ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಗ್ರಾಹಕರು– ಬ್ಯಾಂಕ್‌ ನಡುವೆ ತಿಕ್ಕಾಟ

ಸಾಲ ಮರುಪಾವತಿ: ಆರ್‌ಬಿಐ– ರಾಜ್ಯ ಸರ್ಕಾರದ ಆದೇಶ ಸೃಷ್ಟಿಸಿದ ಗೊಂದಲ
Last Updated 13 ಜೂನ್ 2020, 16:40 IST
ಅಕ್ಷರ ಗಾತ್ರ

ಕೋಲಾರ: ಸಾಲದ ಕಂತು ಪಾವತಿ ಸಂಬಂಧ ರೀಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಗಳು ಗೊಂದಲ ಸೃಷ್ಟಿಸಿದ್ದು, ಗ್ರಾಹಕರು ಮತ್ತು ಬ್ಯಾಂಕ್‌ಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿವೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್‌ಬಿಐ ಆಗಸ್ಟ್‌ ತಿಂಗಳವರೆಗೆ ವಿವಿಧ ಸಾಲದ ಕಂತು ಪಾವತಿಗೆ ವಿನಾಯಿತಿ ನೀಡಿದೆ. ಆದರೆ, ಸಹಕಾರಿ ಬ್ಯಾಂಕ್‌ಗಳ ಸಾಲ ಪಾವತಿ ಸಂಬಂಧ ರಾಜ್ಯ ಸರ್ಕಾರ ಯಾವುದೇ ಆದೇಶ ಹೊರಡಿಸದ ಹಿನ್ನೆಲೆಯಲ್ಲಿ ಗ್ರಾಹಕರಲ್ಲಿ ಗೊಂದಲ ಮೂಡಿದೆ.

ಲಾಕ್‌ಡೌನ್‌ ಜಾರಿಯಾದ ಆರ್‌ಬಿಐ ಮೊದಲ ಬಾರಿಗೆ ಮಾರ್ಚ್ ತಿಂಗಳಲ್ಲಿ ಸಾಲದ ಕಂತು ಪಾವತಿಗೆ 3 ತಿಂಗಳ ವಿನಾಯಿತಿ ನೀಡಿತು. ಹೀಗಾಗಿ ರಾಜ್ಯ ಸರ್ಕಾರವೂ ಜೂನ್‌ವರೆಗೆ ಸಾಲದ ಕಂತಿ ಪಾವತಿ ಅವಧಿ ವಿಸ್ತರಿಸಿ ಆದೇಶ ಹೊರಡಿಸಿತು.

ಈ ಆದೇಶನ್ವಯ ಸಹಕಾರಿ ಬ್ಯಾಂಕ್‌ಗಳಲ್ಲಿನ (2020ರ ಮಾರ್ಚ್‌ನಿಂದ ಜೂನ್‌ವರೆಗಿನ) ₹ 3 ಲಕ್ಷದವರೆಗಿನ ಶೂನ್ಯ ಬಡ್ಡಿ ದರದ ಬೆಳೆ ಸಾಲ, ಶೇ 3ರ ಬಡ್ಡಿ ದರದ ₹ 10 ಲಕ್ಷಗಳವರೆಗಿನ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ, ಕೃಷಿ ಮತ್ತು ಸಂಬಂಧಿತ ಸಾಲ, ಸ್ವಸಹಾಯ ಗುಂಪುಗಳ ಸಾಲ, ಕಾಯಕ ಯೋಜನೆ ಸಾಲದ ಕಂತು ಪಾವತಿಗೆ ಜೂನ್‌ ಅಂತ್ಯದವರೆಗೆ ಕಾಲಾವಕಾಶ ನೀಡಲಾಯಿತು. ಸಾಲ ಮರುಪಾವತಿ ದಿನಾಂಕದವರೆಗಿನ ಸಹಕಾರಿ ಬ್ಯಾಂಕ್‌ಗಳ ರಾಜ್ಯ ಸರ್ಕಾರದ ಪಾಲಿನ ಬಡ್ಡಿ ಸಹಾಯಧನವನ್ನು ಸರ್ಕಾರವೇ ಭರಿಸುವುದಾಗಿ ಆದೇಶದಲ್ಲಿ ಹೇಳಿತ್ತು.

ಜನವರಿ 31ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಬಡ್ಡಿ ಮನ್ನಾ ಯೋಜನೆಯಲ್ಲಿ ಸುಸ್ತಿಯಾದ ಸಾಲದ ಕಂತುಗಳನ್ನು ರೈತರು ಮರು ಪಾವತಿಸಲು ಮಾರ್ಚ್ 31ರವರೆಗೆ ನೀಡಲಾಗಿದ್ದ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಯಿತು. ಮರು ಪಾವತಿ ದಿನಾಂಕದವರೆಗಿನ ಸರ್ಕಾರದ ಪಾಲಿನ ಬಡ್ಡಿ ಮನ್ನಾ ಮೊತ್ತವನ್ನು ಸಂಬಂಧಿಸಿದ ಸಹಕಾರಿ ಸಂಸ್ಥೆಗಳಿಗೆ ಸರ್ಕಾರದಿಂದ ಭರಿಸಲು ಆದೇಶಿಸಲಾಗಿತ್ತು.

ಆದರೆ, 2ನೇ ಹಂತದಲ್ಲಿ ಆರ್‌ಬಿಐ ನೀಡಿದ ಆಗಸ್ಟ್ ತಿಂಗಳವರೆಗಿನ ಸಾಲದ ಕಂತು ಪಾವತಿ ವಿನಾಯಿತಿ ಸಂಬಂಧ ರಾಜ್ಯ ಸರ್ಕಾರ ಈವರೆಗೆ ಯಾವುದೇ ಆದೇಶ ಹೊರಡಿಸಿಲ್ಲ. ಹೀಗಾಗಿ ಸಾಲ ವಸೂಲಾತಿ ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸಹಕಾರಿ ಸಂಸ್ಥೆಗಳಿಗೂ ಗೊಂದಲ ಉಂಟಾಗಿದೆ. ಮತ್ತೊಂದೆಡೆ ಗ್ರಾಹಕರು ಸಾಲದ ಕಂತು ಕಟ್ಟಬೇಕೇ ಅಥವಾ ಕಟ್ಟಬಾರದೆ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

ಬಡ್ಡಿ ಸಬ್ಸಿಡಿ: ಗ್ರಾಹಕರು ನಿಗಧಿತ ಅವಧಿಗೊಳಗೆ ಸಾಲದ ಕಂತು ಕಟ್ಟಿದರೆ ಮಾತ್ರ ಸಹಕಾರಿ ಬ್ಯಾಂಕ್‌ಗಳಿಗೆ ಸರ್ಕಾರದ ಪಾಲಿನ ಬಡ್ಡಿ ಸಬ್ಸಿಡಿ ಬರುತ್ತದೆ. ಇಲ್ಲವಾದರೆ ಬಡ್ಡಿ ಸಬ್ಸಿಡಿ ಕಡಿತಗೊಳಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾಲ ಪಾವತಿಗೆ ವಿನಾಯಿತಿ ಸಂಬಂಧ ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿ ಅವಧಿ ವಿಸ್ತರಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತಾರೆ ಹಲವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT