್ಟಡಗಳ ನಿರ್ಮಾಣದ ಜತೆಗೆ, ಪಟ್ಟಣದಿಂದ ಜನ ಕಚೇರಿಗಳಿಗೆ ಬಂದು ಹೋಗಲು ರಸ್ತೆಗಳನ್ನು ನಿರ್ಮಿಸಲಾಗುವುದು. ಎಲ್ಲ ಕಚೇರಿಗಳ ಕಟ್ಟಡಗಳ ನಿರ್ಮಾಣ ಪೂರ್ಣಗೊಂಡ ಮೇಲೆ, ಇದೊಂದು ಮಾದರಿ ಕಚೇರಿಗಳ ಸಂಕೀರ್ಣವಾಗಿ ರೂಪಗೊಳ್ಳಲಿದೆ’ ಎಂದು ಹೇಳಿದರು.

‘ಸದ್ಯ ಇಲ್ಲಿ ವಾಸವಿರುವ ನಿರ್ಗತಿಕರಿಗೆ ವಸತಿ ಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕಿದೆ. ಮೈದಾನದಲ್ಲಿ ಸಮಾಜದ ಎಲ್ಲ ಸಮುದಾಯಗಳ ಜನರ ಅನುಕೂಲಕ್ಕಾಗಿ ಪ್ರತ್ಯೇಕ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಬೇಕು’ ಎಂದು ತಿಳಿಸಿದರು.

‘ಈಗಾಗಲೇ ಕೆಲ ಇಲಾಖೆಗಳ ಕಚೇರಿ ಕಟ್ಟಡ ನಿರ್ಮಿಸಲು ಹಣ ಬಿಡುಗಡೆಯಾಗಿದೆ. ಉಳಿದ ಕಚೇರಿ ಕಟ್ಟಡಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಸಲಾಗುವುದು. ಕಚೇರಿಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಮೇಲೆ, ಪ್ರತ್ಯೇಕ ಸ್ಥಳದಲ್ಲಿ ಮನೆ ನಿವೇಶನಗಳನ್ನು ನಿರ್ಮಿಸಿ, ಅರ್ಹ ನಿವೇಶನ ರಹಿತರಿಗೆ ಪಕ್ಷಾತೀತವಾಗಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಇದಕ್ಕೂ ಬೇಕಾದರೆ ಅಡ್ಡಿಪಡಿಸಲು ಮುಂದಾಗುತ್ತಾರೆ’ ಎಂದರು.

‘ಸರ್ಕಾರಿ ಜಾಗವನ್ನು ಸರ್ವೇ ಮಾಡಿ ಒತ್ತುವರಿ ಜಾಗ ತೆರವುಗೊಳಿಸಿ ಎಂದು ಹೇಳಿದರೆ ಕಥೆ ಹೇಳುತೀರಾ. ಕಂದಾಯ ಇಲಾಖೆಯ ಕಾಯ್ದೆಗಳನ್ನು ತೆಗೆದು ಓದಿ ಅರ್ಥವಾಗುತ್ತದೆ. ತಾಲ್ಲೂಕು ಕಚೇರಿ ಹೊರತುಪಡಿಸಿದರೆ, ಬೇರೆ ಬೇರೆ ಇಲಾಖೆಗಳ ಕಚೇರಿಗಳು ಬೇರೆ ಬೇರೆ ಕಡೆಗೆ ಇವೆ. ಎಲ್ಲವನ್ನೂ ಒಂದೇ ಕಡೆ ನಿರ್ಮಿಸಬೇಕು ಎಂಬುದು ಮುಖ್ಯ ಉದ್ದೇಶವಾಗಿದೆ. ಅದಷ್ಟು ಬೇಗ ಸರ್ವೇ ಮಾಡಿಕೊಡಬೇಕು’ ಎಂದು ಸೂಚಿಸಿದರು.

‘ರಾಜಕೀಯ ಜೀವನದಲ್ಲಿ ಕೆಲ ಸಂದರ್ಭದಲ್ಲಿ ಅನಿವಾರ್ಯವಿಲ್ಲದೆ ಕೆಲಸಕ್ಕೆಬಾರದವರನ್ನು ನಂಬಬೇಕಾಗುತ್ತದೆ. ಸರ್ಕಾರಿ ಜಾಗದಲ್ಲಿ ಅನುಭವದಲ್ಲಿರುವ ಬಡವರಿಗೆ ಭೂಮಿ ಕಲ್ಪಿಸಬೇಕು ಎಂದು ಹಿಂದೆ 94ಸಿ ಮತ್ತು 94ಸಿಸಿ ಅರ್ಜಿ ಸ್ವೀಕರಿಸಿ ಹಕ್ಕು ಪತ್ರ ನೀಡಲಾಗಿದೆ. ಅಧಿಕಾರಿಗಳು ಸಹಕರಿಸಬೇಕು’ ಎಂದು ಸಲಹೆ ನೀಡಿದರು.

‘ಕಚೇರಿಗಳಲ್ಲಿ ತಹಶೀಲ್ದಾರ್‌ಗಳ ಅಧಿಕಾರಿವನ್ನು ಕೆಳ ಹಂತದ ಸಿಬ್ಬಂದಿಗೆ ನೀಡಿದ್ದಾರೆ. ಈ ಪರಿಸ್ಥಿತಿಯಲ್ಲಿ ಕೆಲಸ ಮಾಡಲು ಸಾಧ್ಯವೇ. ಜವಾಬ್ದಾರಿ ಅರಿತು ಕೆಲಸ ಮಾಡಿ’ ಎಂದು ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್, ಹೆಚ್ಚುಚರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಉಪ ವಿಭಾಗಾಧಿಕಾರಿ ಸೋಮಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಾನವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT