ಗುರುವಾರ , ಜನವರಿ 23, 2020
23 °C
ನಿರ್ವಹಣೆ ನಿರ್ಲಕ್ಷಿಸಿದ ನಗರಸಭೆ: ಒತ್ತುವರಿಗೆ ನಲುಗಿದ ತಾಣಗಳು

ಕೆಜಿಎಫ್‌: ಸೊರಗಿದ ಉದ್ಯಾನ; ಎಲ್ಲೆಲ್ಲೂ ಅದ್ವಾನ

ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ಹಸಿರಿನಿಂದ ನಳ ನಳಿಸುತ್ತಿದ್ದ ನಗರದ ಉದ್ಯಾನಗಳು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿವೆ. ನೀರಿನ ಅಭಾವದಿಂದಾಗಿ ಉದ್ಯಾನಗಳಲ್ಲಿ ಗಿಡ ಮರಗಳು ಒಣಗಿದ್ದು, ಹಸಿರು ಮಾಯವಾಗಿದೆ.

58.12 ಚದರ ಕಿ.ಮೀ ವಿಸ್ತಾರವಾಗಿರುವ ನಗರದಲ್ಲಿ ಸುಮಾರು 30 ಉದ್ಯಾನಗಳಿವೆ. ನಗರಸಭೆಯು ಇವುಗಳ ನಿರ್ವಹಣೆಯ ಹೊಣೆ ಹೊತ್ತಿದೆ. ನಗರವಾಸಿಗಳು ನಸುಕಿನಲ್ಲಿ ಮತ್ತು ಸಂಜೆ ಉದ್ಯಾನಗಳಲ್ಲಿ ವಾಯುವಿಹಾರ ಮಾಡುತ್ತಾರೆ.

ವೈಯಕ್ತಿಕ ಕೆಲಸದ ನಿಮಿತ್ತ ನಗರಕ್ಕೆ ಬರುವ ಗ್ರಾಮೀಣ ಭಾಗದ ಜನರು ಬಸ್‌ ನಿಲ್ದಾಣ ಅಥವಾ ಸರ್ಕಾರಿ ಕಚೇರಿಗಳ ಅಸುಪಾಸಿನ ಉದ್ಯಾನಗಳಲ್ಲಿ ವಿಶ್ರಾಂತಿ ಪಡೆಯುವುದು ಸಾಮಾನ್ಯ. ಆದರೆ, ನಗರದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿರುವ ಕಾರಣ ಉದ್ಯಾನಗಳಿಗೆ ನೀರು ಒದಗಿಸುವುದು ನಗರಸಭೆಗೆ ತಲೆ ನೋವಾಗಿದೆ.

ಸುಭಾಷ್‌ಚಂದ್ರ ಬೋಸ್ ಉದ್ಯಾನ, ನೆಹರೂ ಪಾರ್ಕ್, ಅಂಬೇಡ್ಕರ್ ಉದ್ಯಾನ, ಆಂಗ್ಲೊ ಇಂಡಿಯನ್ ಉದ್ಯಾನ, ವಿವೇಕನಗರ ಉದ್ಯಾನ, ಬೋರಿಲಾಲ್ ಪೇಟೆ ಉದ್ಯಾನ, ಗೌತಮ್‌ ನಗರ ಉದ್ಯಾನ, ಸ್ವರ್ಣ ನಗರ ಉದ್ಯಾನದ ನವೀಕರಣಕ್ಕೆ ನಗರಸಭೆಯ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ಉದ್ಯಾನಗಳ ಸ್ಥಿತಿ ಸುಧಾರಿಸಿಲ್ಲ.

ಉದ್ಯಾನಗಳ ತುಂಬಾ ನಿರುಪಯುಕ್ತ ಗಿಡಗಳು ಬೆಳೆದಿವೆ. ಬಿಡಾಡಿ ದನಗಳ ಹಾವಳಿ ಹೆಚ್ಚಿದೆ. ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಆಹಾರ ಪದಾರ್ಥ ಸೇವಿಸಿ ಪ್ಲಾಸ್ಟಿಕ್‌ ತಟ್ಟೆ, ಕವರ್‌ ಹಾಗೂ ನೀರಿನ ಬಾಟಲಿಗಳನ್ನು ಅಲ್ಲಿಯೇ ಎಸೆದು ಹೋಗುತ್ತಿದ್ದಾರೆ. ಗಿಡ ಮರಗಳು ಒಣಗಿರುವುದರಿಂದ ಸ್ವರೂಪವೇ ಬದಲಾಗಿದೆ. ಮರ ಗಿಡದ ನೆರಳಿಲ್ಲದೆ ಬಯಲು ಪ್ರದೇಶದಂತಾಗಿದ್ದು, ಉದ್ಯಾನಗಳಿಗೆ ಬರುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ.

ಕಸ ವಿಲೇವಾರಿ

ಉದ್ಯಾನಗಳ ಅಕ್ಕಪಕ್ಕದ ಬಡಾವಣೆಗಳ ನಿವಾಸಿಗಳು ಹಾಗೂ ಅಂಗಡಿಗಳ ಕೆಲಸಗಾರರು ಉದ್ಯಾನದೊಳಗೆ ಕಸ ಸುರಿಯುತ್ತಿದ್ದಾರೆ. ಉದ್ಯಾನಗಳು ತ್ಯಾಜ್ಯ ವಿಲೇವಾರಿ ಸ್ಥಳವಾಗಿ ಮಾರ್ಪಾಡಾಗಿವೆ. ಉದ್ಯಾನಗಳಲ್ಲಿ ಕಸ ರಾಶಿಯಾಗಿ ಬಿದ್ದಿದ್ದು, ಪೌರ ಕಾರ್ಮಿಕರು ಕಸ ವಿಲೇವಾರಿ ಮಾಡಿಲ್ಲ. 

ಕಸದ ರಾಶಿಯಿಂದ ಹಂದಿ, ಬೀದಿ ನಾಯಿ, ನೊಣ ಹಾಗೂ ಸೊಳ್ಳೆ ಕಾಟ ಹೆಚ್ಚಿದೆ. ನಾಯಿಗಳು ಉದ್ಯಾನಕ್ಕೆ ಬರುವ ಮಕ್ಕಳನ್ನು ಕಚ್ಚಿ ಗಾಯಗೊಳಿಸುವ ಪ್ರಕರಣಗಳು ಆಗಾಗ್ಗೆ ವರದಿ ಆಗುತ್ತಿವೆ. ಇದರಿಂದ ಪೋಷಕರು ಮಕ್ಕಳನ್ನು ಉದ್ಯಾನಗಳಿಗೆ ಕಳುಹಿಸಲು ಭಯಪಡುವ ಸ್ಥಿತಿ ಇದೆ.

ಕಾನೂನುಬಾಹಿರ ಚಟುವಟಿಕೆ 

ನಗರಸಭೆಯು ಯಾವುದೇ ಉದ್ಯಾನಕ್ಕೆ ಕಾವಲುಗಾರರನ್ನು ನೇಮಿಸಿಲ್ಲ. ಹೀಗಾಗಿ ಉದ್ಯಾನಗಳಲ್ಲಿ ಭದ್ರತೆ ಇಲ್ಲವಾಗಿದೆ. ಕಿಡಿಗೇಡಿಗಳು ಅಲ್ಲಿಯೇ ಮದ್ಯಪಾನ, ಧೂಮಪಾನ ಮಾಡುವ ಮತ್ತು ಜೂಜಾಡುವ ಪ್ರವೃತ್ತಿ ಹೆಚ್ಚಿದೆ. ಇದರಿಂದ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಉದ್ಯಾನಗಳಿಗೆ ಹೋಗಲು ಹಿಂಜರಿಯುವ ಪರಿಸ್ಥಿತಿಯಿದೆ. 

ಕಳ್ಳರ ಕೈಚಳಕ 

ಸಾಕಷ್ಟು ಉದ್ಯಾನಗಳಲ್ಲಿ ವಿದ್ಯುತ್‌ ದೀಪಗಳು ಕಣ್ಮರೆ ಆಗಿವೆ. ಕೆಲ ಉದ್ಯಾನಗಳಲ್ಲಿ ದೀಪಗಳು ಕೆಟ್ಟು ವರ್ಷಗಳೇ ಆಗಿವೆ. ನಗರಸಭೆಯು ಹೊಸ ವಿದ್ಯುತ್‌ ದೀಪ ಅಳವಡಿಸಲು ಮತ್ತು ಕೆಟ್ಟಿರುವ ದೀಪಗಳ ದುರಸ್ತಿಗೆ ಮೀನಮೇಷ ಎಣಿಸುತ್ತಿದೆ.

ವಿದ್ಯುತ್‌ ದೀಪಗಳಿಲ್ಲದ ಕಾರಣ ಕಳ್ಳರು ಉದ್ಯಾನಗಳಲ್ಲಿ ಕೈಚಳಕ ತೋರುತ್ತಿದ್ದಾರೆ. ಉದ್ಯಾನಕ್ಕೆ ಬರುವ ಮಹಿಳೆಯರು ಹಾಗೂ ವಯೋವೃದ್ಧರ ಆಭರಣ ದೋಚುವ ಘಟನೆಗಳು ಆಗಾಗ್ಗೆ ನಡೆಯುತ್ತಿವೆ.

ಆಟಿಕೆಗಳು ನಿರುಪಯುಕ್ತ

ಉದ್ಯಾನಗಳಲ್ಲಿನ ನೀರಿನ ಕಾರಂಜಿ, ಮಕ್ಕಳ ಆಟಿಕೆಗಳು ಹಾಳಾಗಿವೆ. ಆಟಿಕೆಗಳಿಗೆ ನಿಯಮಿತವಾಗಿ ಬಣ್ಣ ಬಳಿಯದ ಕಾರಣ ಅವುಗಳಿಗೆ ತುಕ್ಕು ಹಿಡಿದಿದೆ. ಬಹುತೇಕ ಆಟಿಕೆಗಳು ಶಿಥಿಲಗೊಂಡಿದ್ದು, ನಿರುಪಯುಕ್ತವಾಗಿವೆ. ಹಲವು ಉದ್ಯಾನಗಳ ಸುತ್ತಲಿನ ತಂತಿ ಬೇಲಿ ಹಾಳಾಗಿ ವರ್ಷವೇ ಕಳೆದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ.

ಕೆಲ ಉದ್ಯಾನಗಳ ಜಾಗ ಒತ್ತುವರಿಯಾಗಿವೆ. ಅಧಿಕಾರಿಗಳು ಉದ್ಯಾನಗಳ ಒತ್ತುವರಿ ತೆರವುಗೊಳಿಸದೆ ಮೌನಕ್ಕೆ ಶರಣಾಗಿದ್ದಾರೆ ಎನ್ನುವ ಆರೋಪ ವ್ಯಾಪಕವಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು