ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌

ವಾಣಿಜ್ಯ ಚಟುವಟಿಕೆಗೆ ನಿರ್ಬಂಧ: ಅಗತ್ಯ ವಸ್ತುಗಳ ಖರೀದಿಗೂ ಕಡಿವಾಣ
Last Updated 20 ಮೇ 2021, 14:05 IST
ಅಕ್ಷರ ಗಾತ್ರ

ಕೋಲಾರ: ಕೋವಿಡ್‌ ನಿಯಂತ್ರಣಕ್ಕಾಗಿ ಜಿಲ್ಲೆಯಾದ್ಯಂತ ಶುಕ್ರವಾರದಿಂದ (ಮೇ 21) ಮೂರೂವರೆ ದಿನ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಜಿಲ್ಲೆಯಲ್ಲಿ ಶುಕ್ರವಾರ ಸಂಜೆ 6 ಗಂಟೆಯಿಂದ ಮೇ 25ರ ಬೆಳಿಗ್ಗೆ 6ರವರೆಗೆ ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಪೆಟ್ರೋಲ್‌ ಬಂಕ್‌, ಹಾಲಿನ ಮಳಿಗೆಗಳು ಮತ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಈವರೆಗೆ ಲಾಕ್‌ಡೌನ್‌ ನಡುವೆಯೂ ಪ್ರತಿನಿತ್ಯ ಬೆಳಿಗ್ಗೆ 6 ಗಂಟೆಯಿಂದ 10ರವರೆಗೆ ದಿನಸಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ, ಜನರು ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಅನಗತ್ಯವಾಗಿ ಮನೆಯಿಂದ ಹೊರ ಬಂದು ಓಡಾಡುತ್ತಿದ್ದ ಬಗ್ಗೆ ದೂರು ಕೇಳಿಬಂದಿತ್ತು. ಜತೆಗೆ ಬೆಳಿಗ್ಗೆ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಿ ಸೋಂಕು ಹರಡುವಿಕೆ ಏರಿಕೆಯಾಗಿತ್ತು.

ಹೀಗಾಗಿ ಕಠಿಣ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತವು ಸಂಪೂರ್ಣ ಲಾಕ್‌ಡೌನ್‌ನ ಅಸ್ತ್ರ ಪ್ರಯೋಗಿಸಿದೆ. ಅಗತ್ಯ ವಸ್ತುಗಳ ಖರೀದಿಗೂ ಕಡಿವಾಣ ಹಾಕಲಾಗಿದೆ. ಹೀಗಾಗಿ ತರಕಾರಿ, ಆಹಾರ ಪದಾರ್ಥಗಳು ಸೇರಿದಂತೆ ಜನರಿಗೆ ಮೂರು ದಿನಕ್ಕೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಶುಕ್ರವಾರ ಬೆಳಿಗ್ಗೆ 10 ಗಂಟೆವರೆಗೆ ಅವಕಾಶ ನೀಡಲಾಗಿದೆ.

ಆಹಾರಕ್ಕಾಗಿ ಹೋಟೆಲ್‌ಗಳ ಮೇಲೆ ಅವಲಂಬಿತರಾಗಿರುವ ಜನರ ಹಿತದೃಷ್ಟಿಯಿಂದ ಹೋಟೆಲ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಜತೆಗೆ ಇಂದಿರಾ ಕ್ಯಾಂಟೀನ್‌ಗಳ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಹೋಟೆಲ್‌ ಮತ್ತು ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ಪದಾರ್ಥಗಳ ಪಾರ್ಸೆಲ್‌ ಮಾತ್ರ ಲಭ್ಯವಿರುತ್ತದೆ. ತಳ್ಳುವ ಗಾಡಿಗಳಲ್ಲಿ ಹೂವು, ಹಣ್ಣು, ತರಕಾರಿ ಮಾರಾಟಕ್ಕೆ ಸಂಜೆ 6ರವರೆಗೆ ಅವಕಾಶವಿದೆ.

ಬ್ಯಾಂಕ್‌ಗಳ ಸಂಪೂರ್ಣ ಬಂದ್‌ ಆಗಲಿದ್ದು, ಎಟಿಎಂ ಘಟಕಗಳು ತೆರೆದಿರುತ್ತವೆ. ಸರ್ಕಾರಿ ಕಚೇರಿಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ನಿಯಮದಂತೆ ಕಾರ್ಯ ಚಟುವಟಿಕೆ ನಡೆಯಲಿವೆ. ಕೃಷಿ ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ. ಕೃಷಿ, ವೈದ್ಯಕೀಯ ಸಂಬಂಧಿತ ಕೈಗಾರಿಕೆಗಳು ಮತ್ತು ಕಂಪನಿಗಳಿಗೆ ಮಾತ್ರ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.

ಮದುವೆ ಷರತ್ತು: ಮದುವೆ ಸಮಾರಂಭಗಳಿಗೂ ಸಾಕಷ್ಟು ಕಠಿಣ ಷರತ್ತು ವಿಧಿಸಲಾಗಿದೆ. ಮದುವೆಗೆ ತಹಶೀಲ್ದಾರ್‌ಗಳ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಕಲ್ಯಾಣ ಮಂಟಪ ಅಥವಾ ಸಭಾಂಗಣಗಳಲ್ಲಿ ಮದುವೆ ಮಾಡುವಂತಿಲ್ಲ. ಬದಲಿಗೆ ಮನೆಗಳಲ್ಲೇ ಮದುವೆ ಕಾರ್ಯ ನಡೆಸಬೇಕು. ಅಲ್ಲದೇ, ಸಮಾರಂಭದಲ್ಲಿ 20ಕ್ಕೂ ಹೆಚ್ಚು ಜನ ಸೇರಿಸುವಂತಿಲ್ಲ ಎಂದು ಜಿಲ್ಲಾಡಳಿತ ಸೂಚಿಸಿದೆ.

ವಾಹನ ಜಪ್ತಿ: ಲಾಕ್‌ಡೌನ್‌ ಅವಧಿಯಲ್ಲಿ ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬಂದು ಓಡಾಡುವಂತಿಲ್ಲ. ಜತೆಗೆ ವಾಹನಗಳಲ್ಲೂ ಸಂಚರಿಸುವಂತಿಲ್ಲ. ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ರಸ್ತೆಗೆ ಬರುವ ವಾಹನ ಸವಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಅಲ್ಲದೇ, ವಾಹನ ಜಪ್ತಿ ಮಾಡಿ ದಂಡ ವಿಧಿಸುತ್ತಾರೆ. ಕೃಷಿ ಉತ್ಪನ್ನಗಳು ಮತ್ತು ಔಷಧ ಮಾತ್ರೆ ಸಾಗಣೆ, ವೈದ್ಯಕೀಯ ಸಿಬ್ಬಂದಿ, ಕೋವಿಡ್‌ ಕರ್ತವ್ಯಕ್ಕೆ ನಿಯೋಜನೆಗೊಂಡ ಸರ್ಕಾರಿ ನೌಕರರು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT