ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ-ವೈಟ್‌ಫೀಲ್ಡ್‌ ರೈಲು ಸೇವೆ ಆರಂಭ

ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿದ ಸಂಸದ ಮುನಿಸ್ವಾಮಿ
Last Updated 23 ಡಿಸೆಂಬರ್ 2019, 13:46 IST
ಅಕ್ಷರ ಗಾತ್ರ

ಕೋಲಾರ: ‘ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಭರವಸೆ ಈಡೇರಿಸುವ ಜನಪರ ಸರ್ಕಾರವಾಗಿದೆ. ಕೋಲಾರ-ವೈಟ್‌ಫೀಲ್ಡ್‌ ನಡುವೆ ನೂತನ ರೈಲು ಸೇವೆ ಆರಂಭಿಸುವ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆದಿದ್ದೇನೆ’ ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.

ಇಲ್ಲಿ ರೈಲು ನಿಲ್ದಾಣದಲ್ಲಿ ಸೋಮವಾರ ಕೋಲಾರ– ವೈಟ್‌ಫೀಲ್ಡ್‌ ನಡುವಿನ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿ, ‘ಜಿಲ್ಲೆಯ ಹಿಂದಿನ ಸಂಸದರಂತೆ ನಾನು ರೈಲು ಬಿಡುವುದಿಲ್ಲ. ಏನು ಹೇಳುತ್ತೇನೊ ಅದನ್ನೇ ಮಾಡುತ್ತೇನೆ. ಹಿಂದಿನ ಸಂಸದರು ಮನಸ್ಸು ಮಾಡಿದ್ದರೆ ಸಾಕಷ್ಟು ಕೆಲಸ ಮಾಡಬಹುದಿತ್ತು’ ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

‘ಕೇಂದ್ರದಲ್ಲಿ ಪ್ರಧಾನಿ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಜನರಿಗೆ ನೀಡಿದ ಆಶ್ವಾಸನೆಗಳನ್ನು ಶೇ 100ರಷ್ಟು ಈಡೇರಿಸುತ್ತದೆ. ಮತ ಗಳಿಕೆಗಾಗಿ ರಾಜಕಾರಣ ಮಾಡುವುದಿಲ್ಲ’ ಎಂದರು.

‘ಕೋಲಾರ ಮತ್ತು ವೈಟ್‌ಫೀಲ್ಡ್‌ ನಡುವಿನ 156 ಕಿ.ಮೀ ಪ್ರಯಾಣಕ್ಕೆ ₹ 35 ನಿಗದಿಪಡಿಸಲಾಗಿದೆ. ರೈಲು ಬೆಳಿಗ್ಗೆ 7.30ಕ್ಕೆ ಕೋಲಾರ ಬಿಟ್ಟು ಶ್ರೀನಿವಾಸಪುರ, ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಯಲಹಂಕ ಮಾರ್ಗವಾಗಿ ಸಾಗಿ 10.30ಕ್ಕೆ ವೈಟ್‌ಫೀಲ್ಡ್‌ಗೆ ತಲುಪುತ್ತದೆ. ಸಂಜೆ 4.30ಕ್ಕೆ ವೈಟ್‌ಫೀಲ್ಡ್‌ನಿಂದ ಹೊರಡುವ ಅದೇ ರೈಲು ರಾತ್ರಿ 7.30ಕ್ಕೆ ಕೋಲಾರಕ್ಕೆ ಬರುತ್ತದೆ’ ಎಂದು ವಿವರಿಸಿದರು.

ಬಹು ದಿನದ ಬೇಡಿಕೆ: ‘ಕೋಲಾರ ಭಾಗದ ಜನರಿಗೆ ಯಲಹಂಕ ಕಡೆಗೆ ಕೆಲಸಕ್ಕೆ ಹೋಗಲು ಕಷ್ಟವಾಗುತ್ತಿತ್ತು. ಜನರ ಬಹು ದಿನಗಳ ಬೇಡಿಕೆಯಂತೆ ನೂತನ ರೈಲು ಸೇವೆ ಆರಂಭಿಸಲಾಗಿದೆ. ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕು. ಈ ಹಿಂದೆ ರೈಲು ಸಂಚಾರ ಆರಂಭವಾಗಿ ಮಧ್ಯೆ ಸ್ಥಗಿತಗೊಂಡಿದ್ದರೆ ಜನರಿಗೆ ನಂಬಿಕೆ ಇಲ್ಲ. ರೈಲು ಸೇವೆ ಮುಂದುವರಿಯಲು ಸಾರ್ವಜನಿಕರು ಹೆಚ್ಚಾಗಿ ರೈಲಿನಲ್ಲಿ ಪ್ರಯಾಣಿಸಬೇಕು ಎಂದು ಮನವಿ ಮಾಡಿದರು.

‘ಕೋಲಾರ–ವೈಟ್‌ಫೀಲ್ಡ್ ನಡುವೆ ನೂತನ ರೈಲು ಮಾರ್ಗ ನಿರ್ಮಾಣ ಸಂಬಂಧ ಮುಖ್ಯಮಂತ್ರಿ ಹಾಗೂ ಕೇಂದ್ರ ರೈಲ್ವೆ ಸಚಿವರು ಅಧಿಕಾರಿಗಳ ಜತೆ ಚರ್ಚಿಸಿ ಭೂಸ್ವಾಧೀನಕ್ಕೆ ಸೂಚನೆ ನೀಡಿದ್ದಾರೆ. ಶ್ರೀನಿವಾಸಪುರದಲ್ಲಿ ರೈಲು ವರ್ಕ್‌ಶಾಪ್‌ ಕಾಮಗಾರಿಗೆ ಸದ್ಯದಲ್ಲೇ ಭೂಮಿಪೂಜೆ ನೆರವೇರಿಸುತ್ತೇವೆ. ರೈಲ್ವೆ ಸಚಿವಾಲಯಕ್ಕೆ ಭೂಮಿ ಹಸ್ತಾಂತರಿಸಿದರೆ ಕೆಲಸ ಆರಂಭಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

ತಿರುಪತಿಗೆ ರೈಲು: ‘ವಾರಕ್ಕೊಮ್ಮೆ ಬೆಂಗಳೂರಿನಿಂದ ಕೋಲಾರ ಮಾರ್ಗವಾಗಿ ದೆಹಲಿಗೆ ಹೋಗುತ್ತದ್ದ ನಿಜಾಮುದ್ದೀನ್ ರೈಲನ್ನು ಜನರು ಬಳಕೆ ಮಾಡದ ಕಾರಣ ನಿಲ್ಲಿಸಲಾಗಿದೆ. ಆ ರೈಲು ಸಂಚಾರ ಪುನರಾರಂಭಿಸುವಂತೆ ಒತ್ತಾಯಿಸಿದ್ದೇವೆ. ತಿರುಪತಿಗೂ ರೈಲು ಸೇವೆ ಆರಂಭಿಸುವಂತೆ ಕೇಳಿದ್ದು, ರೈಲ್ವೆ ಸಚಿವರು ಸಮ್ಮತಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಕೋಲಾರದವರೆಗೆ ಸಬ್ ಅರ್ಬನ್ ರೈಲು ಸೇವೆ ವಿಸ್ತರಿಸುವಂತೆ ಬೇಡಿಕೆ ಇಟ್ಟಿದ್ದೇವೆ. ಕೋಲಾರ– ವೈಟ್‌ಫೀಲ್ಡ್‌ ನಡುವೆ ಹೊಸ ರೈಲು ಮಾರ್ಗವಾದರೆ ಈ ಬೇಡಿಕೆ ಈಡೇರುತ್ತದೆ. ರೈತರ ಮನವೊಲಿಸಿ ಭೂಸ್ವಾಧೀನ ಮಾಡಲಾಗುತ್ತದೆ. ಜಿಲ್ಲೆಯಿಂದ ಪ್ರತಿನಿತ್ಯ 20 ಸಾವಿರ ಜನ ಬೆಂಗಳೂರು ಕಡೆ ಪ್ರಯಾಣ ಮಾಡುವುದರಿಂದ ಈ ಮಾರ್ಗ ಸಹಕಾರಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಕೋಲಾರ-ಬಂಗಾರಪೇಟೆ ಜೋಡಿ ಮಾರ್ಗ ನಿರ್ಮಾಣ, ಬಂಗಾರಪೇಟೆ, ಮಾರಿಕುಪ್ಪಂ ಮತ್ತು ಕುಪ್ಪಂ ನಡುವೆ ಜೋಡಿ ಮಾರ್ಗ ನಿರ್ಮಾಣ ಮಾಡಿದರೆ ಅಂತರರಾಜ್ಯ ಸಂಪರ್ಕ ಸಾಧ್ಯವಾಗುತ್ತದೆ. ಮಾರಿಕುಪ್ಪಂ-ಕುಪ್ಪಂ ನಡುವೆ ಕಾಮಗಾರಿ ನಡೆಯುತ್ತಿದೆ. ಬಂಗಾರಪೇಟೆಯಿಂದ ಕೆಜಿಎಫ್‌ಗೆ 12 ಕಿ.ಮೀ ಇರುವುದರಿಂದ ಈ ಮಾರ್ಗ ವಿಸ್ತರಿಸುವುದಾಗಿ ರೈಲ್ವೆ ಸಚಿವರು ಭರವಸೆ ಕೊಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ವಕೀಲ ಕೆ.ವಿ.ಶಂಕರಪ್ಪ, ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT