ಗುರುವಾರ , ಅಕ್ಟೋಬರ್ 21, 2021
24 °C
ಸವಾಲು ಎದುರಿಸಲು ಮಕ್ಕಳನ್ನು ಸಜ್ಜುಗೊಳಿಸಿ: ಡಿಡಿಪಿಐ ನಾಗೇಶ್‌ ಕಿವಿಮಾತು

ಗಣಕಯಂತ್ರ ಕಲಿಕೆ ಜೀವನಾಧಾರ ಶಿಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸ್ಪರ್ಧಾತ್ಮಕ ಪ್ರಪಂಚದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸರ್ಕಾರಿ ಶಾಲಾ ಮಕ್ಕಳಿಗೂ ಗಣಕ ಯಂತ್ರ ಶಿಕ್ಷಣ ಇಂದಿನ ಆದ್ಯತೆಯಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ಅಭಿಪ್ರಾಯಪಟ್ಟರು.

ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪ ಯೋಜನೆಯಡಿ (ಟಿಎಸ್‌ಪಿ), ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಕಲ್ಯಾಣನಿಧಿ ಯೋಜನೆಯಡಿ ಸರ್ಕಾರಿ ಪ್ರೌಢ ಶಾಲೆಗಳಿಗೆ ನೀಡಿರುವ ಗಣಕಯಂತ್ರಗಳ ಬಳಕೆ, ಪ್ರಯೋಗಾಲಯದ ಉಪಯೋಗ ಕುರಿತು ಇಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ಖಾಸಗಿ ಶಾಲೆಗಳ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರಿ ಶಾಲೆಗಳು ಸಜ್ಜಾಗಬೇಕು. ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸೇರಿದಂತೆ ಎಲ್ಲವೂ ಆನ್‌ಲೈನ್‌ಮಯವಾಗಿದೆ. ಸರ್ಕಾರಿ ಪ್ರೌಢ ಶಾಲೆಗಳಿಗೆ ಈಗಾಗಲೇ ತಲಾ 10 ಸುಧಾರಿತ ಗಣಕಯಂತ್ರ ಒದಗಿಸಲಾಗಿದೆ. ಕಂಪ್ಯೂಟರ್‌ ಪ್ರಯೋಗಾಲಯಕ್ಕಾಗಿ ಪ್ರತ್ಯೇಕ ಕೊಠಡಿ ಸಜ್ಜುಗೊಳಿಸಲಾಗಿದೆ. ಶಿಕ್ಷಕರಿಗೆ ತರಬೇತಿ ಮೂಲಕ ಕಂಪ್ಯೂಟರ್ ಜ್ಞಾನ ನೀಡಲಾಗಿದೆ’ ಎಂದು ವಿವರಿಸಿದರು.

‘ಮಕ್ಕಳಿಗಾಗಿ ನೀಡಿರುವ ಕಂಪ್ಯೂಟರ್‌ಗಳು ಸದ್ಬಳಕೆಯಾಗಬೇಕು. ಅವುಗಳನ್ನು ಸುಸ್ಥಿತಿಯಲ್ಲಿಟ್ಟು ಮಕ್ಕಳಿಗೆ ಗಣಕ ಶಿಕ್ಷಣ ನೀಡಿ. ಸರ್ಕಾರಿ ಶಾಲೆಗಳು ಸಮುದಾಯದ ಸಹಭಾಗಿತ್ವ ಪಡೆದು ಮತ್ತಷ್ಟು ಅಭಿವೃದ್ಧಿಯತ್ತ ಸಾಗಬೇಕು. ಗಣಕಯಂತ್ರ ಕಲಿಕೆ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಜೀವನಾಧಾರ ಶಿಕ್ಷಣವಾಗಿದೆ. ಸರ್ಕಾರ ಸಹ ಕಾಗದರಹಿತ ಆಡಳಿತಕ್ಕೆ ಒತ್ತು ನೀಡುತ್ತಿದ್ದು, ಎಲ್ಲಾ ಇಲಾಖೆ ಮತ್ತು ಕಚೇರಿಗಳ ಕಾರ್ಯ ಆನ್‌ಲೈನ್‌ಗೆ ಬದಲಾಗುತ್ತಿದೆ’ ಎಂದರು.

ಶೈಕ್ಷಣಿಕ ಚಾನೆಲ್: ‘ರಾಜ್ಯ ಶಿಕ್ಷಣ, ಸಂಶೋಧನೆ ಹಾಗೂ ತರಬೇತಿ ಸಂಸ್ಥೆಯಿಂದ ಈಗಾಗಲೇ ಶೈಕ್ಷಣಿಕ ಚಾನೆಲ್ ಆರಂಭಿಸುವ ಚಿಂತನೆ ನಡೆದಿದ್ದು, ಅದಕ್ಕಾಗಿ ಸ್ಟುಡಿಯೋ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕೋವಿಡ್ ಸಂದರ್ಭದಲ್ಲಿ ಆದ ಕಲಿಕಾ ಹಿನ್ನಡೆಯನ್ನು ಸರಿದೂಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ’ ಎಂದು ಸಲಹೆ ನೀಡಿದರು.

‘ಜಿಲ್ಲಾ ಶಿಕ್ಷಣ ಸಂಶೋಧನಾ ಸಂಸ್ಥೆಯನ್ನು ಶಿಕ್ಷಕರ ಕಲಿಕಾ ದೇವಾಲಯದಂತೆ ಅಭಿವೃದ್ಧಿಪಡಿಸುತ್ತೇವೆ. ಶಿಕ್ಷಕರಿಗೆ ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳಿಗೆ ತಕ್ಕಂತೆ ನಿರಂತರ ಕಲಿಕೆ ಇಂದು ಅಗತ್ಯವಿದೆ. ನವೋದಯ ಶಾಲೆಗಾಗಿ ಡಯಟ್ ಕಟ್ಟಡದ ಸ್ವಲ್ಪ ಭಾಗ ನೀಡಿದ್ದು, ಅವರು ಸ್ವಂತ ಕಟ್ಟಡ ನಿರ್ಮಿಸಿ ಅಲ್ಲಿಗೆ ಸ್ಥಳಾಂತರವಾಗುತ್ತಾರೆ. ಶಿಕ್ಷಕರ ತರಬೇತಿಗೆ ಪೂರಕ ವಾತಾವರಣ, ಸುಂದರ ಉದ್ಯಾನ ನಿರ್ಮಿಸುವ ಉದ್ದೇಶವಿದೆ’ ಎಂದು ಮಾಹಿತಿ ನೀಡಿದರು.

ಸುರಕ್ಷತೆ ಮುಖ್ಯ: ‘ಸರ್ಕಾರ ನೀಡಿರುವ ಕಂಪ್ಯೂಟರ್‌ಗಳ ಸುರಕ್ಷತೆ ಮುಖ್ಯ. ಮಕ್ಕಳಿಗೆ ಕಂಪ್ಯೂಟರ್ ಬಳಕೆ ಮತ್ತು ಕಲಿಕೆಗೆ ಅವಕಾಶ ನೀಡಿರುವ ಕುರಿತು ನಿರಂತರವಾಗಿ ದಾಖಲೆ ನಿರ್ವಹಿಸಿರಬೇಕು. ಮಕ್ಕಳಿಗೆ ಮೊದಲು ಗಣಕಯಂತ್ರ ಬಳಕೆಯ ಕುರಿತು ಅರಿವು ನೀಡಬೇಕು’ ಎಂದು ಡಯಟ್ ಹಿರಿಯ ಉಪನ್ಯಾಸಕಿ ಉಮಾ ಸೂಚಿಸಿದರು.

ಜಿಲ್ಲೆಯ ವಿವಿಧ ಸರ್ಕಾರಿ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.