ಗುರುವಾರ , ಜನವರಿ 27, 2022
20 °C
ಮೇಕೆ ನಾಟಕ

ರಾಜಕೀಯ ಲಾಭಕ್ಕೆ ಕಾಂಗ್ರೆಸ್‌ ಪಾದಯಾತ್ರೆ: ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಕಾಂಗ್ರೆಸ್‌ ಮುಖಂಡರಿಗೆ ಮಾಡಲು ಕೆಲಸವಿಲ್ಲ. ಮುಂದೆ ಅವರ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಚೆನ್ನಾಗಿ ಗೊತ್ತಿದೆ. ಅಸ್ತಿತ್ವ ಉಳಿಸಿಕೊಳ್ಳಲು ಏನೋ ಒಂದು ಮಾಡಬೇಕೆಂದು ಮೇಕೆದಾಟು ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆ. ಕಾಂಗ್ರೆಸ್‌ನದು ಮೇಕೆದಾಟು ಅಲ್ಲ ಮೇಕೆ ನಾಟಕ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ವ್ಯಂಗ್ಯವಾಡಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್‌ ನಾಯಕರು ಮೇಕೆದಾಟು ವಿಚಾರದಲ್ಲಿ ರಾಜಕೀಯ ಲಾಭಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆಯೇ ಹೊರತು ರಾಜ್ಯಕ್ಕೆ ಒಳ್ಳೆಯದಾಗಲಿ ಎಂಬ ಕಾರಣಕ್ಕಲ್ಲ. ಮೇಕೆದಾಟು ವಿಚಾರ ಮುಂದಿಟ್ಟುಕೊಂಡು ಏನೇನೊ ಕನಸು ಕಾಣುತ್ತಾ ಸುಮ್ಮನೆ ಪ್ರಚಾರಕ್ಕೆ ಪಾದಯಾತ್ರೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಅವರ ಕನಸು ನನಸಾಗಲ್ಲ’ ಎಂದು ಕುಟುಕಿದರು.

‘ರಾಜಕೀಯವಾಗಿ ನಿರುದ್ಯೋಗಿಗಳಾಗಿ ಸುಮ್ಮನೆ ಕುಳಿತಿದ್ದ ಕಾಂಗ್ರೆಸ್‌ ಮುಖಂಡರಿಗೆ ಒಂದು ಕೆಲಸ ಬೇಕಾಗಿತ್ತು. ಅದಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಮೇಕೆದಾಟು ಇವತ್ತಿನ ವಿಷಯವಲ್ಲ. ಇದು ತುಂಬಾ ಹಳೆಯ ವಿಷಯವಾಗಿದ್ದು, 1956ರಿಂದಲೂ ಹೋರಾಟ ನಡೆಯುತ್ತಲೇ ಇದೆ. ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಏಕೆ ಮೇಕೆದಾಟು ಯೋಜನೆ ಜಾರಿ ಮಾಡಲಿಲ್ಲ?’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರು ಜನರ ಪ್ರಾಣ ರಕ್ಷಣೆ ಮಾಡುವುದನ್ನು ಬಿಟ್ಟು ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಅವರ ಪಾದಯಾತ್ರೆಯಿಂದ ಕೋವಿಡ್‌ ಪ್ರಕರಣ ಮತ್ತಷ್ಟು ಹೆಚ್ಚಾಗಲಿವೆ ಎಂಬ ಪರಿಜ್ಞಾನವಿಲ್ಲ. ಪ್ರಚಾರಕ್ಕೆ ಪಾದಯಾತ್ರೆ ಹೊರಟಿದ್ದು, ಇದರಿಂದ ಒಳ್ಳೆಯ ಹೆಸರು ಬರುತ್ತದೆ ಎಂದು ಭಾವಿಸಿದ್ದಾರೆ. ಆದರೆ, ಅದರಿಂದ ಪ್ರಯೋಜನವಾಗುವುದಿಲ್ಲ. ಅವರ ನಾಟಕ ಜನರಿಗೆ ಗೊತ್ತಿದೆ’ ಎಂದು ಲೇವಡಿ ಮಾಡಿದರು.

ಸರ್ಕಾರದ ಜವಾಬ್ದಾರಿ: ‘ಕಾಂಗ್ರೆಸ್‌ನ ಪಾದಯಾತ್ರೆ ತಡೆಯವ ಉದ್ದೇಶಕ್ಕೆ ಲಾಕ್‌ಡೌನ್‌ ಜಾರಿ ಮಾಡುವ ಅಗತ್ಯ ಸರ್ಕಾರಕ್ಕಿಲ್ಲ. ಜನರ ಪ್ರಾಣ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ. ವಾರಾಂತ್ಯದ ಕರ್ಫ್ಯೂಗೆ ಎಲ್ಲರೂ ಸಹಕರಿಸಬೇಕು. ಜಿಲ್ಲೆಯಲ್ಲಿ ಈ ಹಿಂದೆ ಕೋವಿಡ್‌ 2 ಅಲೆಗಳನ್ನು ಸಮರ್ಥವಾಗಿ ನಿಭಾಯಿಸಲಾಗಿದ್ದು, 3ನೇ ಅಲೆಯಲ್ಲೂ ಅಧಿಕಾರಿಗಳು ಅದೇ ರೀತಿ ಕೆಲಸ ಮಾಡಬೇಕು’ ಎಂದರು.

‘ಕೋವಿಡ್‌ 3ನೇ ಅಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಂದ ಜಿಲ್ಲಾಧಿಕಾರಿಗೆ ಸೂಚನೆ ಬಂದಿದೆ. ಕೊರೊನಾ ಸೋಂಕು ಹರಡುವಿಕೆ ಹೆಚ್ಚುತ್ತಿರುವ ಕಾರಣ ವಾರಾಂತ್ಯದ ಕರ್ಫ್ಯೂನಂತಹ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ. ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಲಾಕ್‌ಡೌನ್‌ ಅಗತ್ಯವೇ ಅಥವಾ ಇಲ್ಲವೇ ಎಂಬುದಕ್ಕಿಂತ ಜನರ ಪ್ರಾಣ ರಕ್ಷಣೆ ಮುಖ್ಯ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು