ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಸೇವೆ– ಶಿಕ್ಷಣದ ವ್ಯಾಪಾರೀಕರಣ

ಚಿಕಿತ್ಸೆಗೆ ಕಾರ್ಪೊರೇಟ್ ಆಸ್ಪತ್ರೆಗಳ ಹಿಂದೇಟು: ಶಾಸಕ ರಮೇಶ್‌ಕುಮಾರ್‌ ಕಳವಳ
Last Updated 20 ಜೂನ್ 2020, 14:29 IST
ಅಕ್ಷರ ಗಾತ್ರ

ಕೋಲಾರ: ‘ದೇಶ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದು, ಕೊರೊನಾ ಸೋಂಕಿತರ ಚಿಕಿತ್ಸೆಗೆ ಕಾರ್ಪೊರೇಟ್ ಆಸ್ಪತ್ರೆಗಳು ಹಿಂದೇಟು ಹಾಕುತ್ತಿವೆ. ಸರ್ಕಾರಿ ಆಸ್ಪತ್ರೆಗಳೇ ಸೋಂಕಿತರಿಗೆ ಚಿಕಿತ್ಸೆ ನೀಡಬೇಕಿದೆ’ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್ ಕಳವಳ ವ್ಯಕ್ತಪಡಿಸಿದರು.

ನಗರದ ಇಟಿಸಿಎಂ ಆಸ್ಪತ್ರೆ ಮತ್ತು ಬೆಂಗಳೂರಿನ ನೈಟಿಂಗೇಲ್ ಸಂಸ್ಥೆ ಸಹಯೋಗದಲ್ಲಿ ಆರಂಭಿಸಲಾಗಿರುವ ವಯೋವೃದ್ಧರ ಸೇವಾ ಘಟಕಕ್ಕೆ (ಜಿರಿಯಾಟಿಕ್) ಇಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿ, ‘ಸರ್ಕಾರಿ ಆಸ್ಪತ್ರೆಗಳನ್ನು ಒನ್ ವೇ ಆಸ್ಪತ್ರೆಗಳೆಂದು ಹಿಯಾಳಿಸುತ್ತಿದ್ದರು. ಆದರೆ, ಈಗ ಕೊರೊನಾ ಚಿಕಿತ್ಸೆಗೆ ಈ ಆಸ್ಪತ್ರೆಗಳನ್ನೇ ನಂಬುವಂತಾಗಿದೆ’ ಎಂದು ಹೇಳಿದರು.

‘ಅನಿವಾರ್ಯ ಪರಿಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗಳೇ ಬೇಕು. ಸರ್ಕಾರಿ ಆಸ್ಪತ್ರೆಗಳು ಕೋವಿಡ್‌–19 ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿವೆ. ವೈದ್ಯಕೀಯ ಸೇವೆ ಮತ್ತು ಶಿಕ್ಷಣವು ಇಂದು ವ್ಯಾಪಾರೀಕರಣವಾಗಿದೆ’ ಎಂದು ಮಾರ್ಮಿಕವಾಗಿ ನುಡಿದರು.

‘ನಾನು ಆರೋಗ್ಯ ಸಚಿವನಾಗಿದ್ದಾಗ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಸತ್ತರೆ ಹಣ ಕೊಡದೆ ಆಸ್ಪತ್ರೆಯಿಂದ ಹೆಣ ಹೊರ ತರಲಾಗದ ಪರಿಸ್ಥಿತಿಯಿತ್ತು. ಹೀಗಾಗಿ ಕೆಪಿಎಂಇ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಆಗ ಕೆಲ ಸಂಘಟನೆಗಳು ಹೋರಾಟ ಮಾಡಿದವು. ಕೆಲವರು ಹಣ ಸಂಗ್ರಹಿಸಿ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸುವ ಪ್ರಯತ್ನ ನಡೆಸಿದರು. ಆದರೆ, ಅವರ ಆಟ ನಡೆಯಲಿಲ್ಲ’ ಎಂದರು.

‘ಕಾಯಿಲೆ ಎಲ್ಲರಿಗೂ ಬರುತ್ತದೆ. ಹಣವಿದ್ದವರಿಗೆ ಮಾತ್ರ ವೈದ್ಯಕೀಯ ಚಿಕಿತ್ಸೆ ಎಂದಾದರೆ ಹಣವಿಲ್ಲದವರ ಗತಿ ಏನು? ವೈದ್ಯಕೀಯ ಶಿಕ್ಷಣ ಪಡೆದವರು ಸೇವೆಯಲ್ಲಿ ಕಪಟತನ ತೋರುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ. ಆದರೆ, ಪ್ರತಿಜ್ಞೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಹೀಗಾಗಿ ಪ್ರತಿಜ್ಞೆ ಮಾಡುವುದನ್ನು ಕಾನೂನಿನಿಂದ ತೆಗೆದು ಹಾಕಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೈದ್ಯಕೀಯ ಸೇವೆ: ‘ಈ ಹಿಂದೆ ಸರ್ಕಾರಿ ಆಸ್ಪತ್ರೆಗಳೂ ಸೇರಿದಂತೆ ಮಿಷನರಿಗಳಿಂದ ಸ್ಥಾಪಿತವಾದ ಆಸ್ಪತ್ರೆಗಳನ್ನು ಧರ್ಮಾಸ್ಪತ್ರೆಗಳೆಂದು ಕರೆಯುತ್ತಿದ್ದರು. ಮಿಷನರಿಗಳು ಮಾನವೀಯವಾಗಿ ವೈದ್ಯಕೀಯ ಸೇವೆ ನೀಡುತ್ತಿದ್ದವು. ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮಿಷನರಿಗಳು ಸಲ್ಲಿಸಿರುವ ಸೇವೆ ಅಮೋಘವಾದದು. ಈ ಸೇವೆ ಎಂದಿಗೂ ಮರೆಯಲಾಗುವುದಿಲ್ಲ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸ್ಮರಿಸಿದರು.

ಮೆಥೋಡಿಸ್ಟ್ ಚರ್ಚ್‌ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಶಾಂತಕುಮಾರ್, ಇಟಿಸಿಎಂ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜಾನ್ಸನ್ ಕುಂದರ್, ನೈಟಿಂಗೇಲ್ ಸಂಸ್ಥೆ ವ್ಯವಸ್ಥಾಪಕ ಪ್ರೇಮ್‌ಕುಮಾರ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT