ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಮಗಲ್-ಕುರುಗಲ್ ಪ.ಪಂಗೆ ಅಸ್ತು

ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ: ಸ್ಥಳೀಯರ ಸಂತಸ
Last Updated 28 ನವೆಂಬರ್ 2020, 14:18 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ವೇಮಗಲ್ ಮತ್ತು ಕುರುಗಲ್ ಗ್ರಾಮ ಪಂಚಾಯಿತಿ ಒಗ್ಗೂಡಿಸಿ ಪಟ್ಟಣ ಪಂಚಾಯಿತಿ ರಚನೆಗೆ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ವೇಮಗಲ್, ಕುರುಗಲ್‌, ವೇಮಗಲ್ ಕೈಗಾರಿಕಾ ಪ್ರದೇಶ ಮತ್ತು ಚೌಡದೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕಲ್ವ, ಚಿಕ್ಕವಲ್ಲಬ್ಬಿ, ಮಂಜಲಿ ಹಾಗೂ ಶೆಟ್ಟಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಪುರಹಳ್ಳಿ ಒಗ್ಗೂಡಿಸಿ ಪಟ್ಟಣ ಪಂಚಾಯಿತಿ ರಚನೆಗೆ ಶುಕ್ರವಾರದ (ನ.27) ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು.

ಸರ್ಕಾರವು ಜನರ ಮನವಿಗೆ ಸ್ಪಂದಿಸಿ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ರಚನೆಗೆ ಅನುಮೋದನೆ ನೀಡಿದೆ. ಜನರ ಪರವಾಗಿ ಮುಖ್ಯಮಂತ್ರಿಗಳಿಗೆ ಮತ್ತು ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜಧಾನಿಯ ಹೊರವಲಯದ ಚಿಕ್ಕ ಪಟ್ಟಣಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ರಾಜಧಾನಿಗೆ ತುಂಬಾ ಹತ್ತಿರದಲ್ಲಿರುವ ವೇಮಗಲ್‌, ಜಿಲ್ಲೆಯ ಏಕೈಕ ಪಟ್ಟಣ ಪಂಚಾಯಿತಿಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ವೇಮಗಲ್‌ ಮತ್ತು ಕುರುಗಲ್‌ ಭಾಗದ ಜನರ ಅಭಿಪ್ರಾಯ ಸಂಗ್ರಹಿಸಿ, ಇಲ್ಲಿನ ಅಭಿವೃದ್ಧಿಯ ಜತೆಗೆ ವೇಮಗಲ್ ಕೈಗಾರಿಕಾ ಪ್ರದೇಶವು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗಲಿ ಎಂಬ ದೂರ ದೃಷ್ಟಿಯಿಂದ ಪಟ್ಟಣ ಪಂಚಾಯಿತಿ ರಚನೆಗೆ ಪ್ರಯತ್ನ ಮಾಡಿದ್ದೆ. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸ್ಪಂದನೆ ನೀಡಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

ಸಮಗ್ರ ಅಭಿವೃದ್ಧಿ: ವೇಮಗಲ್‌ ಸುತ್ತಮುತ್ತ ಬೃಹತ್ ಕೈಗಾರಿಕೆಗಳಿರುವ ಹಿನ್ನೆಲೆಯಲ್ಲಿ ಈ ಭಾಗದ ಅಭಿವೃದ್ಧಿಯ ವೇಗ ಹೆಚ್ಚಬೇಕಿದೆ. ಇಲ್ಲಿನ ಜನಸಂಖ್ಯೆ, ಆದಾಯ ಪರಿಗಣಿಸಿ ರಾಜ್ಯ ಸರ್ಕಾರ ಪಟ್ಟಣ ಪಂಚಾಯಿತಿ ರಚನೆಗೆ ಅವಕಾಶ ಕಲ್ಪಿಸಿರುವುದರಿಂದ ವೇಮಗಲ್‌ ಮತ್ತು ಸುತ್ತಮುತ್ತಲ ಪ್ರದೇಶ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಟ್ಟಣ ಪಂಚಾಯಿತಿಯಾಗಲಿರುವ ವೇಮಗಲ್–ಕುರುಗಲ್‌ಗೆ ಮೂಲಸೌಕರ್ಯ ಕಲ್ಪಿಸಲು, ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲು ಸಹಕಾರ ನೀಡಬೇಕು. ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಸಹಕಾರ ನೀಡುವ ಮೂಲಕ ಮಾದರಿ ಪಟ್ಟಣ ಪಂಚಾಯಿತಿಯಾಗಿ ಮಾಡಬೇಕು. ಅಗತ್ಯ ಯೋಜನೆಗಳನ್ನು ಆದ್ಯತೆ ಮೇಲೆ ಜಾರಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT