ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಪಾದಚಾರಿ ಮಾರ್ಗದ ಒತ್ತುವರಿ ತೆರವು

ನಗರಸಭೆ ಅಧಿಕಾರಿಗಳ ಎಚ್ಚರಿಕೆಗೂ ಜಗ್ಗದೆ ವರ್ತಕರ ವಹಿವಾಟು
Last Updated 11 ಅಕ್ಟೋಬರ್ 2021, 15:41 IST
ಅಕ್ಷರ ಗಾತ್ರ

ಕೋಲಾರ: ನಗರದ ವಿವಿಧೆಡೆ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ತೆರೆಯಲಾಗಿದ್ದ ಅಂಗಡಿಗಳನ್ನು ನಗರಸಭೆ ಅಧಿಕಾರಿಗಳು ಸೋಮವಾರ ತೆರವುಗೊಳಿಸಿದರು.

ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆ, ಇಟಿಸಿಎಂ ರಸ್ತೆ ಸೇರಿದಂತೆ ಹಲವೆಡೆ ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ಅಂಗಡಿ ತೆರೆದಿದ್ದರು. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಈ ಸಂಬಂಧ ನಗರವಾಸಿಗಳು ನಗರಸಭೆಗೆ ದೂರು ಕೊಟ್ಟಿದ್ದರು.

ನಗರಸಭೆಯು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಪಾದಚಾರಿ ಮಾರ್ಗವು ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿತ್ತು. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಪಾದಚಾರಿ ಮಾರ್ಗದಲ್ಲಿನ ಅಂಗಡಿಗಳನ್ನು ತೆರವುಗೊಳಿಸುವಂತೆ ಮಾಲೀಕರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ, ವ್ಯಾಪಾರಿಗಳು ಎಚ್ಚರಿಕೆಗೂ ಜಗ್ಗದೆ ವಹಿವಾಟು ಮುಂದುವರಿಸಿದ್ದರು.

ಹೀಗಾಗಿ ನಗರಸಭೆ ಆಯುಕ್ತ ಪ್ರಸಾದ್‌ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಅಧಿಕಾರಿಗಳು ಪಾದಚಾರಿ ಮಾರ್ಗದಲ್ಲಿನ ಅಂಗಡಿಗಳು ಮತ್ತು ತಳ್ಳು ಗಾಡಿಗಳನ್ನು ತೆರವು ಮಾಡಿಸಿದರು. ತರಕಾರಿ, ಹಣ್ಣು, ಹೋಟೆಲ್, ಬಟ್ಟೆ, ಪಾದರಕ್ಷೆ, ಎಲೆಕ್ಟ್ರಾನಿಕ್‌ ಉಪಕರಣ ಮಾರಾಟ ಮಳಿಗೆಗಳು ಸೇರಿದಂತೆ ವಿವಿಧ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಕೆಲ ವ್ಯಾಪಾರಿಗಳು ಅಧಿಕಾರಿಗಳನ್ನು ನೋಡುತ್ತಿದ್ದಂತೆ ಗಾಬರಿಯಿಂದ ಸ್ಥಳದಲ್ಲೇ ಗಾಡಿಗಳನ್ನು ಬಿಟ್ಟು ಪರಾರಿಯಾದರು. ಮತ್ತೆ ಕೆಲವರು ಗಾಡಿಗಳೊಂದಿಗೆ ಕಾಲ್ಕಿತ್ತರು. 10ಕ್ಕೂ ಹೆಚ್ಚುತಳ್ಳು ಗಾಡಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು.

ಸ್ಥಳಾವಕಾಶಕ್ಕೆ ಮನವಿ: ಕೆಲ ಅಂಗಡಿ ಮಾಲೀಕರು, ‘ಮೂರ್ನಾಲ್ಕು ದಿನ ಕಾಲಾವಕಾಶ ನೀಡಿ. ಅಂಗಡಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇದೀಗ ಅಂಗಡಿ ತೆರವುಗೊಳಿಸಿದರೆ ಜೀವನ ನಿರ್ವಹಣೆಗೆ ಏನು ಮಾಡಬೇಕು? ದಯವಿಟ್ಟು ವಹಿವಾಟು ಮುಂದುವರಿಸಲು ಬೇರೆಡೆ ಸ್ಥಳಾವಕಾಶ ಕಲ್ಪಿಸಿ’ ಎಂದು ಮನವಿ ಮಾಡಿದರು.

‘ದುಡಿಮೆ ಇಲ್ಲದೆ ಜೀವನ ನಡೆಸಲು ಕಷ್ಟವಾಗುತ್ತದೆ. ಮಕ್ಕಳ ಶಾಲಾ ಶುಲ್ಕ ಕಟ್ಟಲು ಹಣವಿಲ್ಲ. ಬೇರೆಡೆ ವಹಿವಾಟಿಗೆ ಅನುಮತಿ ನೀಡದಿದ್ದರೆ ನಾವು ಬೀದಿ ಪಾಲಾಗುತ್ತೇವೆ’ ಎಂದು ಅಳಲು ತೋಡಿಕೊಂಡರು.

ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ‘ವಿಜಯದಶಮಿ ಹಬ್ಬ ಇರುವುದರಿಂದ ಹಳೇ ಬಸ್‌ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್‌ ಪಕ್ಕದಲ್ಲಿ ತಾತ್ಕಾಲಿಕವಾಗಿ ವ್ಯಾಪಾರ ಮಾಡಿಕೊಳ್ಳಿ. ಹಬ್ಬದ ವಹಿವಾಟು ನಂತರ ಅಲ್ಲಿಂದ ಅಂಗಡಿ ಖಾಲಿ ಮಾಡಬೇಕು. ಯಾವುದೇ ಕಾರಣಕ್ಕೂ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡಬಾರದು’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಪ್ರತಿ ವಾರ ಕಾರ್ಯಾಚರಣೆ: ‘ಪಾದಚಾರಿ ಮಾರ್ಗದಲ್ಲಿನ ಅಂಗಡಿಗಳನ್ನು ತೆರವುಗೊಳಿಸುವಂತೆ ಸಂಸದರು, ಜಿಲ್ಲಾಧಿಕಾರಿ ಆದೇಶಿಸಿದ್ದರು. ಈ ಸಂಬಂಧ ಅಂಗಡಿ ಮಾಲೀಕರ ಸಭೆ ಕರೆದು 3 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೂ ಅಂಗಡಿ ತೆರವು ಮಾಡದಿದ್ದರಿಂದ ನಗರಸಭೆಯಿಂದಲೇ ಮಳಿಗೆಗಳನ್ನು ತೆರವು ಮಾಡಿದ್ದೇವೆ. ಪ್ರತಿ ವಾರ ಒಂದೊಂದು ರಸ್ತೆಯಲ್ಲಿ ಇದೇ ರೀತಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತೇವೆ’ ಎಂದು ಆಯುಕ್ತ ಪ್ರಸಾದ್‌ ತಿಳಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಾಚರಣೆ ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT