ಸೋಮವಾರ, ಮೇ 23, 2022
24 °C

ಕೋಮು ಸಾಮರಸ್ಯ ಬೆಸೆಯುವ ನೋಮುದಾರ

ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ಹಿಂದೂ– ಮುಸ್ಲಿಂ ಸಾಮರಸ್ಯಕ್ಕೆ ದೀಪಾವಳಿ ಹಬ್ಬದ ಆಚರಣೆಯಲ್ಲಿ ಬಳಸುವ ನೋಮುದಾರ ಒಂದು ಉದಾಹರಣೆ. ಕೈಗೆ ನೋಮುದಾರ ಕಟ್ಟಿಕೊಳ್ಳುವುದು ಬೆಳಕಿನ ಹಬ್ಬದ ವಿಶೇಷ.

ದೀಪಾವಳಿ ಆಚರಿಸಲು ನೋಮುದಾರ ಬೇಕೇ ಬೇಕು. ಆದರೆ, ಇದನ್ನು ತಯಾರಿಸುವವರು ಮಾತ್ರ ಮುಸ್ಲಿಮರು. ಶತಮಾನಗಳಿಂದಲೂ ನೋಮುದಾರ ಹಿಂದೂ– ಮುಸ್ಲಿಮರ ಮಧ್ಯೆ ಸ್ನೇಹದ ಸೇತುವೆಯಾಗಿದೆ. 

ಮುಸ್ಲಿಂ ಸಮುದಾಯದ ಕೆಲವರು ಪ್ರತಿವರ್ಷ ದೀಪಾವಳಿಗೆ ಮುನ್ನ ಬಣ್ಣ ಬಣ್ಣದ ನೋಮುದಾರಗಳನ್ನು ಕಟ್ಟುತ್ತಾರೆ. ಹಾಗೆ ಕಟ್ಟಿದ ನೋಮುದಾರ ಗಳನ್ನು ಸಮೀಪದ ನಗರ ಅಥವಾ ಪಟ್ಟಣಕ್ಕೆ ಕೊಂಡೊಯ್ದು ಮಾರಾಟ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸಂತೆಗಳಲ್ಲೂ ನೋಮುದಾರ ಮಾರಾಟ ಮಾಡಲಾಗುತ್ತದೆ.

ನೋಮುದಾರ ಕಟ್ಟುವ ಮುಸ್ಲಿಮರು ಕೆಲವು ಗ್ರಾಮಗಳ ವಾಡಿಕೆ ಇಟ್ಟುಕೊಂಡಿರುತ್ತಾರೆ. ಅವರು ತಮಗೆ ಸಂಬಂಧಿಸಿದ ಗ್ರಾಮಕ್ಕೆ ದೀಪಾವಳಿಗೆ ಎರಡು– ಮೂರು ದಿನ ಮೊದಲೇ ಹೋಗಿ ಪ್ರತಿ ಹಿಂದೂ ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ನೋಮುದಾರಗಳನ್ನು ಎಣಿಸಿ ಕೊಟ್ಟು ಹಿಂದಿರುಗುತ್ತಾರೆ. ಹಬ್ಬ ಮುಗಿದ ಮರುದಿನ ಮತ್ತೆ ಗ್ರಾಮಕ್ಕೆ ಭೇಟಿ ನೀಡಿ ಮನೆ ಮನೆಗೆ ಹೋಗಿ ಕೊಟ್ಟ ನೋಮುದಾರಕ್ಕೆ ಬದಲಾಗಿ ರಾಗಿ, ಭತ್ತ ಪಡೆದುಕೊಳ್ಳುತ್ತಾರೆ. ಮನೆಯವರು ದವಸ ಧಾನ್ಯದ ಜತೆಗೆ ಕಜ್ಜಾಯ ಕೊಟ್ಟು ಕಳಿಸುತ್ತಾರೆ.

ಗ್ರಾಮೀಣ ಪ್ರದೇಶದ ಮುಸ್ಲಿಮರಿಗೆ ಕಜ್ಜಾಯ ಎಂದರೆ ಪಂಚಪ್ರಾಣ. ಹಿಂದೂ ಗಳು ನೀಡುವ ಕಜ್ಜಾಯ ಸವಿದು ಖುಷಿ ಪಡುತ್ತಾರೆ. ಮಕ್ಕಳಿಗೂ ಕಜ್ಜಾಯದ ರುಚಿ ತೋರಿಸುತ್ತಾರೆ. ಎರಡೂ ಸಮುದಾಯದ ಜನರು ದೀಪಾವಳಿ ಸಂಭ್ರಮದಲ್ಲಿ ಭಾಗವಹಿಸುತ್ತಾರೆ.

ಬದಲಾದ ಪರಿಸ್ಥಿತಿಯಲ್ಲಿ ದವಸ ಧಾನ್ಯ ಪಡೆದು ನೋಮುದಾರ ಕೊಡುವ ಪದ್ಧತಿ ಮಹತ್ವ ಕಳೆದು ಕೊಳ್ಳುತ್ತಿದೆ. ಹಣ ಪಡೆದು ನೀಡುವ ಪದ್ಧತಿ ಬಳಕೆಗೆ ಬಂದಿದೆ. ಆದರೂ ಅದನ್ನು ತಯಾರಿಸುವ ಹಾಗೂ ಅದನ್ನು ಬಳಸಿಕೊಳ್ಳುವ ವ್ಯಕ್ತಿಗಳ ಮಧ್ಯೆ ಮತೀಯ ಸಾಮರಸ್ಯಕ್ಕೆ ಧಕ್ಕೆ ಉಂಟಾಗಿಲ್ಲ.

‘ನಮ್ಮ ತಾತ ಮುತ್ತಾತಂದಿರ ಕಾಲದಿಂದಲೂ ನೋಮುದಾರ ಕಟ್ಟಿ ದೀಪಾವಳಿ ಸಂದರ್ಭದಲ್ಲಿ ಹಿಂದೂ ಕುಟುಂಬಗಳಿಗೆ ನೀಡುತ್ತಿದ್ದೇವೆ. ಈಗ ಮಾರಾಟ ಮಾಡಿ ನಾಲ್ಕು ಕಾಸು ಸಂಪಾದಿಸುತ್ತಿದ್ದೇವೆ. ಇದಕ್ಕೆ ಯಾವುದೂ ಅಡ್ಡಿಯಾಗಿಲ್ಲ. ಹಿಂದಿ ನಂತೆಯೇ ಇಂದು ಸಹ ಪರಸ್ಪರ ಸಹ ಕಾರದಿಂದ ಬದುಕುತ್ತಿದ್ದೇವೆ’ ಎನ್ನುತ್ತಾರೆ ನೋಮುದಾರದ ಅಮೀರಣ್ಣ.

ತಾಲ್ಲೂಕಿನ ಉತ್ತರ ಭಾಗದ ಗುಡ್ಡ ಗಾಡಿನ ಗ್ರಾಮಗಳಲ್ಲಿ ವಾಸಿಸುವ ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಆತ್ಮೀಯತೆ ತುಸು ಹೆಚ್ಚೆಂದೇ ಹೇಳಬಹುದು. ಧರ್ಮಗಳು ಬೇರೆಯಾದರೂ, ಎರಡೂ ಸಮುದಾಯದ ಜನರು ಒಂದೇ ಸಮುದಾಯಕ್ಕೆ ಸೇರಿದವರಂತೆ ವರಸೆಯಿಟ್ಟು ಅಕ್ಕ, ಅಣ್ಣ, ಅಜ್ಜಿ, ತಾತ, ಮಾವ, ಭಾವ, ಅತ್ತೆ ಇತ್ಯಾದಿ ಸಂಬಂಧ ಸೂಚಕ ಪದಗಳಿಂದ ಕರೆಯುವುದು ರೂಢಿ. ಇಲ್ಲಿ ಉರ್ದು ಮನೆಗೆ ಮಾತ್ರ ಸೀಮಿತ. ಹೊರಗೆ ಬಹುಸಂಖ್ಯಾತ ಹಿಂದೂಗಳು ಮಾತನಾಡುವ ಭಾಷೆಗೆ ಮನ್ನಣೆ ನೀಡಲಾಗುತ್ತದೆ.

‘ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದ ಹಬ್ಬದ ದಿನಗಳಲ್ಲಿ ಪರಸ್ಪರ ಸಹಭಾಗಿತ್ವ ಹಿಂದಿನಿಂದಲೂ ಇದೆ. ನಂಬಿಕೆಗಳು ಏನೇ ಇದ್ದರೂ, ಆಚರಣೆಯಲ್ಲಿನ ಸಹಕಾರ ವಿವಿಧ ಧರ್ಮೀಯರನ್ನು ಹತ್ತಿರ ತಂದಿದೆ. ಸಾಮರಸ್ಯ ಜೀವನದಿಯಂತೆ ಹರಿಯು ತ್ತಿದೆ’ ಎನ್ನುತ್ತಾರೆ ಅಕ್ಬರ್
ಷರೀಫ್. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.